ಅನಿತಾಳ ಕೊಂದು ತಿಂದ ಶ್ವಾನಗಳ ಮಾಲೀಕ ಪತ್ತೆ, ಬಂಧನ

KannadaprabhaNewsNetwork |  
Published : Dec 08, 2025, 01:30 AM IST
(ಸಾಕಿದ ಶ್ವಾನಗಳೊಂದಿಗೆ ಶೈಲೇಶಕುಮಾರ) | Kannada Prabha

ಸಾರಾಂಶ

ದಾವಣಗೆರೆ ತಾಲೂಕಿನ ಹೊನ್ನೂರು ಗೊಲ್ಲರಹಟ್ಟಿ ಬಳಿ ಗುರುವಾರ ತಡರಾತ್ರಿ ನಾಯಿಗಳ ದಾಳಿಗೆ ವಿಧವೆ ಅನಿತಾ ದಾರುಣ ಸಾವು ಕಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-48ರ ಸರ್ವೀಸ್ ರಸ್ತೆಯ ಹೊನ್ನೂರು ಕ್ರಾಸ್ ಬಳಿ ಅಪಾಯಕಾರಿ ನಾಯಿಗಳನ್ನು ಬಿಟ್ಟುಹೋಗಿದ್ದ ಆರೋಪದ ಮೇಲೆ ದಾವಣಗೆರೆಯ ದೇವರಾಜ ಅರಸು ಬಡಾವಣೆ ವಾಸಿ ಶೈಲೇಶಕುಮಾರ ಎಂಬಾತನನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

- ಅರಸು ಬಡಾವಣೆ ನಿವಾಸಿ ಶೈಲೇಶಕುಮಾರ್ ಆರೋಪಿ । ಹೊನ್ನೂರು ಗೊಲ್ಲರಹಟ್ಟಿ ಬಳಿ ಮಹಿಳೆಯನ್ನು ಕೊಂದಿದ್ದ ರಾಟ್ ವೀಲರ್‌ಗಳು

- ಆಟೋದಲ್ಲಿ ನಾಯಿಗಳ ಸಾಗಿಸಿ ಹೊನ್ನೂರು ಬಳಿ ಬಿಟ್ಟುಹೋಗಿದ್ದ ಭೂಪ । ಸಿಸಿ ಕ್ಯಾಮೆರಾ ದೃಶ್ಯಗಳ ಆಧರಿಸಿ ಬಂಧನ, ಸ್ಥಳ ಮಹಜರು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ತಾಲೂಕಿನ ಹೊನ್ನೂರು ಗೊಲ್ಲರಹಟ್ಟಿ ಬಳಿ ಗುರುವಾರ ತಡರಾತ್ರಿ ನಾಯಿಗಳ ದಾಳಿಗೆ ವಿಧವೆ ಅನಿತಾ ದಾರುಣ ಸಾವು ಕಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-48ರ ಸರ್ವೀಸ್ ರಸ್ತೆಯ ಹೊನ್ನೂರು ಕ್ರಾಸ್ ಬಳಿ ಅಪಾಯಕಾರಿ ನಾಯಿಗಳನ್ನು ಬಿಟ್ಟುಹೋಗಿದ್ದ ಆರೋಪದ ಮೇಲೆ ದಾವಣಗೆರೆಯ ದೇವರಾಜ ಅರಸು ಬಡಾವಣೆ ವಾಸಿ ಶೈಲೇಶಕುಮಾರ ಎಂಬಾತನನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಶೈಲೇಶಕುಮಾರನನ್ನು ಹೊನ್ನೂರು ಕ್ರಾಸ್ ಬಳಿಯ ಸರ್ವೀಸ್ ರಸ್ತೆಗೆ ಕರೆದೊಯ್ದ ಪೊಲೀಸರು ಸ್ಥಳ ಮಹಜರು ನಡೆಸಿದರು. ಶೈಲೇಶ್‌ಕುಮಾರ್‌ ತನ್ನ ಜೋಡಿ ರಾಟ್ ವೀಲರ್ ನಾಯಿಗಳನ್ನು ಬಾಡಿಗೆಗೆ ಪಡೆದಿದ್ದ ಆಟೋ ರಿಕ್ಷಾವೊಂದರಲ್ಲಿ ಸಾಗಿಸಿ ಹೊನ್ನುರು ಕ್ರಾಸ್‌ ಬಳಿ ತಂದು ಬಿಟ್ಚುಹೋಗಿದ್ದನು. ಈ ಜೋಡಿ ರಾಟ್ ವೀಲರ್ ನಾಯಿಗಳು ಮಲ್ಲಶೆಟ್ಟಿಹಳ್ಳಿ ಗ್ರಾಮದ ವಾಸಿ, ಕಟ್ಟಡ ಕಾರ್ಮಿಕ ಮಹಿಳೆ ಅನಿತಾ ಅವರ ಮೇಲೆರಗಿ, ದಾರುಣವಾಗಿ ದೇಹದ ಹಲವಾರು ಕಡೆ ಕಚ್ಚಿ ತಿಂದು, ಕೊಂದು ಹಾಕಿದ್ದವು.

