
ಸಚಿವರ ಹೇಳಿಕೆ ಅರಸು ಸಮುದಾಯಕ್ಕೆ ಧಕ್ಕೆ ತಂದಿದೆ । ಅವರು ಕ್ಷಮೆಯಾಚಿಸಬೇಕು ಇಲ್ಲವೇ ಜಿಲ್ಲಾ ಅರಸು ಸಂಘದ ಹೋರಾಟ
ಮೈಸೂರು ರಾಜಮನೆತನದ ಕುರಿತು ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ, ಜಿಲ್ಲಾ ಅರಸು ಸಂಘ ತೀವ್ರವಾಗಿ ಖಂಡಿಸಿದೆ.
ಮಂಗಳವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಟಿ.ಎನ್. ಮುಕುಂದರಾಜ್ ಅರಸ್, ಮೈಸೂರು ರಾಜಮನೆತನಕ್ಕೆ ತನ್ನದೇ ಆದ ಐತಿಹಾಸಿಕ ಪರಂಪರೆ ಹಾಗೂ ರಾಜ್ಯಕ್ಕೆ ಅಪಾರ ಕೊಡುಗೆಗಳಿವೆ. ಇಂತಹ ಹಿನ್ನೆಲೆಯುಳ್ಳ ಮನೆತನದ ಕುರಿತು ಜವಾಬ್ದಾರಿಯುತ ಸ್ಥಾನದಲ್ಲಿರುವವರು ಗೌರವಯುತವಾಗಿ ಮಾತನಾಡಬೇಕು ಎಂದು ಆಗ್ರಹಿಸಿದರು.ಈ ಹಿಂದೆ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೈಸೂರು ಅರಮನೆಯನ್ನು ಸರ್ಕಾರದ ವಶಕ್ಕೆ ಪಡೆಯುವ ಪ್ರಯತ್ನ ನಡೆಸಿದ್ದರು ಎಂದು ಆರೋಪಿಸಿದ ಅವರು, ಇದೀಗ ಯತೀಂದ್ರ ಸಿದ್ದರಾಮಯ್ಯ ಅವರು ತಂದೆಯ ಹಾದಿಯನ್ನೇ ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದರು.
ದಸರಾ ಸಂದರ್ಭದಲ್ಲಿ ಅರಮನೆಯಲ್ಲಿ ನಡೆದ ಧಾರ್ಮಿಕ ಕಾರ್ಯಗಳಿಗೆ ಅಡ್ಡಿಯುಂಟಾದ ಹಿನ್ನೆಲೆಯಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಸರ್ಕಾರಕ್ಕೆ ಸಲಹೆ ನೀಡಿ ಪತ್ರ ಬರೆದಿದ್ದರು. ಇದಕ್ಕೆ ಗೌರವ ನೀಡುವ ಬದಲು, ಸರ್ಕಾರಕ್ಕೆ ಸಲಹೆ ನೀಡಲು ರಾಜಮನೆತನದವರ ಅಗತ್ಯವಿಲ್ಲ ಎಂಬರ್ಥದಲ್ಲಿ ಯತೀಂದ್ರ ಪ್ರತಿಕ್ರಿಯಿಸಿರುವುದು ಸರಿಯಲ್ಲ ಎಂದರು.
ಕ್ಷಮೆಯಾಚನೆಗೆ ಆಗ್ರಹ:
ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವ ಅಧ್ಯಕ್ಷ ಮಂಜುನಾಥ ರಾಜ್ ಅರಸ್, ಉಪಾಧ್ಯಕ್ಷ ಮಂಜುನಾಥ ರಾಜ್ ಅರಸ್, ಪ್ರಧಾನ ಕಾರ್ಯದರ್ಶಿ ಯಶೋಧ ರಾಜ್ ಅರಸ್, ಮಾಜಿ ಅಧ್ಯಕ್ಷ ಜನಕರಾಜ್ ಅರಸ್, ಲೋಕೇಶ್, ಮೋಹನ್ ಹಾಗೂ ಆನಂದ ರಾಜ್ ಅರಸ್ ಇದ್ದರು.