ದಾವಣಗೆರೆ: ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ನಿಯಂತ್ರಣ ವಿಧೇಯಕ-2025ನ್ನು ಸಂಪೂರ್ಣವಾಗಿ ವಿರೋಧಿಸುವುದಾಗಿ ಶ್ರೀರಾಮ ಸೇನೆ ಸಂಸ್ಥಾಪಕ, ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮಸೂದೆಯ ಪ್ರತಿಗಳನ್ನು ಹರಿದು ಹಾಕುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ನಿಯಂತ್ರಣ ಮಸೂದೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿರುವುದರ ಹಿಂದೆ ಹಿಂದೂ ಸಂಘಟನೆಗಳು, ಹಿಂದೂ ಮುಖಂಡರನ್ನು ಹತ್ತಿಕ್ಕುವ ಷಡ್ಯಂತ್ರವಿದೆ ಎಂದರು. ಇಂತಹದ್ದೊಂದು ಮಸೂದೆಯ ವ್ಯಾಖ್ಯಾನವಾದರೂ ಏನಿದೆ? ಈ ಮಸೂದೆಯ ಮಾನ್ಯತೆಯಾರೂ ಏನು? ಹಿಂದೂ ಸಂಘಟನೆಗಳು, ಹಿಂದೂ ಮುಖಂಡರನ್ನೇ ಗುರಿಯಾಗಿಸಿಕೊಂಡು ತಂದ ಮಸೂದೆ ಇದೆಯೆಂಬುದು ಸ್ಪಷ್ಟವಾಗಿದೆ. ಗೋ ಹತ್ಯೆ ವಿರುದ್ಧ ನಾವ್ಯಾರೂ ಧ್ವನಿ ಎತ್ತಬಾರದಾ? ಗೋ ಹಂತಕರ ವಿರುದ್ಧ ಹಿಂದೂ ಸಂಘಟನೆಗಳು, ಹಿಂದೂಗಳು ಹೋರಾಟವನ್ನು ನಡೆಸಿದರೆ ಅಂತವರ ವಿರುದ್ಧ ಸ್ವಯಂ ಪ್ರೇರಿತ ದೂರು ಹಾಕಿ, ಅದರ ದುರ್ಲಾಭ ಪಡೆಯುವ ಹುನ್ನಾರದ ಮಸೂದೆ ಇದಾಗಿದೆ. ರಾಜ್ಯ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಲಿ ಎಂದು ಆಗ್ರಹಿಸಿದರು. ಹಿಂದೂ ಹೆಣ್ಣು ಮಕ್ಕಳ ರಕ್ಷಣೆ ನಮ್ಮೆಲ್ಲಾ ಹಿಂದೂಗಳ ಹಕ್ಕು. ಹಿಂದೂ ಹೆಣ್ಣು ಮಕ್ಕಳಿಗೆ ಬುರ್ಖಾ ಹಾಕಿಸಿ, ಗೋಮಾಂಸ ತಿನ್ನಿಸುವುದು, ಲವ್ ಜಿಹಾದ್ ವಿರುದ್ಧ ನಾವ್ಯಾರೂ ಧ್ವನಿಯನ್ನೇ ಎತ್ತಬಾರದಾ? ಕ್ರೈಸ್ತರು ಹಿಂದೂಗಳನ್ನು ಮತಾಂತರ ಮಾಡಿಸುವುದನ್ನು ತಡೆದು, ಹಿಂದೂಗಳಲ್ಲಿ ಜಾಗೃತಿ ಮೂಡಿಸುವುದು ದ್ವೇಷ ಭಾಷಣವಾ? ಪ್ರಚೋದನೆಯಾ? ಯಾರಾದರೂ ಪ್ರಚೋದನೆ ಮಾಡಿದರೆ ಕೇಸ್ ಹಾಕುವುದು ಇದ್ದೇ ಇದೆ. ಈಗಿರುವ ಕಾಯ್ದೆಯಲ್ಲೇ ಇಂತಹ ಕೇಸ್‌ಗಳನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸುವಾಗ, ಮತ್ತೆ ಮಸೂದೆಯ ಅಗತ್ಯವೇನಿತ್ತು ಎಂದು ಕಿಡಿಕಾರಿದರು.