ದೇವರಾಜ ಅರಸು ಬಡಾವಣೆಯಿಂದ ಹೊನ್ನೂರು ಕ್ರಾಸ್ ಬಳಿವರೆಗಿನ ರಸ್ತೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿ, ರಾಟ್‌ ವೀಲರ್‌ ಶ್ವಾನಗಳನ್ನು ಯಾರಿಂದ ಪಡೆದಿದ್ದರು ಎಂಬೆಲ್ಲಾ ಮಾಹಿತಿಗಳನ್ನು ಕಲೆ ಹಾಕಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಗ್ರಾಮಾಂತರ ವೃತ್ತ ನಿರೀಕ್ಷಕ ಕೆ.ಟಿ.ಅಣ್ಣಯ್ಯ ನೇತೃತ್ವದಲ್ಲಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

- - -

(ಬಾಕ್ಸ್‌-1)

* ಜೋಡಿ ರಾಟ್ ವೀಲರ್ ನಾಯಿಗಳು ಸಾವು - ಪೊಲೀಸರು, ಗ್ರಾಮಸ್ಥರ ಮೇಲೆರಗಿದ್ದಕ್ಕೆ ಬಿದ್ದಿದ್ದ ದೊಣ್ಣೆ ಏಟುಗಳು

- ಆಂತರಿಕ ರಕ್ತಸ್ರಾವದಿಂದ ಮೃತಪಟ್ಟಿರುವ ನರಭಕ್ಷಕ ನಾಯಿಗಳು

ದಾವಣಗೆರೆ: ಬಡ ಕೂಲಿ ಕಾರ್ಮಿಕ ಮಹಿಳೆ ಅನಿತಾ ಅವರನ್ನು ತಿಂದು ತೇಗಿದ್ದ ಜೋಡಿ ರಾಟ್ ವೀಲರ್ ನಾಯಿಗಳು ಸಹ ಈಗ ಬದುಕಿಲ್ಲ. ದೇಹದಲ್ಲಿ ಆಂತರಿಕ ರಕ್ತಸ್ರಾವದಿಂದಾಗಿ ಆ ಶ್ವಾನಗಳು ಸಾವನ್ನಪ್ಪಿವೆ.

ಯಾರೋ ಶ್ರೀಮಂತ ಕುಟುಂಬದವರು ಪ್ರತಿಷ್ಟೆಗೆ ಸಾಕಿದ್ದ ರಾಟ್ ವೀಲರ್ ನಾಯಿಗಳ ಜೋಡಿ ಸಹ ಮನೆಯವರ ಮೇಲೆಯೇ ದಾಳಿ ಮಾಡಿದ್ದಕ್ಕೋ, ಏನೋ ಕಳೆದ ಗುರುವಾರ ತಡರಾತ್ರಿ ಎರಡನ್ನೂ ಚೈನ್‌ಗೆ ಕಟ್ಟಿಕೊಂಡು ವಾಹನದಲ್ಲಿ ಬಂದು, ನಾಯಿಗಳನ್ನು ಇಲ್ಲಿ ಬಿಟ್ಟು ಹೋಗಿದ್ದರು. ನಿರ್ಜನ ಪ್ರದೇಶದಲ್ಲಿ ಯಾರ ಭಯವೂ ಇಲ್ಲದೇ ಸುತ್ತುತ್ತಿದ್ದವು ಈ ರಾಟ್ ವೀಲರ್‌ಗಳು. ಇದೇ ಸಮಯಕ್ಕೆ ಮನೆಯಲ್ಲಿ ಸಣ್ಣ ಘಟನೆಯಿಂದ ಮುನಿಸಿಕೊಂಡು ತವರು ಮನೆಗೆ ಹೊರಟಿದ್ದ ಮಲ್ಲಶೆಟ್ಟಿಹಳ್ಳಿ ಗ್ರಾಮದ ಅನಿತಾ (38) ಮೇಲೆ ನಿರ್ಜನ ಪ್ರದೇಶದಲ್ಲಿ ಜೋಡಿ ರಾಟ್ ವೀಲರ್‌ಗಳು ಹುಲಿ-ಸಿಂಹಗಳಂತೆ ದಾಳಿ ನಡೆಸಿದ್ದವು. ಆಕೆಯ ದೇಹದ 50ಕ್ಕೂ ಹೆಚ್ಚು ಕಡೆ ರಕ್ತ, ಮಾಂಸ ಕಿತ್ತು ಬರುವಂತೆ ಕಡಿದಿದ್ದ ಅವುಗಳು ಮನುಷ್ಯರ ರಕ್ತದ ರುಚಿ ಕಂಡಿದ್ದವು.

