ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿರುವ ರಾಜ್ಯಸರ್ಕಾರದ ಧೋರಣೆ ಖಂಡಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಮತ್ತು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ನೇತೃತ್ವದಲ್ಲಿ ಪಾದಯಾತ್ರೆ ನಡೆಸಿದ ರೈತ ಮಹಿಳೆಯರು ಸೋಮವಾರ ಅಂತಿಮ ಅಧಿಸೂಚನೆ ಪ್ರತಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು
ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿರುವ ರಾಜ್ಯಸರ್ಕಾರದ ಧೋರಣೆ ಖಂಡಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಮತ್ತು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ನೇತೃತ್ವದಲ್ಲಿ ಪಾದಯಾತ್ರೆ ನಡೆಸಿದ ರೈತ ಮಹಿಳೆಯರು ಸೋಮವಾರ ಅಂತಿಮ ಅಧಿಸೂಚನೆ ಪ್ರತಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ತಿಮ್ಮೇಗೌಡನದೊಡ್ಡಿ ಗ್ರಾಮದಿಂದ ಕಾಲ್ನಡಿಗೆ ಪ್ರಾರಂಭಿಸಿದ ರೈತ ಮಹಿಳೆಯರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಶಾಸಕ ಬಾಲಕೃಷ್ಣ ಹಾಗೂ ಜಿಬಿಡಿಎ ವಿರುದ್ಧ ಘೋಷಣೆ ಕೂಗುತ್ತಾ ಬೈರಮಂಗಲ ವೃತ್ತಕ್ಕೆ ಆಗಮಿಸಿ ಅಂತಿಮ ಅಧಿಸೂಚನೆ ಪ್ರತಿಗಳಿಗೆ ಬೆಂಕಿ ಹಚ್ಚಿ ಬಲವಂತದ ಭೂ ಸ್ವಾಧೀನದ ವಿರುದ್ಧ ಆಕ್ರೋಶ ಹೊರ ಹಾಕಿದರು.
ರೈತರನ್ನು ಉದ್ದೇಶಿಸಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ
ದೇವಿ ಭರತ್‌ರಾಜ್, ಈ ಹಿಂದೆ ಮುಖ್ಯಮಂತ್ರಿಯಾಗಿದ್ದವರು ಟೌನ್‌ಪ್‌ಗೆ ಅಡಿಪಾಯ ಹಾಕಿಕೊಟ್ಟರು. ಅದನ್ನು ಕಾಂಗ್ರೆಸ್ ಸರ್ಕಾರ ಮುಂದುವರಿಸಿದೆ. ಇಲ್ಲಿವರೆಗೆ ಆಡಳಿತ ನಡೆಸಿದವರೆಲ್ಲರೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೆಲ್ಲರು ಕಾರ್ಪೋರೇಟ್ ಕುಳಗಳ ಹಿತ ಬಯವಸುವರೇ ಹೊರತು ರೈತರ ಹಿತವನ್ನಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾರ್ಪೋರೇಟ್ ಕುಳಗಳು ರಾಜಕೀಯ ಪಕ್ಷಗಳಿಗೆ ಕೋಟ್ಯಂತರ ರುಪಾಯಿ ದೇಣಿಗೆ ಕೊಡುತ್ತಾರೆ. ಹೀಗಾಗಿ