ಹಿಂದೂಗಳನ್ನೇ ಟಾರ್ಗೆಟ್ ಮಾಡಿ, ಇಂತಹ ಮಸೂದೆಯನ್ನು ಕಾಂಗ್ರೆಸ್ ಸರ್ಕಾರ ತರಲು ಹೊರಟಿದೆ. ಇಂತಹ ಮಸೂದೆಯನ್ನು ತೀವ್ರವಾಗಿ ವಿರೋಧಿಸುತ್ತೇವೆ. ಅನಧಿಕೃತವಾಗಿ ಮಸೀದಿ, ಚರ್ಚ್‌ಗಳನ್ನು ನಿರ್ಮಿಸುತ್ತಾರೆ. ಸರ್ಕಾರಿ, ಖಾಸಗಿ ಜಾಗವನ್ನೇ ಇಂತಹದ್ದಕ್ಕೆ ಕಬಳಿಸುತ್ತಾರೆ. ಈ ಜಾಗವನ್ನು ಕಾನೂನು ಬಾಹಿರವಾಗಿ ಕಬಳಿಸಿದ್ದಾರೆಂಬು ಹೇಳಬಾರದಾ? ಇದು ದೇಶದ ಸಂವಿಧಾನ ನೀಡಿರುವ ಸ್ವಾತಂತ್ರ್ಯದ ದೊಡ್ಡ ಹರಣವಾಗಿದೆ. ಇಂತಹದ್ದೊಂದು ಮಸೂದೆ ತರುವ ಮೂಲಕ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್‌ಗೆ ಕಾಂಗ್ರೆಸ್ ಸರ್ಕಾರ ಅವಮಾನಿಸಿದೆ ಎಂದು ದೂರಿದರು.ಸ್ವಾಮೀಜಿಗಳು, ಸಂತರು, ಗೋ ರಕ್ಷಣೆ ಬಗ್ಗೆ ಮಾತನಾಡಿದರೆ ಅದೂ ಮಸೂದೆ ಪ್ರಕಾರ ಅಕ್ಷಮ್ಯವೇ? ಹಿಂದೂಗಳಿಗೆ ಮಾರಕವಾದ ಇಂತಹ ಕಾನೂನನ್ನು ಜಾರಿಗೊಳಿಸದಂತೆ ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ, ಜೆಡಿಎಸ್ ನಾಯಕರು ಧ್ವನಿ ಎತ್ತಬೇಕು. ನಾವೂ ಸಹ ಶೀಘ್ರವೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವಿ.ವಿಜಯೇಂದ್ರ, ವಿಪಕ್ಷ ನಾಯ ಆರ್.ಅಶೋಕ ಸೇರಿದಂತೆ ಉಭಯ ಪಕ್ಷಗಳ ನಾಯಕರನ್ನು ಭೇಟಿ ಮಾಡಿ, ಅಧಿವೇಶನದಲ್ಲಿ ಇಂತಹ ಮಸೂದೆ ಜಾರಿಗೊಳ್ಳದಂತೆ ನೋಡಿಕೊಳ್ಳುವಂತೆ ಮನವಿ ಮಾಡಿಲಿದ್ದೇವೆ ಎಂದು ತಿಳಿಸಿದರು. ಇನ್ನು ಕರ್ನಾಟಕ ಸಾಮಾಜಿಕ ಬಹಿಷ್ಕಾರ(ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ವಿಧೇಯಕ-2025ನ್ನು ನಾವು ಸ್ವಾಗತಿಸುತ್ತೇವೆ. ಜಾತಿ ದ್ವೇಷ, ಅಸ್ಪೃಶ್ಯತೆ, ಬಹಿಷ್ಕಾರ ಹೀಗೆ ಹೀನಾಯ, ಕ್ರೌರ್ಯ ಕೃತ್ಯಗಳಿಗೆ ಕಡಿವಾಣ ಹಾಕುವ ಇಂತಹ ಮಸೂದೆಗೆ ನಮ್ಮ ಸಹಮತವಿದೆ. ದಂಡ ಹಾಕುವುದು, ಬಹಿಷ್ಕಾರ ಹಾಕುವುದು, ಮಸೀದಿಗಳ ಒಳಗೆ ಮಹಿಳೆಯರಿಗೆ ಪ್ರವೇಶ ಇಲ್ಲದಿರುವುದು, ಚರ್ಚ್‌ಗಳಲ್ಲಿ ಹರಿಜನರಿಗೆ ಪ್ರವೇಶ ಇಲ್ಲದ್ದು, ಇಂತಹ ಜನರಿಗಾಗಿ ಪ್ರತ್ಯೇಕ ಚರ್ಚ್ ಇಂತಹದ್ದಕ್ಕೆಲ್ಲಾ ಕಡಿವಾಣ ಹಾಕಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ಪರಶುರಾಮ ನಡುಮನಿ, ಯಶವಂತ, ಶ್ರೀಧರ್, ಸಾಗರ್, ಮಧು ಇತರರು ಇದ್ದರು. ಕ್ರಿಸ್ಮಸ್ ರಜೆ ರದ್ದುಪಡಿಸಲು ಹೋರಾಟದಾವಣಗೆರೆ: ಕ್ರಿಸ್ಮಸ್ ಹಬ್ಬಕ್ಕೆ ಡಿ.25ಕ್ಕೆ ಒಂದು ದಿನ ಮಾತ್ರ ರಾಜ್ಯ ಸರ್ಕಾರ ರಜೆ ಘೋಷಣೆ ಮಾಡಿದ್ದರೂ ಕ್ರೈಸ್ತರ ಶಿಕ್ಷಣ ಸಂಸ್ಥೆಗಳು 10 ದಿನಗಳ ಕಾಲ ರಜೆ ನೀಡಿರುವುದನ್ನು ರದ್ಧುಪಡಿಸುವಂತೆ ಸರ್ಕಾರಕ್ಕೆ ಶ್ರೀರಾಮ ಸೇನೆ ಒತ್ತಾಯಿಸಿದೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ, ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿದ ನಂತರ ಸಾಶಿಇ ಉಪ ನಿರ್ದೇಶಕರ ಕಚೇರಿಗೆ ತೆರಳಿದ ಸಂಘಟನೆ ಮುಖಂಡರು, ಕಾರ್ಯಕರ್ತರು ಡಿಡಿಪಿಐ ಮೂಲಕ ಶಿಕ್ಷಣ ಇಲಾಖೆ, ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದರು. ಈ ವೇಳೆ ಮಾತನಾಡಿದ ಪ್ರಮೋದ ಮುತಾಲಿಕ್, ಬಹುಸಂಖ್ಯಾತ ಹಿಂದೂಗಳೇ ಕ್ರೈಸ್ತರ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿದ್ದು, ಹಿಂದೂಗಳೇ ಹೆಚ್ಚಾಗಿ ಕೆಲಸ ಮಾಡುತ್ತಿದ್ದರೂ ದಸರಾಗೆ ರಜೆ ಕೊಡುವುದಿಲ್ಲ. ಆದರೆ, ಬ್ರಿಟಿಷರು ಭಾರತ ಬಿಟ್ಟು ತೊಲಗೆ 79 ವರ್ಷಗಳೇ ಕಳೆದರೂ ಇಂದಿಗೂ ಗುಲಾಮಿತನದ ಮನಸ್ಥಿತಿಯನ್ನು ಹಿಂದೂಗಳ ಮೇಲೆ ಹೇರುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ನಿಯಮವನ್ನೇ ಗಾಳಿಗೆ ತೂರಿ 10 ದಿನಗಳ ಕಾಲ ಕ್ರಿಸ್ಮಸ್ ರಜೆ ನೀಡುತ್ತಿರುವುದು ಸರಿಯಲ್ಲ. ದಸರಾ ವೇಳೆಯೇ ಕ್ರೈಸ್ತರ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೆ ಪರೀಕ್ಷೆ ನಡೆಸುತ್ತಾರೆ. ಹಿಂದೂ ಸಂಸ್ಕೃತಿಯನ್ನು ಹಾಳು ಮಾಡಲು ಹೀಗೆ ಮಾಡುತ್ತಾರೆ. ಇದರ ವಿರುದ್ಧ ಶಿಕ್ಷಣ ಇಲಾಖೆ, ರಾಜ್ಯ ಸರ್ಕಾರಕ್ಕೆ ಡಿಡಿಪಿಐ ಮೂಲಕ ಮನವಿ ಅರ್ಪಿಸುತ್ತಿದ್ದೇವೆ. ನಮ್ಮ ಮನವಿಗೆ ಸ್ಪಂದಿಸದಿದ್ದರೆ ನ್ಯಾಯಾಲಯದಲ್ಲೂ ಇದನ್ನು ಪ್ರಶ್ನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.ದೇಶದಲ್ಲಿ ಗೋಮಾಂಸ ನಿಷೇಧಿಸುವಂತೆ ಒತ್ತಾಯ ಮಾಡಿದರೆ ಕೋಣ, ಎಮ್ಮೆಯ ಮಾಂಸ ರಫ್ತು ಮಾಡಲಾಗುತ್ತಿದೆಯೆಂಬ ತಪ್ಪು ಮಾಹಿತಿ ನೀಡಲಾಗುತ್ತಿದೆ. ರಫ್ತಾಗುವ ಮಾಂಸದಲ್ಲಿ ಎಲ್ಲವೂ ಕೋಣ, ಎಮ್ಮೆಯದ್ದಲ್ಲ. ಹಾಗಾಗಿ ಗೋವುಗಳನ್ನು ರಾಷ್ಟ್ರೀಯ ಪ್ರಾಣಿಯೆಂದು ಕೇಂದ್ರ ಸರ್ಕಾರ ಘೋಷಣೆ ಮಾಡಬೇಕು. ಕೋಣ, ಎಮ್ಮೆಗಳನ್ನೂ ಹಸುಗಳೆಂದೇ ಪರಿಗಣಿಸಲಿ. ದೇಶದಿಂದ ಗೋಮಾಂಸ, ಎಮ್ಮೆ-ಕೋಣದ ಮಾಂಸ ರಫ್ತು ಮಾಡುವುದನ್ನೂ ನಿಷೇಧಿಸಲಿ.
- ಪ್ರಮೋದ ಮುತಾಲಿಕ್, ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ , ಶ್ರೀರಾಮ ಸೇನೆ.