ಸಾವು-ಬದುಕಿನ ಮಧ್ಯೆ ರಸ್ತೆ ಬದಿಯಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ನರಳುತ್ತ ಬಿದ್ದಿದ್ದ ಅನಿತಾ ಅವರ ಮೊಬೈಲ್‌ ಬೆಳಕು ಹರಿಸುತ್ತ ಬಿದ್ದಿತ್ತು. ಅದೇ ಸಮಯಕ್ಕೆ ಬೆಳಕು ಗದ್ದೆಗೆ ನೀರು ಹರಿಸಲೆಂದು ಬೆಳಗಿನ ಜಾವ 3.30ರ ವೇಳೆಗೆ ಯುವ ರೈತನ ಆ ಮಾರ್ಗವಾಗಿ ಬಂದಾಗ ಆತನ ಕಣ್ಣಿಗೆ ಬೆಳಕೊಂದು ಕಂಡಿದೆ. ತಕ್ಷಣ ಸ್ಥಳಕ್ಕೆ ಹೋಗಿ ನೋಡಿದಾಗ ಅದು ಅನಿತಾ ಅವರ ಮೊಬೈಲ್‌ ಬೆಳಕಾಗಿತ್ತು. ಅಲ್ಲದೆ, ಆಕೆ ಮೇಲೆ ನಾಯಿಗಳು ದಾಳಿ ನಡೆಸಿದ್ದು ಗೊತ್ತಾಗಿದೆ. ತಕ್ಷಣ‍ವೇ ಪೊಲೀಸ್ ಸಹಾಯವಾಣಿ, ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಹೊನ್ನೂರು ಗೊಲ್ಲರಹಟ್ಟಿ ಗ್ರಾಮಸ್ಥರಿಗೆ ಯುವ ರೈತ ವಿಷಯ ಮುಟ್ಟಿಸಿದ್ದಾರೆ.

ಸ್ಥಳಕ್ಕೆ ಧಾವಿಸಿದ ಪೊಲೀಸ್ ಗಸ್ತು ವಾಹನದ ಸಿಬ್ಬಂದಿ ಘಟನಾ ಸ್ಥಳಕ್ಕೆ ಬರುವಷ್ಟರಲ್ಲಿ ಎಲ್ಲೋ ಹೋಗಿದ್ದ ರಾಟ್ ವೀಲರ್ ನಾಯಿಗಳು ಮತ್ತೆ ಬೊಗಳುತ್ತ ಅನಿತಾ ಬಿದ್ದಿದ್ದ ಸ್ಥಳಕ್ಕೇ ಧಾವಿಸಿವೆ. ಆಗ ನಾಯಿಗಳನ್ನು ಸೆರೆಹಿಡಿಯಲು ಪೊಲೀಸರು ಹಾಗೂ ಅದೇ ಅಲ್ಲಿಗೆ ಧಾವಿಸಿದ ಗ್ರಾಮಸ್ಥರು ಪ್ರಯತ್ನಿಸಿದ್ದಾರೆ. ರಾಟ್ ವೀಲರ್ ನಾಯಿಗಳನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ ಕೋಲು, ಪೈಪ್‌, ಪೋಲ್ಸ್‌ಗಳಿಂದ ಹೊಡೆದು, ಮಣಿಸಿದ್ದಾರೆ. ಬಳಿಕ ಹಗ್ಗ ಬಿಗಿದುಕೊಂಡು ಗ್ರಾಮಕ್ಕೆ ತಂದಿದ್ದರು.

