ತೆರವಿಗೆ ಆಕ್ರೋಶ, ಕಾರ್ಯಾಚರಣೆ ಅರ್ಧಕ್ಕೆ ಮೊಟಕು

KannadaprabhaNewsNetwork | Published : Jul 17, 2024 12:49 AM

ಸಾರಾಂಶ

ಬೀದಿ ಅಂಗಡಿಗಳ ತೆರವಿಗೆ ಮುಂದಾಗಿದ್ದ ಪುರಸಭೆ ಅಧಿಕಾರಿಗಳು. ಶುಕ್ರವಾರ ಮತ್ತೆ ಕಾರ್ಯಾಚರಣೆ ನಡೆಸಲು ತೀರ್ಮಾನ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣದ ವಿಜಯಪುರ ಮುಖ್ಯರಸ್ತೆಯಲ್ಲಿರುವ ಹಳೆ ನ್ಯಾಯಾಲಯ ಎದುರಿನ ಪಾದಚಾರಿ (ಫುಟ್‌ಪಾತ್‌) ರಸ್ತೆಯ ಮೇಲಿರುವ ಬೀದಿ ಅಂಗಡಿಗಳನ್ನು ಪುರಸಭೆಯಿಂದ ತೆರವುಗೊಳಿಸುವ ಕಾರ್ಯಾಚರಣೆ ಮಂಗಳವಾರ ಬೆಳ್ಳಂಬೆಳಗ್ಗೆ ಆರಂಭವಾಯಿತು. ನಂತರ ಜನರ ವಿರೋಧದಿಂದಾಗಿ ಅಧಿಕಾರಿಗಳು ಕಾರ್ಯಾಚರಣೆಯನ್ನು ಶುಕ್ರವಾರಕ್ಕೆ ಮುಂದೂಡಿದರು.

ಹಳೆ ನ್ಯಾಯಾಲಯದ ಎದುರುಗಡೆ ಇದ್ದ ಎರಡು ಬೀದಿ ಬದಿಯ ಅಂಗಡಿಗಳನ್ನು ತೆರವುಗೊಳಿಸಲಾಯಿತು. ನಂತರ ತಾಲೂಕು ಪಂಚಾಯಿತಿ ಎದುರಿಗೆ ಇದ್ದ ಎರಡು ಅಂಗಡಿಗಳನ್ನೂ ತೆರವುಗೊಳಿಸಲಾಯಿತು. ಈ ಕಾರ್ಯಾಚರಣೆ ಸುದ್ದಿ ತಿಳಿಯುತ್ತಿದ್ದಂತೆ ಬೀದಿ ಬದಿಯ ವ್ಯಾಪಾರಸ್ಥರು ಸೇರಿದಂತೆ ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿದರು. ಸ್ಥಳಕ್ಕೆ ಆಗಮಿಸಿದ್ದ ಪುರಸಭೆ ಹಿರಿಯ ಸದಸ್ಯ ನೀಲಪ್ಪ ನಾಯಕ ಅವರು ಪುರಸಭೆ ಮುಖ್ಯಾಧಿಕಾರಿಗೆ ಯಾಕೆ ಬೀದಿ ಬದಿಯ ಅಂಗಡಿಗಳನ್ನು ತೆರವು ಮಾಡುತ್ತಿದ್ದೀರಿ? ನಿಮ್ಮ ಹತ್ತಿರ ಯಾವ ಆದೇಶವಿದೆ? ಒಮ್ಮೆಲೆ ಈ ರೀತಿಯಾಗಿ ಅಂಗಡಿಗಳನ್ನು ತೆರವುಗೊಳಿಸಬಾರದು ಎಂದು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಇವರೊಂದಿಗೆ ಕೆಲ ಸಾರ್ವಜನಿಕರು ಕೂಡ ಜೊತೆಯಾದರು. ಕೆಲ ಹೊತ್ತು ಗೊಂದಲದ ವಾತಾವರಣ ಸೃಷ್ಟಿಯಾಯಿತು. ನಂತರ ಪುರಸಭೆ ಅಧಿಕಾರಿಗಳಿಗೆ ಏನು ಮಾಡಬೇಕೆಂಬುವುದು ತೋಚದಾಯಿತು.

ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಮಾತನಾಡಿ, ನಮ್ಮ ಮೇಲಾಧಿಕಾರಿಗಳು ಬೀದಿ ಬದಿಯ ಅಂಗಡಿಗಳನ್ನು ತೆರವುಗೊಳಿಸಲು ಆದೇಶ ಮಾಡಿದ್ದಾರೆ. ಈ ಕುರಿತು ಈಗಾಗಲೇ ಬೀದಿ ಬದಿ ಅಂಗಡಿಗಳ ವ್ಯಾಪಾರಸ್ಥರಿಗೆ ಮಾಹಿತಿ ನೀಡಲಾಗಿದೆ. ನಾವು ಕಾನೂನು ಪಾಲಿಸುತ್ತಿದ್ದೇವೆ ಎಂದು ಹೇಳಿದರೂ ನೀಲಪ್ಪ ನಾಯಕ ಅವರು ನೀವು ಕಾನೂನು ಪ್ರಕಾರ ಕಾರ್ಯಾಚರಣೆ ಮಾಡಬೇಕೆಂದು ಒತ್ತಾಯಿಸಿದರು.

ನೀಲಪ್ಪ ನಾಯಕ ಮಾತನಾಡಿ, ಪಟ್ಟಣದ ಬೀದಿ ಬದಿಯ ಅಂಗಡಿಗಳಿಂದ ಸಾವಿರಕ್ಕೂ ಹೆಚ್ಚು ಜನರು ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇದೀಗ ಪುರಸಭೆ ಅಧಿಕಾರಿಗಳು ಅಂಗಡಿಗಳನ್ನು ತೆರವುಗೊಳಿಸಿದರೆ ಸಾವಿರಾರು ಜನರ ಜೀವನ ಬೀದಿಗೆ ಬರುತ್ತದೆ. ಅಧಿಕಾರಿಗಳು ವ್ಯಾಪಾರಸ್ಥರಿಗೆ ರಸ್ತೆಗೆ ಬಾರದಂತೆ ತಮ್ಮ ವ್ಯಾಪಾರ ವಹಿವಾಟು ಮಾಡಿಕೊಳ್ಳಲು ಅವಕಾಶ ನೀಡಬೇಕು. ಬೀದಿ ಬದಿಯ ಅಂಗಡಿಗಳ ತೆರವು ಕಾರ್ಯಾಚರಣೆ ಕೈಬಿಟ್ಟರೆ ಸಾವಿರ ಬಡಜನರು ತಮ್ಮ ಜೀವನ ನಿರ್ವಹಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಬೀದಿ ಬದಿಯ ವ್ಯಾಪಾರಸ್ಥರದೊಂದಿಗೆ ಪ್ರತಿಭಟನೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಮಾತನಾಡಿ, ಪಟ್ಟಣದ ಪಾದಚಾರಿ ರಸ್ತೆ ಮೇಲಿರುವ ಅನಧಿಕೃತ ಬೀದಿ ಬದಿಯ ಅಂಗಡಿಗಳನ್ನು ತೆರವುಗೊಳಿಸುವಂತೆ ನಮ್ಮ ಮೇಲಾಧಿಕಾರಿಗಳಿಂದ ಆದೇಶವಾಗಿದೆ. ಈ ನಿಟ್ಟಿನಲ್ಲಿ ಮಂಗಳವಾರ ನಮ್ಮ ಸಿಬ್ಬಂದಿ ಜತೆಗೆ ತೆರವು ಕಾರ್ಯಾಚರಣೆ ಮಾಡಲು ಮುಂದಾಗಿದ್ದೇವೆ. ಕೆಲ ವ್ಯಾಪಾರಸ್ಥರು ನಮಗೆ ಮಾಹಿತಿ ನೀಡಿಲ್ಲ ಎಂದು ಹೇಳುತ್ತಿದ್ದಾರೆ. ಅನಧಿಕೃತ ಅಂಗಡಿಗಳಿಗೆ ನಾವು ಮಾಹಿತಿ ನೀಡುವ ಅಗತ್ಯವಿಲ್ಲ. ಇಲ್ಲಿ ಸೇರಿದ ಪುರಸಭೆ ಹಿರಿಯ ಸದಸ್ಯ ನೀಲಪ್ಪ ನಾಯಕ ಅವರು ಹೇಳಿದ ಮಾತಿಗೆ ಗೌರವ ಕೊಟ್ಟು ಹಾಗೂ ಮೊಹರಂ ಹಬ್ಬ ಇರುವುದರಿಂದ ಬೀದಿ ಬದಿಯ ವ್ಯಾಪಾರಸ್ಥರಿಗೆ ತಮ್ಮ ಅನಧಿಕೃತ ಅಂಗಡಿಗಳನ್ನು ತೆರವು ಮಾಡಿಕೊಳ್ಳಲು ಎರಡು ದಿನಗಳ ಕಾಲಾವಕಾಶ ನೀಡಲಾಗುವುದು. ನಾವು ಶುಕ್ರವಾರ ತೆರವು ಕಾರ್ಯಾಚರಣೆ ಮುಂದುವರಿಸುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಆರೋಗ್ಯ ನಿರೀಕ್ಷಕ ಮಹೇಶ ಹಿರೇಮಠ, ಎಎಸ್‌ಐ ಸಾರವಾಡ, ಪುರಸಭೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಬೀದಿ ಬದಿಯ ವ್ಯಾಪಾರಸ್ಥರಾದ ರಮೇಶ ಮಸಬಿನಾಳ, ವಿರೇಶ ಹಂಗರಗಿ, ಆರ್.ಜಿ.ಮಡಿವಾಳರ, ಸಂತೋಷ ನಂದ್ಯಾಳ, ದಯಾನಂದ ರಾಠೋಡ, ಸುನೀಲ ನಾಯಕ, ಸಿದ್ದಯ್ಯ ಒಡೆಯರ, ರಾಜು ಮುಳವಾಡ ಸೇರಿದಂತೆ ಇತರರು ಇದ್ದರು.

