ಚಿಂತಾಮಣಿ: ತಾಲೂಕು ಬೋಡಗುಂಡ್ಲಹಳ್ಳಿ ಗ್ರಾಮದಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಬೃಹತ್ ಪ್ರಮಾಣದ ಸ್ಫೋಟಕಗಳು ಹಾಗೂ ಮಾರಕ ಆಯುಧಗಳನ್ನು ವಶಕ್ಕೆ ಪಡೆದುಕೊಂಡು ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ.
ಖಚಿತ ಮಾಹಿತಿ ಆಧರಿಸಿ ಬಟ್ಲಹಳ್ಳಿ ಮತ್ತು ಕೆಂಚರ‍್ಲಹಳ್ಳಿ ಪೊಲೀಸರು ದಾಳಿ ನಡೆಸಿದ್ದು, ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಸುಮಾರು 150 ನಾಡಬಾಂಬ್‌ಗಳು ಹಾಗೂ ಒಂದು ನಾಡಬಂದೂಕನ್ನು ವಶಪಡಿಸಿಕೊಂಡಿದ್ದಾರೆ. ಕೆಂಚರ‍್ಲಹಳ್ಳಿ ಪೊಲೀಸ್ ಠಾಣೆಯ ನಾರಾಯಣಸ್ವಾಮಿ ಮತ್ತು ಬಟ್ಲಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಶಿವಕುಮಾರ್, ಎಎಸ್‌ಐ ಮುಕ್ತಿಯಾರ್ ಪಾಷಾ ಪೊಲೀಸ್ ತಂಡ ದಾಳಿ ಮಾಡಿ ಮನೆಯಲ್ಲಿ ನರಸಿಂಹಪ್ಪ ಸಂಗ್ರಹಿಸಿದ್ದ 150 ನಾಡಬಾಂಬ್ ಮತ್ತು ನಾಡಬಂದೂಕನ್ನು ವಶಕ್ಕೆ ಪಡೆದು ವ್ಯಕ್ತಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯು ಇಷ್ಟೋಂದು ಬೃಹತ್ ಪ್ರಮಾಣದ ಸ್ಫೋಟಕಗಳು ಮತ್ತು ಬಂದೂಕನ್ನು ಯಾವ ಉದ್ದೇಶ, ಏತಕ್ಕಾಗಿ ಹಾಗೂ ಯಾವ ಕೃತ್ಯವನ್ನು ಎಸಗಲು ಸಂಗ್ರಹಿಸಿಟ್ಟಿದ್ದ ಎಂಬ ಕುರಿತು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಬಟ್ಲಹಳ್ಳಿ ಪೊಲೀಸರು ಕಾನೂನು ರೀತಿ ಮುಂದಿನ ಕ್ರಮ ಜರುಗಿಸಿದ್ದಾರೆ.ಚಿತ್ರಶೀರ್ಷಿಕೆ: ಬೃಹತ್ ಪ್ರಮಾಣದ ಸ್ಫೋಟಕಗಳು ಹಾಗೂ ಮಾರಕ ಆಯುಧಗಳನ್ನು ವಶಕ್ಕೆ ಪಡೆದುಕೊಂಡು ಓರ್ವ ವ್ಯಕ್ತಿಯನ್ನು ಬಂಧಿಸಿರುವ ಚಿತ್ರ.