ಆಳುವ ಸರ್ಕಾರಗಳು ಕಾರ್ಪೋರೇಟ್ ಕುಳಗಳಿಗೆ ರೈತರನ್ನು ಒತ್ತೆಯಾಳಾಗಿ ಮಾಡಲು ಹೊರಟಿವೆ. ಆದರೆ, ಕೃಷಿಯನ್ನೇ ಅವಲಂಬಿಸಿರುವ ರೈತರು-ಕೂಲಿ ಕಾರ್ಮಿಕರು ನಿಮ್ಮನ್ನು ಶಾಸಕರು, ಸಂಸದರು ಹಾಗೂ ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ ಎಂಬುದನ್ನು ಮರೆಯಬೇಡಿ. ನೀವು ನಮ್ಮ ಭೂಮಿ ಕಸಿದುಕೊಳ್ಳಲು ಬಂದರೆ ರೈತ ಮಹಿಳೆಯರು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಕಸದ ಬುಟ್ಟಿಗೆ ಬಿಸಾಡ್ತಾರೆ:
ದೇಶದಲ್ಲಿ ರೈತ ಚಳವಳಿಗೆ ಸುದೀರ್ಘ ಇತಿಹಾಸ ಇದೆ. ಪ್ರಧಾನಿ ಮೋದಿಯವರೇ ರೈತರ ಹೋರಾಟಕ್ಕೆ ಮಣಿದು ಕರಾಳ ಕೃಷಿ ಮಸೂದೆಗಳನ್ನು ಹಿಂಪಡೆದರು. ಅಷ್ಟೇ ಅಲ್ಲದೆ ಈ ಹಿಂದೆ ಗುಂಡೂರಾವ್ ನೇತೃತ್ವದ ಸರ್ಕಾರ ರೈತರು ರಸಗೊಬ್ಬರ ಕೇಳಿದಾಗ ಗೋಲಿಬಾರ್ ಮಾಡಿಸಿದರು. ಆಗ ರೈತರು ಗುಂಡೂರಾವ್ ಸರ್ಕಾರವನ್ನು ಗುಡಿಸಿ ಗುಡ್ಡೆ ಮಾಡಿ ಕಸದ ಬುಟ್ಟಿಗೆ ಎಸೆದರು. ಬಿಡದಿ ಟೌನ್ ಶಿಪ್ ಯೋಜನೆ ಜಾರಿಗೆ ಪಟ್ಟು ಹಿಡಿದರೆ ಡಿಕೆಶಿ ಸರ್ಕಾರವನ್ನು ರೈತರು ಮುಂದಿನ ಚುನಾವಣೆಯಲ್ಲಿ ಕಸದ ಬುಟ್ಟಿಗೆ ಎಸೆಯುತ್ತಾರೆ. ದೊಡ್ಡ ಕಟ್ಟಡಗಳ ನಿರ್ಮಾಣದಿಂದ ದೇಶ ಉದ್ಧಾರವಾಗುವುದಿಲ್ಲ. ಬದಲಿಗೆ ಮಾನವನ ಅಭಿವೃದ್ಧಿ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ, ಮಕ್ಕಳಿಗೆ ಶಿಕ್ಷಣ, ಉದ್ಯೋಗ ಕೊಡಬೇಕು. ಆಸ್ಪತ್ರೆಗಳನ್ನು ತೆರೆಯುವಂತಹ ಕೆಲಸಗಳಿಂದ ಮಾತ್ರ ದೇಶ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು.
ಡಿಕೆಶಿಯಿಂದ ಸರ್ವಾಧಿಕಾರಿ ಧೋರಣೆ:
ರೈತ ಮಹಿಳೆ ಜಾಹ್ನವಿ ಮಾತನಾಡಿ, ಈ ಭಾಗದ ರೈತರು ಹೈನುಗಾರಿಕೆ ಜೊತೆಗೆ ಕೃಷಿಯನ್ನು ಅವಲಂಬಿಸಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಆದರೀಗ ರಾಜ್ಯಸರ್ಕಾರ ಬಿಡದಿ ಟೌನ್‌ಶಿಪ್ ಯೋಜನೆ ಹೆಸರಿನಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಕಸಿದುಕೊಂಡು ರೈತರ ಮೇಲೆ ಗದಾ ಪ್ರಹಾರ ನಡೆಸಲು ಮುಂದಾಗಿದೆ. ಇದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರರ ಸರ್ವಾಧಿಕಾರಿ ಧೋರಣೆಗೆ ಸಾಕ್ಷಿ ಎಂದು ಟೀಕಿಸಿದರು.
ಒಂದು ಟೌನ್ ಶಿಪ್ ನಿರ್ಮಾಣವಾಗಲು ಕನಿಷ್ಠ 20 ವರ್ಷಗಳಾದರೂ ಬೇಕು. ಅಲ್ಲಿವರೆಗೆ ಡಿ.ಕೆ.ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಿರಲ್ಲ. ಉಳಿದಿರುವ 2 ವರ್ಷದೊಳಗೆ ಏನನ್ನು ಮಾಡಲು ಆಗುವುದಿಲ್ಲ. ಇದರಲ್ಲಿ ರಿಯಲ್ ಎಸ್ಟೇಟ್ ದಂಧೆ ಮೂಲಕ ಹಣ ಕಬಳಿಸುವ ಹುನ್ನಾರ ಅಡಗಿದೆ ಎಂದು ಜಾಹ್ನವಿ ದೂರಿದರು.
