ಹಾಸನಾಂಬೆ ದರ್ಶನಕ್ಕೆ ಹನ್ನೆರಡು ಲಕ್ಷಕ್ಕೂ ಅಧಿಕ ಭಕ್ತರು

KannadaprabhaNewsNetwork |  
Published : Nov 05, 2026, 01:45 AM IST
4ಎಚ್ಎಸ್ಎನ್15 :  | Kannada Prabha

ಸಾರಾಂಶ

ಧರ್ಮದರ್ಶನದ ಸಾಲಿನಲ್ಲಿ ಸಾಗುತ್ತಿದ್ದ ಭಕ್ತರಿಗೆ ಅರ್ಧ ಗಂಟೆಯೊಳಗೆ ದರ್ಶನ ಪಡೆಯುವ ಅವಕಾಶ ಲಭಿಸಿತು. ಮುಂಜಾನೆ ೫ ಗಂಟೆಯಿಂದಲೇ ಸರತಿ ಸಾಲುಗಳು ಬಹುತೇಕ ಖಾಲಿಯಾಗಿದ್ದವು. ೩೦೦ ಮತ್ತು ೧,೦೦೦ ರೂ. ವಿಶೇಷ ದರ್ಶನದ ಟಿಕೆಟ್ ಪಡೆದವರ ಸಾಲುಗಳಲ್ಲಿಯೂ ಭಕ್ತರ ಸಂಖ್ಯೆ ವಿರಳವಾಗಿತ್ತು. ಕಳೆದ ಕೆಲವು ದಿನಗಳಿಂದ ಸಂಜೆ ೬ ಗಂಟೆಯ ನಂತರ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ದರ್ಶನ ವ್ಯವಸ್ಥೆಯಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಜಾರಿಗೊಳಿಸಿದೆ. ಈ ಹಿಂದೆ ಪ್ರತಿದಿನ ಮುಂಜಾನೆ ೩ರಿಂದ ೬ ಗಂಟೆಯವರೆಗೆ ನೈವೇದ್ಯದ ನಿಮಿತ್ತ ಗರ್ಭಗುಡಿಯ ಬಾಗಿಲು ಮುಚ್ಚಲಾಗುತ್ತಿತ್ತು. ಆದರೆ ಭಕ್ತರ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಅವರು ಪ್ರಧಾನ ಅರ್ಚಕ ನಾಗರಾಜ್ ಅವರಿಗೆ ಈ ಅವಧಿಯಲ್ಲಿಯೂ ದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಅಧಿದೇವತೆ ಶ್ರೀ ಹಾಸನಾಂಬೆ ದೇವಿಯ ದರ್ಶನೋತ್ಸವಕ್ಕೆ ಹೊಸ ದಾಖಲೆ ನಿರ್ಮಿಸುತ್ತಿದ್ದು, ಸಾರ್ವಜನಿಕ ದರ್ಶನ ಆರಂಭವಾದ ಆರನೇ ದಿನದ ವೇಳೆಗೆ ೧೨ ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದುಕೊಂಡಿದ್ದಾರೆ. ಕಡಿಮೆ ಅವಧಿಯಲ್ಲಿ ಲಕ್ಷಾಂತರ ಭಕ್ತರು ಆಗಮಿಸಿರುವುದು ವಿಶೇಷವಾಗಿದ್ದು, ದರ್ಶನ ವ್ಯವಸ್ಥೆ, ಆದಾಯ ಸಂಗ್ರಹ ಹಾಗೂ ಶಿಷ್ಟಾಚಾರದ ವ್ಯವಸ್ಥೆ ಕುರಿತು ಹಲವು ಚರ್ಚೆಗಳು ಮುನ್ನೆಲೆಗೆ ಬಂದಿವೆ. ಬುಧವಾರ ಮುಂಜಾನೆಯಿಂದಲೇ ದೇವಿಯ ದರ್ಶನಕ್ಕೆ ಭಕ್ತರ ಆಗಮನವಿತ್ತಾದರೂ, ಹಿಂದಿನ ದಿನಗಳಿಗೆ ಹೋಲಿಸಿದರೆ ಸರತಿ ಸಾಲುಗಳಲ್ಲಿ ಜನಸಂದಣಿ ಕಡಿಮೆಯಾಗಿತ್ತು. ಧರ್ಮದರ್ಶನದ ಸಾಲಿನಲ್ಲಿ ಸಾಗುತ್ತಿದ್ದ ಭಕ್ತರಿಗೆ ಅರ್ಧ ಗಂಟೆಯೊಳಗೆ ದರ್ಶನ ಪಡೆಯುವ ಅವಕಾಶ ಲಭಿಸಿತು. ಮುಂಜಾನೆ ೫ ಗಂಟೆಯಿಂದಲೇ ಸರತಿ ಸಾಲುಗಳು ಬಹುತೇಕ ಖಾಲಿಯಾಗಿದ್ದವು. ೩೦೦ ಮತ್ತು ೧,೦೦೦ ರೂ. ವಿಶೇಷ ದರ್ಶನದ ಟಿಕೆಟ್ ಪಡೆದವರ ಸಾಲುಗಳಲ್ಲಿಯೂ ಭಕ್ತರ ಸಂಖ್ಯೆ ವಿರಳವಾಗಿತ್ತು. ಕಳೆದ ಕೆಲವು ದಿನಗಳಿಂದ ಸಂಜೆ ೬ ಗಂಟೆಯ ನಂತರ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ದರ್ಶನ ವ್ಯವಸ್ಥೆಯಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಜಾರಿಗೊಳಿಸಿದೆ. ಈ ಹಿಂದೆ ಪ್ರತಿದಿನ ಮುಂಜಾನೆ ೩ರಿಂದ ೬ ಗಂಟೆಯವರೆಗೆ ನೈವೇದ್ಯದ ನಿಮಿತ್ತ ಗರ್ಭಗುಡಿಯ ಬಾಗಿಲು ಮುಚ್ಚಲಾಗುತ್ತಿತ್ತು. ಆದರೆ ಭಕ್ತರ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಅವರು ಪ್ರಧಾನ ಅರ್ಚಕ ನಾಗರಾಜ್ ಅವರಿಗೆ ಈ ಅವಧಿಯಲ್ಲಿಯೂ ದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದರು.ಡಿಜಿಟಲ್ ಯುಗದಲ್ಲಿ ಹಣಕಾಸಿನ ವಹಿವಾಟಿನಿಂದ ಹಿಡಿದು ದೇವಸ್ಥಾನಗಳ ಕಾಣಿಕೆ ಸಲ್ಲಿಸುವವರೆಗೂ ಕ್ಯೂಆರ್ ಕೋಡ್ ಬಳಕೆ ವ್ಯಾಪಕವಾಗಿದೆ. ಕಳೆದ ಕೆಲವು ವರ್ಷಗಳಿಂದ ಹಾಸನಾಂಬ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಭಕ್ತರು ಡಿಜಿಟಲ್ ಮೂಲಕ ಕಾಣಿಕೆ ಸಲ್ಲಿಸಲು ಅನುಕೂಲವಾಗುವಂತೆ ದೇವಾಲಯದ ಪ್ರವೇಶ ದ್ವಾರ, ಸರತಿ ಸಾಲುಗಳು ಹಾಗೂ ಎಲ್‌ಇಡಿ ಪರದೆಗಳ ಸಮೀಪ ಕ್ಯೂಆರ್ ಕೋಡ್ ಬ್ಯಾನರ್‌ಗಳನ್ನು ಅಳವಡಿಸಲಾಗುತ್ತಿತ್ತು. ಡಿಜಿಟಲ್ ವಹಿವಾಟಿಗೆ ಸರ್ಕಾರವೇ ಹೆಚ್ಚಿನ ಆದ್ಯತೆ ನೀಡುತ್ತಿರುವ ಸಂದರ್ಭದಲ್ಲಿ ದೇವಸ್ಥಾನದಲ್ಲಿಯೂ ಡಿಜಿಟಲ್ ಕಾಣಿಕೆ ವ್ಯವಸ್ಥೆಯನ್ನು ಸಮರ್ಪಕವಾಗಿ ಕಲ್ಪಿಸಬೇಕಿತ್ತು. ಕ್ಯೂಆರ್ ಕೋಡ್ ಬ್ಯಾನರ್ ಅಳವಡಿಸದಿರುವುದಕ್ಕೆ ಕಾರಣವೇನು ಎಂಬುದನ್ನು ಜಿಲ್ಲಾಡಳಿತ ಸ್ಪಷ್ಟಪಡಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಇನ್ನೊಂದೆಡೆ, ನಗರದ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಮುಖಂಡರ ಪ್ರಭಾವ ಹೆಚ್ಚಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಪಕ್ಷದ ಮುಖಂಡರು ತಮ್ಮ ಕಾರ್ಯಕರ್ತರು ಹಾಗೂ ಕುಟುಂಬದ ಸದಸ್ಯರನ್ನು ಶಿಷ್ಟಾಚಾರದ ಹೆಸರಿನಲ್ಲಿ ಪ್ರೋಟೋಕಾಲ್ ವ್ಯವಸ್ಥೆಯಡಿ ದೇವಿಯ ದರ್ಶನಕ್ಕೆ ಕಳುಹಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಶಿಷ್ಟಾಚಾರದ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳ ನಡುವೆಯೇ, ನಿಜವಾದ ಶಿಷ್ಟಾಚಾರಕ್ಕೆ ಅರ್ಹರಾದವರಿಗೆ ಮಾತ್ರ ಅವಕಾಶ ಕಲ್ಪಿಸಿ ಸಾಮಾನ್ಯ ಭಕ್ತರಿಗೆ ಯಾವುದೇ ಅನ್ಯಾಯವಾಗದಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ. ಈ ಬಾರಿಯ ಹಾಸನಾಂಬೆ ದರ್ಶನೋತ್ಸವದಲ್ಲಿ ಭಕ್ತರ ಸಂಖ್ಯೆಯೊಂದಿಗೆ ಆದಾಯ ಸಂಗ್ರಹದಲ್ಲಿಯೂ ಗಮನಾರ್ಹ ಪ್ರಗತಿ ಕಂಡುಬಂದಿದೆ. ೩೦೦ ಮತ್ತು ೧,೦೦೦ ರೂ. ವಿಶೇಷ ದರ್ಶನದ ಟಿಕೆಟ್‌ಗಳು ಹಾಗೂ ಲಾಡು ಪ್ರಸಾದ ಮಾರಾಟದಿಂದ ಈವರೆಗೆ ಒಟ್ಟು ೯.೭೦ ಕೋಟಿ ರೂ. ಆದಾಯ ಸಂಗ್ರಹವಾಗಿದೆ ಎಂದು ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್ ತಿಳಿಸಿದ್ದಾರೆ. ಇನ್ನೂ ಬುಧವಾರದಂದು ಸಂತೇಪೇಟೆ ವೃತ್ತದಲ್ಲಿ ಹಾಕಲಾಗಿರುವ ಬ್ಯಾರಿಕೇಡ್‌ನಲ್ಲಿ ಭಕ್ತರು ಇರದೆ ಖಾಲಿ ಇತ್ತು. ಹೊಸಲೈನ್ ರಸ್ತೆ ಬಳಿ ಹಾಕಲಾಗಿರುವ ಬ್ಯಾರಿಕೇಡ್ ನಿಂದ ಭಕ್ತರನ್ನು ದೇವಾಲಯಕ್ಕೆ ಬಿಡಲಾಗುತಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗಳನ್ನು ಲವ್‌ ಮಾಡಿದ್ದಕ್ಕೆ ಕೆಲಸಗಾರನ ಹತ್ಯೆ
ಡೇಟಿಂಗ್‌ ಆ್ಯಪಲ್ಲಿ ಪರಿಚಯವಾದಯುವಕನ ದರೋಡೆ: ನಾಲ್ವರ ಸೆರೆ