--------

ನಾನು ಇಲ್ಲದೇ ಇರುವಾಗ ನನ್ನ ಅಂಗಡಿಯನ್ನು ತೆಗೆದು ಬೇರೆಡೆ ಇಟ್ಟಿದ್ದಾರೆ. ನಾನು ಇದೇ ಅಂಗಡಿಯಿಂದ ಜೀವನ ಮಾಡುತ್ತಿದ್ದೇನೆ. ಇದು ಹೋದರೆ ನನ್ನ ಜೀವನ ನಡೆಸುವುದು ದುಸ್ತರವಾಗುತ್ತದೆ.

- ಬೋರವ್ವ ಮಣ್ಣೂರ, ಬೀದಿ ಬದಿಯಲ್ಲಿ ಅಂಗಡಿ ಹಾಕಿಕೊಂಡಿರುವ ವೃದ್ಧೆಅನಧಿಕೃತ ಅಂಗಡಿಗಳಿಗೆ ನಾವು ಮಾಹಿತಿ ನೀಡುವ ಅಗತ್ಯವಿಲ್ಲ. ಮೊಹರಂ ಹಬ್ಬ ಇರುವುದರಿಂದ ಬೀದಿ ಬದಿಯ ವ್ಯಾಪಾರಸ್ಥರಿಗೆ ತಮ್ಮ ಅನಧಿಕೃತ ಅಂಗಡಿಗಳನ್ನು ತೆರವು ಮಾಡಿಕೊಳ್ಳಲು ಎರಡು ದಿನಗಳ ಕಾಲಾವಕಾಶ ನೀಡಲಾಗುವುದು. ನಾವು ಶುಕ್ರವಾರ ತೆರವು ಕಾರ್ಯಾಚರಣೆ ಮುಂದುವರಿಸುತ್ತೇವೆ.

- ಎಚ್.ಎಸ್.ಚಿತ್ತರಗಿ, ಪುರಸಭೆ ಮುಖ್ಯಾಧಿಕಾರಿ

Share this article