ವೇತನ ಬಾಕಿ, ಜಾನಪದ ವಿವಿಗೆ ಹೊರಗುತ್ತಿಗೆ ನೌಕರರಿಂದ ಬೀಗ

KannadaprabhaNewsNetwork |  
Published : Jul 02, 2026, 02:30 AM IST
ಶಿಗ್ಗಾಂವಿ ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಆಡಳಿತ ಭವನಕ್ಕೆ ಬೀಗ ಜಡಿದು ಹೊರಗುತ್ತಿಗೆ ಬೋಧಕೇತರ ನೌಕರರ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಶಿಗ್ಗಾಂವಿ ತಾಲೂಕಿನ ಗೋಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಹೊರಗುತ್ತಿಗೆ ಬೋಧಕೇತರ ಸಿಬ್ಬಂದಿಗೆ ಕಳೆದ ೯ ತಿಂಗಳಿನಿಂದ ವೇತನ ಬಾಕಿ ಉಳಿದಿರುವುದನ್ನು ವಿರೋಧಿಸಿ ನೌಕರರು ಬುಧವಾರ ಆಡಳಿತ ಭವನಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಶಿಗ್ಗಾಂವಿ: ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಹೊರಗುತ್ತಿಗೆ ಬೋಧಕೇತರ ಸಿಬ್ಬಂದಿಗೆ ಕಳೆದ ೯ ತಿಂಗಳಿನಿಂದ ವೇತನ ಬಾಕಿ ಉಳಿದಿರುವುದನ್ನು ವಿರೋಧಿಸಿ ನೌಕರರು ಬುಧವಾರ ಆಡಳಿತ ಭವನಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ವಿವಿ ಆಡಳಿತ ಭವನ ಹಾಗೂ ಶೈಕ್ಷಣಿಕ ಭವನದ ಬಾಗಿಲಿಗೆ ಬೆಳಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆ ವರೆಗೆ ಬೀಗ ಜಡಿದು ನೌಕರರು ಪ್ರತಿಭಟನೆ ನಡೆಸಿದರು. ಹಲವು ತಿಂಗಳಿಂದ ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ ಕುಟುಂಬ ನಿರ್ವಹಣೆಗೆ ತೊಂದರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ನೌಕರರು, ಕಾರ್ಮಿಕ ಇಲಾಖೆ ನಿಯಮದಂತೆ ಬಾಕಿ ವೇತನ ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.

ಬಳಿಕ ನೌಕರರ ನಿಯೋಗವು ಕುಲಪತಿಯನ್ನು ಭೇಟಿ ಮಾಡಿ ೯ ತಿಂಗಳ ಬಾಕಿ ವೇತನ ಬಿಡುಗಡೆಗೆ ಒತ್ತಾಯಿಸಿತು. ಈ ವೇಳೆ ಮಧ್ಯ ಪ್ರವೇಶಿಸಿದ ಕುಲಪತಿ, ತಕ್ಷಣ ೨ ತಿಂಗಳ ವೇತನವನ್ನು ಎರಡು ದಿನಗಳೊಳಗೆ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು. ಉಳಿದ ಬಾಕಿ ವೇತನವನ್ನು ಶೀಘ್ರದಲ್ಲೇ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕುಲಪತಿ ಭರವಸೆಯ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದ ನೌಕರರು, ನೀಡಿದ ಭರವಸೆಯಂತೆ ಬೇಡಿಕೆ ಈಡೇರದಿದ್ದರೆ ಮುಂದಿನ ಸೋಮವಾರದಿಂದ ಮತ್ತೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು. ವೇತನ ವಿಳಂಬದಿಂದ ಸಂಕಷ್ಟ ಅನುಭವಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಬಸವರಾಜ ಬಳಿಗಾರ, ಮಹೇಶ ಎಮೋಜಿ, ರತ್ನವ್ವ ಓಲೇಕಾರ, ಮಂಜುಳಾ ತಳವಾರ, ಫಕ್ಕೀರವ್ವ ಮುಗದೂರ, ಮಂಜುಳಾ ಇಂಗಳಗಿ, ಸುರೇಶ ಬಂಡಿವಡ್ಡರ, ಸುರೇಶ ಲಮಾಣಿ, ಉಮೇಶ ಸುರಗೋಂಡ, ಸುರೇಶ ಬಿಂದಲಗಿ, ರಾಜಶ್ರೀ ಸಿಂದೆ, ನಿಂಗವ್ವ ಹರಿಜನ, ಅವಿನಾಶ ಇಂಗಳಗಿ ಇದ್ದರು.

ಎರಡು ದಿನಗಳಲ್ಲಿ ಬಿಡುಗಡೆ: ಎರಡು ದಿನಗಳಲ್ಲಿ ೩ ತಿಂಗಳ ವೇತನ ಬಿಡುಗಡೆ ಮಾಡಲಾಗುವುದು. ಸರ್ಕಾರದಿಂದ ಅನುದಾನ ಬರುವುದು ತಡವಾಗಿದ್ದರಿಂದ ಈ ರೀತಿಯಾಗಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವಿಭಾಷಾ ಮಾಧ್ಯಮ ಜಾರಿ ಮುನ್ನ ಚರ್ಚೆ ಆಗಲಿ
ಅಂಜುಮನ್ ತಾಂತ್ರಿಕ ಕಾಲೇಜಿನಲ್ಲಿ ಪದವಿ ಪ್ರದಾನ