ಅಕ್ರಮ ಮದ್ಯ ಮಾರಾಟ, ಅಡುಗೆ ಅನಿಲ ಬೆಲೆ ಏರಿಕೆಗೆ ಆಕ್ರೋಶ

KannadaprabhaNewsNetwork | Published : Dec 14, 2024 12:48 AM

ಸಾರಾಂಶ

ಗ್ರಾಮಾಂತರ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದು ಹಾಗೂ ಗ್ರಾಹಕರಿಂದ ಅಡುಗೆ ಅನಿಲ ಬೆಲೆಯನ್ನು ಹೆಚ್ಚು ಪಡೆಯುತ್ತಿರುವುದರ ವಿರುದ್ಧ ಶುಕ್ರವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಮಹಾತ್ಮ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಸ್ಥಳೀಯ ಶಾಖೆ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮತ್ತು ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಸಾಗರ

ಗ್ರಾಮಾಂತರ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದು ಹಾಗೂ ಗ್ರಾಹಕರಿಂದ ಅಡುಗೆ ಅನಿಲ ಬೆಲೆಯನ್ನು ಹೆಚ್ಚು ಪಡೆಯುತ್ತಿರುವುದರ ವಿರುದ್ಧ ಶುಕ್ರವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಮಹಾತ್ಮ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಸ್ಥಳೀಯ ಶಾಖೆ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮತ್ತು ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ತಾಲೂಕು ಸಂಚಾಲಕ ರೇವಪ್ಪ ಕೆ. ಹೊಸಕೊಪ್ಪ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಅಡುಗೆ ಅನಿಲದ ಬೆಲೆಯನ್ನು ಅತಿಹೆಚ್ಚು ಪಡೆಯಲಾಗುತ್ತಿದೆ. ಕೇಂದ್ರ ಸರ್ಕಾರ ನಿಗದಿಪಡಿಸಿದ ದರ ಒಂದಿದ್ದರೆ, ಗ್ಯಾಸ್ ಸರಬರಾಜು ಮಾಡುವ ಕಂಪನಿಗಳು ಹೆಚ್ಚಿನ ದರ ವಿಧಿಸುವ ಮೂಲಕ ಗ್ರಾಹಕರ ಮೇಲೆ ಹೆಚ್ಚು ಹೊರೆ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣ ಉಪವಿಭಾಗಾಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕು. ತಾಲೂಕಿನ ಹಳ್ಳಿಗಳಲ್ಲಿ ಅಕ್ರಮ ಮದ್ಯಮಾರಾಟ ಹೆಚ್ಚುತ್ತಿದೆ. ಅಧಿಕೃತ ಮದ್ಯದಂಗಡಿಗಳಿಗಿಂತ ಹಳ್ಳಿಗಳ ಕಿರಾಣಿ ಅಂಗಡಿ, ಗೂಡಂಗಡಿ, ಮಿಲ್ಟ್ರಿ ಹೋಟೆಲ್ಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಅಬಕಾರಿ ಇಲಾಖೆ ತಕ್ಷಣ ಅಕ್ರಮ ಮದ್ಯ ಮಾರಾಟ ತಡೆಗಟ್ಟಬೇಕು ಎಂದು ಒತ್ತಾಯಿಸಿದರು. ಸಮಿತಿಯ ಮಧುಕುಮಾರ್ ರಿಪ್ಪನಪೇಟೆ ಮಾತನಾಡಿ, ಹಳ್ಳಿಗಳಲ್ಲಿ ಎಲ್ಲೆಂದರಲ್ಲಿ ಮದ್ಯ ಸಿಗುತ್ತಿರುವುದರಿಂದ ಯುವಜನರು ಮದ್ಯವ್ಯಸನಿಗಳಾಗುತ್ತಿದ್ದಾರೆ. ಅಬಕಾರಿ ಅಧಿಕಾರಿಗಳಿಗೆ ಅಕ್ರಮ ಮದ್ಯ ನಡೆಯುತ್ತಿರುವ ಮಾಹಿತಿ ಲಭ್ಯವಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದ ಅವರು, ಗ್ಯಾಸ್ ಸಿಲೆಂಡರ್ ಮೇಲೆ ಹೆಚ್ಚುವರಿಯಾಗಿ ಹಣ ಪಡೆಯುತ್ತಿರುವ ಗ್ಯಾಸ್ ಏಜೆನ್ಸಿಗಳ ವಿರುದ್ಧ ಈತನಕ ಕ್ರಮ ಏಕೆ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.ನ್ಯಾಯವಾದಿ ಕೆ.ವಿ. ಪ್ರವೀಣ್, ಡಿಎಸ್ಎಸ್ ಮುಖಂಡ ಆನಂದ್ ಮೇಸ್ತ್ರಿ, ಉಮಾ ಮಾತನಾಡಿದರು. ಪ್ರತಿಭಟನೆಯಲ್ಲಿ ಅಣ್ಣಪ್ಪ ಕಾರ್ಗಲ್, ಜಾನ್ಸನ್ ಲೋಬೋ, ರವಿ ಬೆಳೆಯೂರು, ಶೇಖರ್ ಶೆಡ್ತಿಕೆರೆ, ರವಿಬಿಳಿಸಿರಿ ಇನ್ನಿತರರು ಹಾಜರಿದ್ದರು.

Share this article