ಉಕ್ಕಿ ಹರಿದ ಭದ್ರೆ: ಭದ್ರಾವತಿಯಲ್ಲಿ ಪ್ರವಾಹ ಸೃಷ್ಠಿ

KannadaprabhaNewsNetwork |  
Published : Aug 01, 2024, 01:52 AM IST
ಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆಗೊಳಿಸಿರುವ ಹಿನ್ನಲೆಯಲ್ಲಿ ಬಿ.ಎಚ್ ರಸ್ತೆ, ಅಂಬೇಡ್ಕರ್ ನಗರದಲ್ಲಿ ಮನೆಗಳು ಜಲಾವೃತಗೊಂಡಿದ್ದು,  ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  | Kannada Prabha

ಸಾರಾಂಶ

ಭದ್ರಾ ಜಲಾಶಯದಿಂದ ನದಿಗೆ ಬಿಡುಗಡೆಗೊಳಿಸಲಾಗುತ್ತಿದ್ದು, ನೀರಿನ ಪ್ರಮಾಣ ಬುಧವಾರ ಬೆಳಗಿನ ಜಾವ ಸುಮಾರು ೪೧ ಸಾವಿರ ಕ್ಯುಸೆಕ್ ಏರಿಕೆಯಾಗಿದೆ.

ಕನ್ನಡಪ್ರಭ ವಾರ್ತೆ ಭದ್ರಾವತಿ

ಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ ಬೆನ್ನಲ್ಲೆ, ನಗರದ ಹೃದಯ ಭಾಗದಲ್ಲಿ ಭದ್ರೆ ಉಕ್ಕಿ ಹರಿದು ಬುಧವಾರ ಪ್ರವಾಹ ಉಂಟು ಮಾಡಿದೆ. ಇದರಿಂದಾಗಿ ನದಿತೀರದ ತಗ್ಗು ಪ್ರದೇಶಗಳ ಮನೆಗಳು ಜಲಾವೃತಗೊಂಡಿವೆ.

ಭದ್ರಾ ಜಲಾಶಯದಿಂದ ನದಿಗೆ ಬಿಡುಗಡೆಗೊಳಿಸಲಾಗುತ್ತಿದ್ದು, ನೀರಿನ ಪ್ರಮಾಣ ಬುಧವಾರ ಬೆಳಗಿನ ಜಾವ ಸುಮಾರು ೪೧ ಸಾವಿರ ಕ್ಯುಸೆಕ್ ಏರಿಕೆಯಾಗಿದೆ.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಇರುವ ಹೊಸ ಸೇತುವೆ ಬುಧವಾರ ಬೆಳಿಗ್ಗೆ ಸಂಪೂರ್ಣವಾಗಿ ಮುಳುಗಡೆಗೊಂಡಿದ್ದು, ಬಿ.ಎಚ್.ರಸ್ತೆ ಅಂಬೇಡ್ಕರ್ ವೃತ್ತದವರೆಗೂ ನೀರು ತುಂಬಿಕೊಂಡಿದೆ. ನಗರಸಭೆ ವ್ಯಾಪ್ತಿಯ ಮಾಧವ ನಗರ, ಗುಂಡೂರಾವ್ ಶೆಡ್, ಎಕಿನ್ಸಾ ಕಾಲೋನಿ, ಬಿ.ಎಚ್.ರಸ್ತೆ ಅಂಬೇಡ್ಕರ್ ಕಾಲೋನಿ, ಗೌಳಿಗರ ಬೀದಿ, ಚಾಮೇಗೌಡ ಏರಿಯಾ ಮತ್ತು ಕವಲಗುಂದಿ ಸೇರಿದಂತೆ ಇನ್ನಿತರ ತಗ್ಗು ಪ್ರದೇಶಗಳ ಒಟ್ಟು ಸುಮಾರು ೧೫೦ ಮನೆಗಳು ಜಲಾವೃತಗೊಂಡಿವೆ. ಸುಮಾರು ೭ ಮನೆಗಳು ಹಾನಿಗೊಳಗಾಗಿವೆ. ಇಲ್ಲಿನ ನಿವಾಸಿಗಳನ್ನು ತರೀಕೆರೆ ರಸ್ತೆಯ ವಳ್ಳುವರ್ ಕಲ್ಯಾಣ ಮಂಟಪ ಹಾಗೂ ಅಪ್ಪರ್ ಹುತ್ತಾ ಒಕ್ಕಲಿಗರ ಸಮುದಾಯ ಭವನದಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಸುಮಾರು ೪೦೦ ರಿಂದ ೫೦೦ ಮಂದಿ ಆಶ್ರಯ ಪಡೆದುಕೊಂಡಿದ್ದಾರೆ.