ಈ ವೇಳೆ ಜನವಾದಿ ಮಹಿಳಾ ಸಂಘಟನೆ ಮಂಡ್ಯ ಜಿಲ್ಲಾಧ್ಯಕ್ಷೆ ಲತಾ, ಕಾರ್ಯದರ್ಶಿ ಸುಶೀಲಾ, ಸದಸ್ಯೆ ಶೋಭಾ, ಮಳವಳ್ಳಿ ತಾಲೂಕು ಅಧ್ಯಕ್ಷೆ ಪ್ರೇಮಾ, ಎಸ್‌ಎಫ್‌ಐ ಮುಖಂಡ ಶಿವಪ್ಪ. ರೈತ ಮಹಿಳೆಯರಾದ ಜಯಮ್ಮ, ಭಾಗ್ಯ, ಸುಮಿತ್ರ, ನೇತ್ರಾ ಮತ್ತಿತರರು ಉಪಸ್ಥಿತರಿದ್ದರು.
ಕೋಟ್ ..................
ಈ ಭೂಮಿಯೊಳಗೆ ರೈತರ ರಕ್ತ, ಬೆವರು, ಕನಸು, ಮಕ್ಕಳ ಭವಿಷ್ಯ ಅಡಗಿದೆ. ಅವೆಲ್ಲವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಸಿದುಕೊಳ್ಳಲು ಹೋಗಬೇಡಿ. ಶೇಕಡ 90ರಷ್ಟು ರೈತರು ಭೂಮಿ ಕೊಡುವುದಿಲ್ಲ ಎಂದು ಹೋರಾಟ ಮಾಡುತ್ತಿದ್ದಾರೆ. ಬಲವಂತವಾಗಿ ಭೂ ಸ್ವಾಧೀನ ಮಾಡಿಕೊಳ್ಳುವುದು ಸಂವಿಧಾನ ವಿರೋಧಿ. ಭೂಮಿ ಉಳಿಸಿಕೊಳ್ಳಲು ರೈತ ಕುಟುಂಬ ಜಾನುವಾರುಗಳ ಸಮೇತ ಜೈಲಿಗೆ ಹೋಗಲು ಸಿದ್ಧರಿದ್ದೇವೆ.
-ದೇವಿ ಭರತ್ ರಾಜ್, ರಾಜ್ಯ ಪ್ರಧಾನ ಕಾರ್ಯದರ್ಶಿ, ಜನವಾದಿ ಮಹಿಳಾ ಸಂಘಟನೆ
ಕೋಟ್ ..................
ರೈತರ ಒಪ್ಪಿಗೆ ಪಡೆಯದೆ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಅಂತಿಮ ಅಧಿಸೂಚನೆಗೆ ಯಾವುದೇ ಮೌಲ್ಯ ಇಲ್ಲ. ಈ ಅಂತಿಮ ಅಧಿಸೂಚನೆ ರೈತರ ಪಾಲಿಗೆ ಮರಣ ಶಾಸನ ಇದ್ದಂತೆ. ಹಾಗಾಗಿಯೇ ಅಧಿಸೂಚನೆ ಪ್ರತಿಗಳಿಗೆ ಬೆಂಕಿ ಹಚ್ಚಿದ್ದೇವೆ. ಅದು ಬೆಂಕಿಯ ಕಿಡಿಯಲ್ಲ, ರೈತರ ಹೋರಾಟದ ಕಿಚ್ಚು. ಆ ಬೆಂಕಿ ಕಿಡಿ ರಾಜ್ಯಸರ್ಕಾರವನ್ನು ಸುಡಲಿದೆ.
- ಜಾಹ್ನವಿ, ರೈತ ಮಹಿಳೆ
15ಕೆಆರ್ ಎಂಎನ್ 2.ಜೆಪಿಜಿ
ಬೈರಮಂಗಲ ವೃತ್ತದಲ್ಲಿ ರೈತ ಮಹಿಳೆಯರು ಬಿಡದಿ ಟೌನ್ ಶಿಪ್ ಯೋಜನೆ ಭೂಸ್ವಾಧೀನದ ಅಂತಿಮ ಅಧಿಸೂಚನೆ ಪ್ರತಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.