ಚಿತ್ರದುರ್ಗ: ಅದಿರು ಸಾಗಾಣಿಕೆ ಹಾಗೂ ಉದ್ಯೋಗದ ವಿಚಾರದಲ್ಲಿ ಸ್ಥಳೀಯರಿಗೆ ಅವಕಾಶ ನಿರಾಕರಣೆ ಮಾಡಲಾಗಿದೆ ಎಂದು ಆರೋಪಿಸಿ ವೇದಾಂತ ಮೈನ್ಸ್ ಕಂಪನಿ ವಿರುದ್ಧ ವಿವಿಧ ಸಂಘಟನೆಗಳಿಂದ ಭಾನುವಾರ ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ದಿಂಡದಹಳ್ಳಿ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಭೀಮಸಮುದ್ರದ ಸಿರಾಜ್, ಗೇಟ್-3 ರೋಡ್ ಓಪನ್ ಮಾಡಿ ಲಾರಿಗಳಲ್ಲಿ ಅದಿರು ಸಾಗಾಣಿಕೆಗೆ ಅವಕಾಶ ಕೊಡಬೇಕೆಂದು ಹಲವಾರು ವರ್ಷಗಳಿಂದಲೂ ನಮ್ಮ ಬೇಡಿಕೆಯಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ, ಹೊಳಲ್ಕೆರೆ ವಲಯ ಅರಣ್ಯಾಧಿಕಾರಿ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು ವೇದಾಂತ ಮೈನ್ಸ್‌ನೊಂದಿಗೆ ಅಕ್ರಮ ಅದಿರು ಸಾಗಾಣಿಕೆಗೆ ಕೈಜೋಡಿಸಿದ್ದಾರೆ. ಅರಣ್ಯ ಇಲಾಖೆಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿದ್ದು, ದಿನಕ್ಕೆ 25 ಸಾವಿರ ಟನ್ ಅದಿರು ಸಾಗಾಣಿಕೆಯಾಗುತ್ತಿದೆ. ನೂರು ಕೋಟಿ ರು ವಹಿವಾಟು ನಡೆಯುತ್ತಿದೆ ಎಂದು ಆಪಾದಿಸಿದರು. ಲಾರಿಗಳಲ್ಲಿ ಅದಿರು ಸಾಗಾಣಿಕೆ ಮಾಡುವುದನ್ನು ನಿಲ್ಲಿಸಿ ಮೂರು ವರ್ಷಗಳಾಗಿದೆ. ಇದನ್ನೆ ನೆಚ್ಚಿಕೊಂಡಿರುವ ಸಾವಿರಾರು ಕುಟುಂಬಗಳು ಜೀವನಕ್ಕೆ ದಾರಿ ಕಾಣದೆ ಚಿಂತಾಕ್ರಾಂತರಾಗಿದ್ದಾರೆ. ಸ್ಥಳೀಯರನ್ನು ಕಡೆಗಣಿಸಿ ಅನ್ಯ ರಾಜ್ಯದವರನ್ನು ಇಲ್ಲಿಗೆ ಕರೆಸಿಕೊಂಡಿರುವ ವೇದಾಂತ ಗಣಿ ಮೈನ್ಸ್‌ನವರು ರಾತ್ರಿಯಿಡಿ ಅದಿರು ಸಾಗಾಟ ಮಾಡುತ್ತಿರುವುದರಿಂದ ಮಾರ್ಗ ಮಧ್ಯದಲ್ಲಿ ಸಾಕಷ್ಟು ಕಾಡು ಪ್ರಾಣಿಗಳು ಬಲಿಯಾಗುತ್ತಿವೆ. ಜಿಲ್ಲಾಡಳಿತ ಇತ್ತ ಗಮನ ಹರಿಸಿ ಅಕ್ರಮ ಅದಿರು ಸಾಗಾಣಿಕೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ರಮೇಶ್ ಮಾತನಾಡಿ, ಸ್ಥಳೀಯರನ್ನು ನಿರ್ಲಕ್ಷಿಸಿ ಉತ್ತರ ಭಾರತದಿಂದ ಜನರನ್ನು ಕರೆಸಿಕೊಂಡು ಅಕ್ರಮವಾಗಿ ರೈಲಿನ ಮೂಲಕ ವೇದಾಂತ ಗಣಿ ಮೈನ್ಸ್‌ನವರು ಅದಿರು ಸಾಗಾಣಿಕೆ ಮಾಡುತ್ತಿರುವುದನ್ನು ಪ್ರಶ್ನಿಸುವ ಲಾರಿ ಮಾಲೀಕರು, ಚಾಲಕರುಗಳ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ. ಇದಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಅರಣ್ಯ ಇಲಾಖೆಯ ಕುಮ್ಮಕ್ಕಿದೆ ಎಂದು ದೂರಿದರು.
ಗಣಿಗಾರಿಕೆಗೆ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಗಿಡ-ಮರಗಳ ನಾಶವಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಸಸಿಗಳನ್ನು ಬೆಳೆಸಬೇಕಿತ್ತು. ಇದ್ಯಾವುದರ ಕಡೆ ಗಮನ ಹರಿಸದ ವೇದಾಂತ ಮೈನ್ಸ್‌ನವರು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಲಾರಿಗಳ ಮೂಲಕ ಅದಿರು ಸಾಗಾಣಿಕೆಗೆ ಅವಕಾಶ ಕೊಡುವತನಕ ಧರಣಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಸಿದರು. ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಶ್ರೀರಾಂ, ವೀರಶೈವ ಲಿಂಗಾಯಿತ ಯುವ ವೇದಿಕೆ ಅಧ್ಯಕ್ಷ ಎಚ್.ಎಂ.ಮಂಜುನಾಥ್, ಹನೀಸ್, ಸೈಯದ್ ಖುದ್ದೂಸ್, ಲಾರಿ ಮಾಲೀಕರ ಅಸೋಸಿಯೇಷನ್ ಅಧ್ಯಕ್ಷ ಇಮ್ರಾನ್, ಶಿವರಾಜ್, ವಿಜಯಕುಮಾರ್, ನಾಗರಾಜ್, ವಸೀಂ, ಪ್ರಕಾಶ್ ರಾಮನಾಯ್ಕ ಧರಣಿಯಲ್ಲಿ ಪಾಲ್ಗೊಂಡಿದ್ದರು.