ಜಲಾವೃತಗೊಂಡಿರುವ ಪ್ರದೇಶಗಳಿಗೆ ಶಾಸಕ ಬಿ.ಕೆ.ಸಂಗಮೇಶ್ವರ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ತಹಸೀಲ್ದಾರ್ ಕೆ.ಆರ್.ನಾಗರಾಜು, ನಗರಸಭೆ ಪೌರಾ ಯುಕ್ತ ಪ್ರಕಾಶ್ ಎಂ.ಚನ್ನಪ್ಪನವರ್, ಸದಸ್ಯ ಜಾರ್ಜ್ ಸೇರಿದಂತೆ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಡೆಗೋಡೆ ನಿರ್ಮಾಣಕ್ಕೆ ಅಸ್ತು:

ಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆಗೊಳಿಸಿದ ಸಂದರ್ಭದಲ್ಲಿ ಹಲವಾರು ವರ್ಷಗಳಿಂದ ಬಿ.ಎಚ್ ರಸ್ತೆ,ಅಂಬೇಡ್ಕರ್ ನಗರದಲ್ಲಿ ಬಹಳಷ್ಟು ಮನೆಗಳು ಜಲಾವೃತಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕಾಮಗಾರಿ ಮಂಜೂರಾತಿಯಾಗಿದ್ದು, ಮುಂದಿನ ೬ ತಿಂಗಳಲ್ಲಿ ಆರಂಭಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದ ರಲ್ಲದೆ, ಪ್ರಸ್ತುತ ಜಲಾವೃತಗೊಂಡಿರುವ ಮನೆಗಳಿಗೆ ತಾತ್ಕಾಲಿಕವಾಗಿ ೧೦ ಸಾವಿರ ರು. ಹಾಗೂ ಹಾನಿಯಾದ ಮನೆ ಮನೆಗಳಿಗೆ ೧.೨೦ ಲಕ್ಷ ರು. ಪರಿಹಾರ ನೀಡಲಾಗುವುದು ಎಂದರು.

೫ ಲಕ್ಷ ರು. ಪರಿಹಾರ ನೀಡಿ:

ಕವಲಗುಂದಿ ಗ್ರಾಮದಲ್ಲಿ ಬೇರೆಡೆಗೆ ಸ್ಥಳಾಂತರಿಸಲಾಗಿರುವ ನಿವಾಸಿಗಳಿಗೆ ಮನೆ ನಿರ್ಮಿಸಿಕೊಳ್ಳಲು ಕೇವಲ ೩.೫ ಲಕ್ಷ ರು. ನೀಡಲಾಗಿದೆ. ಇದರಿಂದಾಗಿ ನಿವಾಸಿಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ. ೫ ಲಕ್ಷ ರು.ನೀಡಬೇಕೆಂಬುದು ಅವರ ಬೇಡಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಗಮನ ಹರಿಸುವಂತೆ ನಗರಸಭೆ ಸದಸ್ಯ ಜಾರ್ಜ್ ಒತ್ತಾಯಿಸಿದ್ದಾರೆ.

ಭದ್ರೆ ನೋಡಲು ಜನ ಸಾಗರ:

ನಗರದ ಹೃದಯದಲ್ಲಿ ಉಕ್ಕಿ ಹರಿಯುವ ಮೂಲಕ ಪ್ರವಾಹ ಉಂಟು ಮಾಡಿರುವ ಭದ್ರೆ ನೋಡಲು ಕೆಎಸ್‌ಆರ್‌ಟಿಸಿ ಮುಖ್ಯ ಬಸ್‌ ನಿಲ್ದಾಣದ ಸಮೀಪದ ಹೊಸ ಸೇತುವೆ ಬಳಿ ಜನರು ಜಮಾಯಿಸುತ್ತಿದ್ದಾರೆ.

ಒಂದೆಡೆ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿ ಸಂಚಾರ ಸ್ಥಗಿತಗೊಂಡಿದ್ದು, ಮತ್ತೊಂದೆಡೆ ನೀರು ಸಮೀಪದ ಮನೆಗಳಿಗೆ ನುಗ್ಗಿರುವುದು ಬಿ.ಎಚ್.ರಸ್ತೆ ಮುಖ್ಯರಸ್ತೆಯಲ್ಲಿ ಸಂಚಾರ ದಟ್ಟಣೆ ನಿರ್ಮಾಣಗೊಳ್ಳಲು ಕಾರಣವಾಗಿದೆ. ಈ ನಡುವೆ ಭದ್ರೆ ನೋಡಲು ಜನಸಾಗರ ಹರಿದು ಬರುತ್ತಿರುವುದು ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