ತೀವ್ರ ಬರದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘಗಳ ಒಕ್ಕೂಟ- ಕರ್ನಾಟಕದ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ, ಪ್ರತಿಭಟಿಸಲಾಯಿತು.
- ಕಬ್ಬು ಬೆಳೆಗಾರ ಬೇಡಿಕೆ ಈಡೇರಿಸಲು, ರೈತರ ನೆರವಿಗೆ ಧಾವಿಸಲು ಕೇಂದ್ರ-ರಾಜ್ಯ ಸರ್ಕಾರಗಳಿಗೆ ಒತ್ತಾಯ - - -
ಕನ್ನಡಪ್ರಭ ವಾರ್ತೆ ದಾವಣಗೆರೆತೀವ್ರ ಬರದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘಗಳ ಒಕ್ಕೂಟ- ಕರ್ನಾಟಕದ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ, ಪ್ರತಿಭಟಿಸಲಾಯಿತು.
ನಗರದ ಜಿಲ್ಲಾಡಳಿತ ಭವನದ ಎದುರು ಒಕ್ಕೂಟದ ಪದಾಧಿಕಾರಿಗಳು, ಮುಖಂಡರ ನೇತೃತ್ವದಲ್ಲಿ ಪ್ರತಿಭಟಿಸಿದ ರೈತರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರಲ್ಲದೇ, ಅಪರ ಜಿಲ್ಲಾಧಿಕಾರಿ ಶೀಲವಂತರ ಶಿವಕುಮಾರ ಮುಖಾಂತರ ಕೇಂದ್ರ, ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದರು.ಇದೇ ವೇಳೆ ಮಾತನಾಡಿದ ರೈತ ಮುಖಂಡರಾದ ಹೊನ್ನೂರು ಮುನಿಯಪ್ಪ, ಬಲ್ಲೂರು ರವಿಕುಮಾರ, ಇಡೀ ರಾಜ್ಯದಲ್ಲಿ ಕಿತ್ತು ತಿನ್ನುವ ಭೀಕರ ಬರ ಆವರಿಸಿದೆ. ಕೇಂದ್ರ-ರಾಜ್ಯ ಸರ್ಕಾರ ಪ್ರಥಮಾದ್ಯತ ಮೇಲೆ ರೈತರ ನೆರವಿಗೆ ಧಾವಿಸಲಿ. ರೈತರಿಗೆ ನೂರಾರು ಸಮಸ್ಯೆ, ಸಂಕಷ್ಟ, ಸವಾಲು ಕಾಡುತ್ತಿವೆ. ಕಬ್ಬು ಬೆಳೆಗಾರರು 6 ತಿಂಗಳಿನಿಂದ ಚಳವಳಿ ನಡೆಸಿದ್ದಾರೆ. ಕೇಂದ್ರವು ಎಫ್ಆರ್ಪಿ ₹4500, ರಾಜ್ಯ ಸರ್ಕಾರವು ಎಸ್ಎಪಿ ₹1 ಸಾವಿರ ನಿಗದಿಪಡಿಸಿ, ಒಟ್ಟು ₹5500 ಘೋಷಣೆ ಮಾಡಲಿ ಎಂದರು.
