ಅಮಿತ್ ಶಾ ವಿರುದ್ಧ ಕೋಟೆ ನಾಡಲ್ಲಿ ಆಕ್ರೋಶ

KannadaprabhaNewsNetwork | Published : Dec 21, 2024 1:15 AM

ಸಾರಾಂಶ

ಚಿತ್ರದುರ್ಗ: ಅಂಬೇಡ್ಕರ್ ಹೆಸರೇಳುವ ಬದಲು ದೇವರನ್ನು ಜಪಿಸಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆಂದು ಕೇಂದ್ರ ಗೃಹ ಸಚಿವ ಅಮಿತ್‍ ಶಾ ಹೇಳಿದರೆನ್ನಲಾದ ಮಾತಿಗೆ ಕೋಟೆ ನಾಡು ಚಿತ್ರದುರ್ಗದಲ್ಲಿ ಆಕ್ರೋಶಗಳು ಮಾರ್ದನಿಸಿವೆ. ವಿವಿಧ ಸಂಘಟನೆಗಳು ಶುಕ್ರವಾರ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಅಮಿತ್ ಶಾ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಆಗ್ರಹಿಸಿದವು. ದೇಶದ ಜನರ ಮುಂದೆ ಬಹಿರಂಗ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದವು.

ಚಿತ್ರದುರ್ಗ: ಅಂಬೇಡ್ಕರ್ ಹೆಸರೇಳುವ ಬದಲು ದೇವರನ್ನು ಜಪಿಸಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆಂದು ಕೇಂದ್ರ ಗೃಹ ಸಚಿವ ಅಮಿತ್‍ ಶಾ ಹೇಳಿದರೆನ್ನಲಾದ ಮಾತಿಗೆ ಕೋಟೆ ನಾಡು ಚಿತ್ರದುರ್ಗದಲ್ಲಿ ಆಕ್ರೋಶಗಳು ಮಾರ್ದನಿಸಿವೆ. ವಿವಿಧ ಸಂಘಟನೆಗಳು ಶುಕ್ರವಾರ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಅಮಿತ್ ಶಾ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಆಗ್ರಹಿಸಿದವು. ದೇಶದ ಜನರ ಮುಂದೆ ಬಹಿರಂಗ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದವು.ನಗರದ ವಿವಿಧ ಕಾನೂನು ಕಾಲೇಜುಗಳ ವಿದ್ಯಾರ್ಥಿ ಒಕ್ಕೂಟದ ಸದಸ್ಯರು ನಗರದಲ್ಲಿ ಮೆರವಣಿಗೆ ನಡೆಸಿ ಒನಕೆ ಓಬವ್ವ ವೃತ್ತದಲ್ಲಿ ಸಭೆ ಮಾಡಿದರು. ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದರು. ಡಾ.ಬಿ.ಆರ್.ಅಂಬೇಡ್ಕರ್‌ ಅವರನ್ನು ಸ್ಮರಣೆ ಮಾಡುವ ಬದಲು ದೇವರನ್ನು ಜಪಿಸಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆಂದು ಅಮಿತ್‍ ಶಾ ಸಂಸತ್‍ನಲ್ಲಿ ಹೇಳಿ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಕೂಡಲೇ ದೇಶದ ಜನರ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದ ಕಾನೂನು ವಿದ್ಯಾರ್ಥಿ ಒಕ್ಕೂಟದವರು ಅಮಿತ್‍ ಶಾ ಲೋಕಸಭೆ ಪ್ರವೇಶಿಸಿದ್ದಾರೆಂದರೆ ಸಂವಿಧಾನದಲ್ಲಿ ನೀಡಿರುವ ಅಧಿಕಾರ ಕಾರಣ ಎನ್ನುವುದನ್ನು ಮರೆಯಬಾರ ಎಂದರು. ಅಂಬೇಡ್ಕರ್ ಸಂವಿಧಾನ ಕುರಿತು ಸಂಸತ್‍ನಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಇಂತಹ ಉದ್ದಟತನದ ಮಾತುಗಳನ್ನಾಡಿರುವ ಅಮಿತ ಶಾ ಇಡಿ ದಲಿತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಪ್ರಧಾನಿ ಮೋದಿರವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಅವರನ್ನು ಸಂಪುಟದಿಂದ ಕೈಬಿಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.

ಅಕಾಶ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.ಎಸ್‌ಡಿಪಿಐ ಪ್ರತಿಭಟನೆ:

ಕೇಂದ್ರ ಗೃಹ ಸಚಿವ ಅಮಿತ್ ಶಾ ದುರಹಂಕಾರದ ಮಾತುಗಳನ್ನಾಡಿದ್ದಾರೆಂದು ಆರೋಪಿಸಿ ಎಸ್‌ಡಿಪಿಐ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕೇವಲ ದಲಿತರಿಗಷ್ಟೆ ಸಂವಿಧಾನವನ್ನು ರಚಿಸಿಲ್ಲ. ದೇಶದ ಪ್ರತಿಯೊಬ್ಬರು ಸ್ವಾಭಿಮಾನ, ಸಮಾನತೆಯಿಂದ ಬದುಕಲಿ ಎನ್ನುವ ಉದ್ದೇಶದಿಂದ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದಾರೆ. ಅಮಿತ್ ಶಾ ಕೇಂದ್ರ ಗೃಹ ಮಂತ್ರಿಯಾಗಿದ್ದಾರೆಂದರೆ ಸಂವಿಧಾನ ಕಾರಣ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಸಂವಿಧಾನವನ್ನು ಬದಲಾಯಿಸುವುದಾಗಿ ಹೇಳಿಕೊಂಡು ಬರುತ್ತಿದೆ. ಈಗ ಅಂಬೇಡ್ಕರ್ ಬಗ್ಗೆಯೆ ಹಗುರವಾಗಿ ಮಾತನಾಡಲು ಶುರು ಮಾಡಿದ್ದಾರೆ. ಹಾಗಾಗಿ ಪ್ರಧಾನಿ ಮೋದಿರವರು ಮೌನ ಮುರಿದು ಅಮಿತ್‍ ಶಾ ವಿರುದ್ಧ ಕಾನೂನು ಕ್ರಮಕೈಗೊಂಡು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು. ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ, ಶತ ಶತಮಾನಗಳಿಂದಲೂ ಶೋಷಣೆ ಅನುಭವಿಸಿಕೊಂಡು ಬರುತ್ತಿರುವವರು ಸ್ವಾಭಿಮಾನಿಯಾಗಿ ಬದುಕಲಿ ಎನ್ನುವ ಉದ್ದೇಶದಿಂದ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸಿದ್ದಾರೆನ್ನುವುದನ್ನು ಮರೆತು ಅಮಿತ್‍ ಶಾ ತಮ್ಮ ಮನುಸಂಸ್ಕೃತಿಯ ಹೊರಹಾಕಿದ್ದಾರೆ. ತಕ್ಷಣವೆ ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಬಾಳೆಕಾಯಿ ಶ್ರೀನಿವಾಸ್, ಸುಬಾನುಲ್ಲಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಬಹುಜನ ಸಮಾಜ ಪಾರ್ಟಿ ಆಕ್ರೋಶ:

ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‍ ಶಾ ಕೇವಲವಾಗಿ ಮಾತನಾಡಿದ್ದಾರೆಂದು ಆರೋಪಿಸಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿರುವ ಅಮಿತ್‍ ಶಾ ಸಂವಿಧಾನವನ್ನು ಗೌರವಿಸುವುದಿಲ್ಲವೆನ್ನುವುದಾದರೆ ಒಂದು ಕ್ಷಣವೂ ಕೇಂದ್ರ ಸಚಿವರಾಗಿ ಮುಂದುವರೆಯುವ ನೈತಿಕತೆಯಿಲ್ಲ. ಕೂಡಲೇ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಸಂವಿಧಾನಕ್ಕಿಂತ ದೊಡ್ಡ ಗ್ರಂಥ ನಮ್ಮ ದೇಶಕ್ಕೆ ಮತ್ತೊಂದಿಲ್ಲ. ಅಂತಹ ಪವಿತ್ರವಾದ ಸಂವಿಧಾನಕ್ಕೆ ಅಪಮಾನಗೊಳಿಸಿರುವ ಅಮಿತ್ ಶಾರನ್ನು ದೌರ್ಜನ್ಯ ಕಾಯಿದೆಯಡಿಯಲ್ಲಿ ಬಂಧಿಸಬೇಕು. ಇಲ್ಲದಿದ್ದರೆ ಅಂಬೇಡ್ಕರ್ ವಿರೋಧಿಗಳಿಗೆ ಪ್ರಚೋದನೆ ನೀಡಿದಂತಾಗುತ್ತದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಜಿಲ್ಲಾಧ್ಯಕ್ಷ ಎನ್.ಪ್ರಕಾಶ್, ರಾಜ್ಯ ಕಾರ್ಯದರ್ಶಿಗಳಾದ ಭೀಮನಕೆರೆ ಶಿವಮೂರ್ತಿ, ದೊಡ್ಡೆಟ್ಟಪ್ಪ, ಲಕ್ಷ್ಮಮ್ಮ, ನವೀದ್, ಸುಂದರೇಶ್, ಮಹಂತೇಶ್ ಕೂನಬೇವು, ಕೆ.ಪಿ.ಶ್ರೀನಿವಾಸ್, ಜಿಲ್ಲಾ ಉಪಾಧ್ಯಕ್ಷರುಗಳಾದ ಮಹಲಿಂಗಪ್ಪ, ರಾಮಸ್ವಾಮಿ, ಪ್ರಧಾನ ಕಾರ್ಯದರ್ಶಿ ಹನುಮಂತರಾಯ, ಖಜಾಂಚಿ ಎಚ್.ಆರ್.ಶ್ರೀನಿವಾಸ್, ಪಿ.ಜಯಣ್ಣ, ಸತೀಶ್ ಬೂದಿಹಳ್ಳಿ, ಪರಮೇಶ್ವರಪ್ಪ, ಡಿ.ಮೈಲಾರಪ್ಪ, ಬಿ.ಮಂಜುನಾಥ್, ಗೋವಿಂದಪ್ಪ, ಮಂಜುನಾಥ್ ತಾಳಿಕೆರೆ, ಆರ್.ಗಂಗಾಧರಯ್ಯ, ಚಂದ್ರಣ್ಣ ಭಾಗವಹಿಸಿದ್ದರು.

Share this article