ಹಾವೇರಿ: ಹಿಂದುಳಿದ ವರ್ಗಗಳ ಜನರ ಅಭಿವೃದ್ಧಿಗಾಗಿ ಸ್ಥಾಪಿಸಿರುವ ನಿಗಮಗಳಿಗೆ ಹಣ ಬಿಡುಗಡೆ ಮಾಡದೇ ರಾಜ್ಯದ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ತೋರುತ್ತಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಸರ್ಕಾರದ ತಾರತಮ್ಯ ನೀತಿಯನ್ನು ಖಂಡಿಸಿದರು.
ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣವರ ಮಾತನಾಡಿ, ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದಿಂದ ಅಭಿವೃದ್ದಿ ಕಾರ್ಯಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ವಾಲ್ಮೀಕಿ ಹಗರಣ, ಮೂಡಾ ಹಗರಣದಲ್ಲಿ ತಮ್ಮ ಸ್ವಂತ ಲಾಭಕ್ಕಾಗಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹರಿಹಾಯ್ದರು.
ಅಹಿಂದ ಹೆಸರಿನ ಮೇಲೆ ಅಧಿಕಾರಕ್ಕೆ ಬಂದು ನಿಗಮಗಳಿಗೆ ಹಣ ಬಿಡುಗಡೆ ಮಾಡದೇ ಇರುವುದು ಅತ್ಯಂತ ನೋವಿನ ಸಂಗತಿ. ಹಿಂದಿನ ಬಿಜೆಪಿ ಸರ್ಕಾರ ದೇವರಾಜ ಅರಸು, ಒಕ್ಕಲಿಗ, ಮರಾಠ, ವಿಶ್ವಕರ್ಮ, ವೀರಶೈವ ಲಿಂಗಾಯತ, ನಿಜಶರಣ ಅಂಬಿಗರ ಚೌಡಯ್ಯ, ಸವಿತಾ ಸಮಾಜ, ಅಲೆಮಾರಿ ಅರೆ ಅಲೆಮಾರಿ, ಮಡಿವಾಳ ಮಾಚಿದೇವ ಮತ್ತು ಕಾಡುಗೊಲ್ಲ ಅಭಿವೃದ್ಧಿ ನಿಗಮಗಳಿಗೆ ಹಣ ಬಿಡುಗಡೆ ಮಾಡಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಿರ್ಲಕ್ಷ್ಯ ತೋರಿದೆ. ಮಕ್ಕಳ ಶೈಕ್ಷಣಿಕ ಸಾಲಕ್ಕಾಗಿ ೫೦೬೫ ಅರ್ಜಿಗಳು ಸಲ್ಲಿಕೆಯಾದರೂ ಒಂದು ಪೈಸೆ ಕೂಡ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.ರಾಜ್ಯ ಓಬಿಸಿ ಮೋರ್ಚಾ ಕಾರ್ಯದರ್ಶಿ ಸುಭಾಷ ಚವ್ಹಾಣ ಮಾತನಾಡಿದರು. ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಶರಣಮ್ಮ ಆಗಮಿಸಿ ಮನವಿ ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಂಜುಂಡೇಶ ಕಳ್ಳೇರ, ಡಾ. ಸಂತೋಷ ಆಲದಕಟ್ಟಿ, ವೆಂಕಟೇಶ ನಾರಾಯಣಿ, ಮುಖಂಡರಾದ ಪ್ರಭು ಹಿಟ್ನಳ್ಳಿ, ಲಲಿತಾ ಗುಂಡೇನಹಳ್ಳಿ, ಚೆನ್ನಮ್ಮ ಬ್ಯಾಡಗಿ, ಮಂಜುನಾಥ ಮಡಿವಾಳರ, ರುದ್ರೇಶ ಚಿನ್ನಣ್ಣನವರ, ಶಿವಯೋಗಿ ಹುಲಿಕಂತಿಮಠ ಇತರರು ಇದ್ದರು.