ರಾಜ್ಯದಲ್ಲಿ ಕಬ್ಬಿನ ಸಲಹಾ ಸಮಿತಿ ಬೆಲೆ ತಕ್ಷಣ ನಿಗದಿಪಡಿಸಬೇಕು. ಕಳೆದೊಂದು ತಿಂಗಳಿನಿಂದ ಉತ್ತರ ಕರ್ನಾಟಕದಲ್ಲಿ ಕಬ್ಬಿನ ಚಳವಳಿ ತೀವ್ರಗೊಂಡಿದೆ. ಬೆಲೆ ನಿಗದಿ ವಿಚಾರವಾಗಿ ಕಾರ್ಖಾನೆ ಮಾಲೀಕರು, ಕಬ್ಬು ಬೆಳೆಗಾರ ಸಮನ್ವಯ ಸಮಿತಿ ಜೊತೆ ಸರ್ಕಾರದ ಸಭೆ ವಿಫಲವಾಗಿದೆ. ಬರದಿಂದ ಕಬ್ಬಿನ ಬೆಳೆ ಒಣಗುತ್ತಿದೆ. ಕಾರ್ಖಾನೆಗಳು ತಕ್ಷಣ ಕಬ್ಬು ಅರೆಯುವಿಕೆ ಆರಂಭಿಸಬೇಕು. ಉಭಯ ಸರ್ಕಾರಗಳು ಪರಸ್ಪರ ನುಣುಚಿಕೊಳ್ಳುವ ಬದಲು, ತಕ್ಷಣ ಕಬ್ಬಿನ ಬೆಲೆ ನಿಗದಿಪಡಿಸಲಿ ಎಂದು ಅವರು ತಿಳಿಸಿದರು.ಕಬ್ಬಿಗೆ ರಾಜ್ಯ ಸರ್ಕಾರ ಎಸ್ಎಪಿ ದರ ಘೋಷಿಸಲಿ. ಸಕ್ಕರೆ ಮಾರಾಟದ ಕನಿಷ್ಠ ದರ ಹೆಚ್ಚಿಸಿ, ಎಫ್ಆರ್ಪಿ ದರವನ್ನು ಕೇಂದ್ರ ಏರಿಸಬೇಕು. ಕಬ್ಬಿನ ಇಳುವರಿ ಮೋಸ, ತೂಕದಲ್ಲಿ ರೈತರಿಗೆ ಆಗುವ ಮೋಸ ತಪ್ಪಿಸಬೇಕು. ರೈತರ ಕಬ್ಬಿನ ಬಾಕಿ ಹಣ ತಕ್ಷಣ ಕೊಡಿಸಬೇಕು. ಜಾನುವಾರುಗಳಿಗೆ ಸಮರ್ಪಕ ನೀರು, ಮೇವಿನ ವ್ಯವಸ್ಥೆ ಆಗಬೇಕು. ರೈತರ ಐಪಿ ಸೆಟ್ಗೆ ಹಗಲು 10 ತಾಸು ಸಮರ್ಪಕ ವಿದ್ಯುತ್ ನೀಡಬೇಕು. ವರ್ಷವಿಡೀ ವಿಬಿ ಜಿ ರಾಮ್ ಜಿ ಉದ್ಯೋಗ ಖಾತ್ರಿಯಲ್ಲಿ ಕೆಲಸ ನೀಡಬೇಕು. ಕೃಷಿಗೆ ಮೊದಲು ಆದ್ಯತೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಮಳೆ ಇಲ್ಲದೇ, ಬರಗಾಲ ಎಂಬುದಾಗಿ ರಾಜ್ಯದ 214 ತಾಲೂಕನ್ನು ಬರಪೀಡಿತವೆಂದು ಸರ್ಕಾರ ಘೋಷಿಸಿದೆ. ರೈತರಿಗೆ ಕೇವಲ ₹2 ಸಾವಿರ ಪರಿಹಾರ ಘೋಷಿಸಿದ್ದು ದುರಾದೃಷ್ಟಕರ ಸಂಗತಿ. ಪ್ರತಿ ಎಕರೆಗೆ ಕನಿಷ್ಠ ₹25 ಸಾವಿರ ಪರಿಹಾರ ನೀಡಬೇಕು. ಹಾಲಿ ಮಳೆಗಾಲದ ಹಂಗಾಮಿನಲ್ಲಿ ಮಳೆ ಬಾರದ ಕಾರಣಕ್ಕೆ ರೈತರು ಸಾಲದ ಸುಳಿಗೆ ಸಿಲುಕಿ ನರಳುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಸಮರೋಪಾದಿಯಲ್ಲಿ ರೈತರ ನೆರವಿಗೆ ಧಾವಿಸುವ ಕೆಲಸ ಸರ್ಕಾರಗಳು ಮಾಡಲಿ ಎಂದು ತಾಕೀತು ಮಾಡಿದರು.ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ನಿಟುವಳ್ಳಿ ಅಂಜಿನಪ್ಪ ಪೂಜಾರ, ರಾಂಪುರ ಬಸವರಾಜ, ಪಿ.ಪಿ.ಮರುಳಸಿದ್ದಯ್ಯ, ವೈ.ಎಚ್. ಸೋಮಗೊಂಡ, ಜಯನಾಯ್ಕ, ಮಿಯ್ಯಾಪುರ ತಿರುಮಲೇಶ, ಎಂ.ವಿ.ನಾಗರಾಜ, ಎಚ್.ಬಿ.ನಾಗರಾಜಪ್ಪ, ವಿಜಯ್, ಕೆ.ಟಿ.ಗಣೇಶ, ಬಿ.ಎ.ಸುರೇಶ, ಆರ್.ಜಿ.ಬಸವರಾಜ, ಸಂತೋಷಕುಮಾರ, ಪರಶುರಾಮ, ಹೆಬ್ಬಾಳ್ ರಾಜು, ಪರಶುರಾಮ ರೆಡ್ಡಿ, ದಶರತ, ಬೆಳವನೂರು ಕರಿಬಸಪ್ಪ ಇತರರು ಇದ್ದರು.
- - -(ಬಾಕ್ಸ್)
* ರೈತರ ನೆರವಿಗೆ ಧಾವಿಸಿರೈತರು ಬ್ಯಾಂಕ್, ಖಾಸಗಿಯವರು, ಲೇವಾದೇವಿಯರು ಹೀಗೆ ನಾನಾ ಕಡೆ ಸಾಲ, ಕೈ ಸಾಲ ಪಡೆದು, ಮರುಪಾವತಿ ಮಾಡಲಾಗದೇ ಪರದಾಡುತ್ತಿದ್ದಾರೆ. ಜಮೀನಿನಲ್ಲಿ ಬೆಳೆ ಇಲ್ಲದೇ, ಕಂಗಾಲಾಗಿದ್ದಾರೆ. ಆಗಾಗ ಸುರಿದ ಒಂದಿಷ್ಟು ಮಳೆಯನ್ನೇ ನಂಬಿಕೊಂಡು, ಮತ್ತೆ ಸಾಲ ಮಾಡಿ, ಬಿತ್ತನೆ ಮಾಡಿದ್ದ ಬೆಳೆಯೂ ಒಣಗಿದ್ದು, ಫಸಲು ಕೈಗೆ ಬಾರದೇ ಹಸಿ ಬರ ತಂದೊಡ್ಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ತಾಲೂಕುಗಳ ರೈತರ ಸಾಲವನ್ನು ಕೇಂದ್ರ, ರಾಜ್ಯ ಸರ್ಕಾರಗಳು ಸಂಪೂರ್ಣ ಮನ್ನಾ ಮಾಡಿ, ಘೋಷಣೆ ಮಾಡಿ, ರೈತರ ನೆರವಿಗೆ ಧಾವಿಸಬೇಕು ಎಂದು ಮುಖಂಡರು ಒತ್ತಾಯಿಸಿದರು.
- - --3ಕೆಡಿವಿಜಿ3: ದಾವಣಗೆರೆ ಡಿಸಿ ಕಚೇರಿಗೆ ಮುತ್ತಿಗೆ ಹಾಕಿ, ಅಪರ ಜಿಲ್ಲಾಧಿಕಾರಿ ಶೀಲವಂತರ ಶಿವಕುಮಾರ ಮುಖಾಂತರ ಕೇಂದ್ರ, ರಾಜ್ಯ ಸರ್ಕಾರಕ್ಕೆ ರೈತ ಸಂಘಟನೆ ಮುಖಂಡರು, ರೈತರು ಮನವಿ ಅರ್ಪಿಸಿದರು.