ಮೈನರ್ ನಾಲೆ ಒಳಗಡೆ ವಿದ್ಯುತ್ ಕಂಬ ಅಳವಡಿಕೆಗೆ ಆಕ್ರೋಶ

KannadaprabhaNewsNetwork | Published : Oct 14, 2024 1:25 AM

ಸಾರಾಂಶ

ಅವೈಜ್ಞಾನಿಕವಾಗಿ ವಿದ್ಯುತ್ ಕಂಬಗಳನ್ನು ಅಳಡಿಸಿದ ಸೆಸ್ಕಾಂ ಎಂಜಿನಿಯರುಗಳ ಮೇಲೆ ಕ್ರಮ ಜರುಗಿಸಬೇಕು. ತನ್ನ ವ್ಯಾಪ್ತಿಯ ನಾಲೆಯಲ್ಲಿ ಪೂರ್ವಾನುಮತಿಯಿಲ್ಲದೆ ವಿದ್ಯುತ್ ಕಂಬಗಳನ್ನು ಅಳವಡಿಸಿದವರ ವಿರುದ್ಧ ನೀರಾವರಿ ಇಲಾಖೆ ಪೊಲೀಸರಿಗೆ ದೂರು ನೀಡಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ವಿದ್ಯುತ್ ಕಂಬಗಳನ್ನು ಮೈನರ್ ನಾಲೆ ಒಳಗಡೆ ಅಳವಡಿಸುವ ಮೂಲಕ ಸೆಸ್ಕಾಂ ಎಂಜಿನಿಯರುಗಳು ನೀರು ಹರಿಯಬೇಕಾದ ನಾಲೆಯನ್ನೇ ಮುಚ್ಚುವ ಪ್ರಯತ್ನ ಮಾಡಿರುವ ಘಟನೆ ತಾಲೂಕಿನ ಕೃಷ್ಣಾಪುರ ಬಳಿ ಸಂಭವಿಸಿದೆ.

ಗೋರೂರು ಜಲಾಶಯದ ಹೇಮಾವತಿ ಎಡದಂಡೆ ನಾಲೆ ತಾಲೂಕಿನ ಮೂಲಕ ಹಾದು ಹೋಗುತ್ತದೆ. ಮುಖ್ಯ ನಾಲೆಗೆ ಸೇರಿದ 54ನೇ ವಿತರಣಾ ನಾಲೆ ತಾಲೂಕಿನ ಕುಂದೂರು ಬಳಿಯಿಂದ ಕೃಷ್ಣಾಪುರ ಮಾರ್ಗವಾಗಿ ಮುಂದೆ ಸಾಗಿ ರೈತರ ಸಾವಿರಾರು ಎಕರೆ ಜಮೀನಿಗೆ ನೀರುಣಿಸುತ್ತದೆ.

54ನೇ ವಿತರಣಾ ನಾಲಾ ವ್ಯಾಪ್ತಿಗೆ ಸೇರಿದ ಕೃಷ್ಣಾಪುರ ಮೈನರ್ ನಾಲೆಯ ಒಳಭಾಗದಲ್ಲಿ ಸೆಸ್ಕಾಂ ಇಂಜಿನಿಯರುಗಳು ಅವೈಜ್ಞಾನಿಕವಾಗಿ ವಿದ್ಯುತ್ ಕಂಬಗಳನ್ನು ಅಳವಡಿಸುವ ಮೂಲಕ ನಾಲೆಯ ನೀರು ಹರಿಯುವಿಕೆಗೆ ಅಡಚಣೆ ಮಾಡಿದ್ದಾರೆ.

ಸೆಸ್ಕಾಂ ಎಂಜಿನಿಯರ್‌ಗಳ ಕಾರ್ಯವೈಖರಿ ಖಂಡಿಸಿರುವ ರೈತ ಮುಖಂಡ ಕೃಷ್ಣಾಪುರ ರಾಜಣ್ಣ, ತಕ್ಷಣವೇ ಕಾಲುವೆಯ ಒಳ ಭಾಗದಲ್ಲಿ ಅಳವಡಿಸಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ.

ಸಾಮಾನ್ಯವಾಗಿ ರಸ್ತೆಯ ಒಂದು ಭಾಗದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಲಾಗುತ್ತದೆ. ಆದರೆ, ಕೃಷ್ಣಾಪುರ ಮೈನರ್ ನಾಲೆ ಮಧ್ಯ ಭಾಗದಲ್ಲಿಯೇ ವಿದ್ಯುತ್ ಇಲಾಖೆ ಹತ್ತಾರು ಕಂಬಗಳನ್ನು ಅಳವಡಿಸಿಕೊಂಡು ಹೋಗಿದೆ. ಇದರಿಂದ ನಾಲೆ ಒಂದು ಪಾರ್ಶ್ವ ಮುಚ್ಚಿ ಹೋಗಿದ್ದು ನಾಲೆಯಲ್ಲಿ ನೀರು ಬಿಟ್ಟರೆ ಅದು ಮುಂದೆ ಹೋಗದ ಸ್ಥಿತಿ ಎದುರಾಗಿದೆ.

ಅವೈಜ್ಞಾನಿಕವಾಗಿ ವಿದ್ಯುತ್ ಕಂಬಗಳನ್ನು ಅಳಡಿಸಿದ ಸೆಸ್ಕಾಂ ಎಂಜಿನಿಯರುಗಳ ಮೇಲೆ ಕ್ರಮ ಜರುಗಿಸಬೇಕು. ತನ್ನ ವ್ಯಾಪ್ತಿಯ ನಾಲೆಯಲ್ಲಿ ಪೂರ್ವಾನುಮತಿಯಿಲ್ಲದೆ ವಿದ್ಯುತ್ ಕಂಬಗಳನ್ನು ಅಳವಡಿಸಿದವರ ವಿರುದ್ಧ ನೀರಾವರಿ ಇಲಾಖೆ ಪೊಲೀಸರಿಗೆ ದೂರು ನೀಡುವ ಮೂಲಕ ಬೇಜವಾಬ್ದಾರಿ ನೌಕರರ ವಿರುದ್ಧ ಕ್ರಮ ಜರುಗಿಸುವಂತೆ ರೈತ ಮುಖಂಡ ಕೃಷ್ಣಾಪುರ ರಾಜಣ್ಣ ಆಗ್ರಹಿಸಿದ್ದಾರೆ.

Share this article