ಕನ್ನಡಪ್ರಭ ವಾರ್ತೆ ಮಧುಗಿರಿ
ರಾಜ್ಯದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ 75ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಮಧುಗಿರಿ ಮೆಟ್ರಿಕ್ ನಂತರದ ಡಾ.ಬಿ.ಆರ್.ಅಂಬೇಡ್ಕರ್ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿ ವಸತಿ ನಿಲಯಗಳಿಗೆ ಕಂಚಿನ ಬುದ್ಧ ವಿಗ್ರಹಗಳನ್ನು ನೀಡಲಾಯಿತು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಕುರಿತು ರೋಟರಿ ಮಾಜಿ ಅಧ್ಯಕ್ಷ ಎಂ.ಶಿವಲಿಂಗಪ್ಪ ಮಾತನಾಡಿ, ಪರಮೇಶ್ವರ ಅವರು ರಾಜಕೀಯ ಜೀವನ ಪ್ರಾರಂಭವಾದುದೆ ಮಧುಗಿರಿ ಕ್ಷೇತ್ರದಿಂದ, ಅಂದಿನಿಂದ ಈವರೆಗೆ ಅವರು ಸಾಗಿ ಬಂದ ರಾಜಕೀಯ ಸಾಧನೆಯ ಹೆಜ್ಜೆ ಗುರುತುಗಳು ಇತಿಹಾಸದಲ್ಲಿವೆ. ಪರಮೇಶ್ವರ್ ಅವರು ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಪ್ರಾಮಾಣಿಕವಾಗಿ ರಾಜಕೀಯದಲ್ಲಿ ಕಪ್ಪು ಚುಕ್ಕೆ ಇಲ್ಲದೆ ಜನಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ. ಆ ಬುದ್ಧ ಇನ್ನೂ ಜನಪರವಾಗಿ ಸೇವೆ ಮಾಡಲು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಶುಭ ಕೋರಿದರು.
ಸುವರ್ಣಮುಖಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆರ್.ಕೆ.ದೃವಕುಮಾರ್,ಪರಮೇಶ್ವರ ಅವರ ರಾಜಕೀಯ ಸೇವೆ ಸುಗಮವಾಗಿ ಸಾಗಲಿ ಎಂದ ಅವರು ಇಡೀ ರಾಜ್ಯದ 75 ಅಂಬೇಡ್ಕರ್ ವಸತಿ ನಿಲಯಗಳಿಗೆ ಬುದ್ಧ ವಿಗ್ರಹಗಳನ್ನು ನೆನಪಿಗಾಗಿ ವಿತರಿಸಲಾಗಿದೆ ಎಂದರು.ಬುದ್ಧ ವಿಗ್ರಹಗಳನ್ನು ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪರಾಗಿ ಸೇವೆ ಸಲ್ಲಿಸುತ್ತಿರುವ ಪ್ರೊ.ಡಾ.ಮುರುಳೀಧರ ,ಕೆಪಿಎಸ್‌ಸಿ ಸದಸ್ಯೆ ಡಾ.ಕಾವಲಮ್ಮ,ದಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಪ್ರಸಾದ್ ಅಬ್ಬಯ್ಯ ಮತ್ತು ಬೆಂಗಳೂರಿನ ಕೋಮಲ ಇವರುಗಳು ಆಸಕ್ತಿ ವಹಿಸಿ ವಿಗ್ರಹ ವಿತರಿಸುವ ಕಾರ್ಯ ನಡೆಸಿದ್ದಾರೆ.
ಕಾರ್ಯಕ್ರಮದಲ್ಲಿ ಮೇಲ್ವಿಚಾರಕ ಚಿಕ್ಕರಂಗಪ್ಪ,ಕಸಾಪುರ ಲಕ್ಷ್ಮೀನಾರಾಯಣಬಾಬು,ಚಲವಾದಿ ಮುಖಂಡರಾದ ನೇರಳೆಕೆರ ಅಂಬೇಡ್ಕರ್,ನಾಗರಾಜು.ಎಂ.ಜಿ.ಪ್ರಕಾಶ್,ಜಗನ್ನಾಥ್,ನಾಗರಾಜು ಹಾಗೂ ವಿದ್ಯಾರ್ಥಿಗಳು ಇದ್ದರು.