ಗ್ರಾಮಸ್ಥರು, ಪೊಲೀಸರ ಮೇಲೆ ಎರಗಿ ಬಂದಿದ್ದ ರಾಟ್ ವೀಲರ್‌ಗಳಿಗೆ ಬಿದ್ದ ಹೊಡೆತಗಳಿಂದಾಗಿ ಶ್ವಾನಗಳ ದೇಹದಲ್ಲಿ ಆಂತರಿಕ ರಕ್ತಸ್ರಾವ ಉಮಟಾಗಿ ಎರಡೂ ಸಾವನ್ನಪ್ಪಿವೆ. ಈ ಸಾಮಾನ್ಯ ನಾಯಿಗಳಾಗಿರದೇ, ಹುಚ್ಚು ಹಿಡಿದ ನಾಯಿಗಳಂತೆ ವರ್ತಿಸುತ್ತಿದ್ದುದು ಆ ಕ್ಷಣಕ್ಕೆ ಗ್ರಾಮಸ್ಥರಲ್ಲಿ ಮತ್ತಷ್ಟು ಭಯ ಹುಟ್ಟಿಸಿತ್ತು. ಅತ್ತ ಕಡೆ ಗಂಭೀರ ಗಾಯಗೊಂಡಿದ್ದ ಅನಿತಾ ದಾವಣಗೆರೆ ಆಸ್ಪತ್ರೆಗೆ ಕರೆದೊಯ್ದಿದ್ದಾಗ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಸಾಗಿಸಲು ತಿಳಿಸಲಾಗಿತ್ತು. ಬೆಂಗಳೂರಿಗೆ ಹೋಗುವ ಮಾರ್ಗದಲ್ಲಿ ಶಿರಾ ಬಳಿ ಆಕೆ ಸಾವನ್ನಪ್ಪಿದ್ದರು. ಶಿರಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿಸಿ, ಶನಿವಾರ ಆಕೆಯ ಅಂತ್ಯಕ್ರಿಯೆಯನ್ನು ಮಲ್ಲಶೆಟ್ಟಿಹಳ್ಳಿ ಗ್ರಾಮದ ಸ್ಮಶಾನದಲ್ಲಿ ನಡೆಸಲಾಯಿತು. ಈಗ ರಾಟ್‌ವೀಲರ್‌ ನಾಯಿಗಳ ಮಾಲೀಕನನ್ನೂ ಬಂಧಿಸಿರುವ ಗ್ರಾಮಾಂತರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- - -

(ಬಾಕ್ಸ್‌-2)

* ರಾಟ್ ವೀಲರ್ ಮಾಲೀಕನ ವಿರುದ್ಧ ಶ್ವಾನಪ್ರಿಯರು ಕಿಡಿ ದಾವಣಗೆರೆ: ಜೋಡಿ ರಾಟ್ ವೀಲರ್ ನಾಯಿಗಳು ಬಡ ಮಹಿಳೆಯನ್ನು ಬಲಿ ಪಡೆದ ಬೆನ್ನಲ್ಲೇ ನಾಯಿ ಮಾಲೀಕ ಶೈಲೇಶಕುಮಾರ ವಿರುದ್ಧ ದಾವಣಗೆರೆಯ ಶ್ವಾನಪ್ರಿಯರು ತೀವ್ರ ಆಕ್ರೋಶಗೊಂಡಿದ್ದಾರೆ.

ನಾಯಿಗಳನ್ನು ಸಾಕಲಾಗದಿದ್ದರೆ ಸಂಬಂಧಿಸಿದ ಇಲಾಖೆಗೆ ಅವುಗಳನ್ನು ಹಸ್ತಾಂತರಿಸಬಹುದಿತ್ತು. ಆಕಸ್ಮಾತ್ ಆ ನಾಯಿಗಳಿಗೆ ಹುಚ್ಚು ಹಿಡಿದಿದ್ದರೆ, ಕಾಯಿಲೆಗೆ ಅವು ತುತ್ತಾಗಿದ್ದರೆ ದಯಾಮರಣಕ್ಕೂ ಕಾನೂನಿನಲ್ಲಿ ಅವಕಾಶವಿತ್ತು ಎಂದು ಡಾಗ್ ಹ್ಯಾಂಡ್ಲರ್‌ಗಳಾದ ನಂದೀಶ, ಶ್ವಾನಪ್ರೇಮಿ ಸಚಿನ್ ಇತರರು ಹೇಳಿದ್ದಾರೆ.

ಕಡೇಪಕ್ಷ ರಾಟ್‌ವೀಲರ್‌ಗಳನ್ನು ಸಾಕಲಾಗದಿದ್ದರೆ ಬೇರೆ ಯಾರಿಗಾದರೂ ಸಾಕಲು ನೀಡಬಹುದಿತ್ತು. ಹೀಗೆ ಹೊನ್ನೂರು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ಕ್ರಾಸ್‌ನಲ್ಲಿ ರಾತ್ರೋರಾತ್ರಿ ಅವುಗಳನ್ನು ಗಾಗಿಸಿ, ಕೈಬಿಟ್ಟು ಹೋಗಿದ್ದರಿಂದ ಅನಿತಾ ನಾಯಿಗಳಿಗೆ ಬಲಿಯಾಗಿದ್ದಾಳೆ. ಆಕೆಯ ಸಾವಿಗೆ ಕಾರಣವಾದ ಎರಡೂ ರಾಟ್ ವೀಲರ್‌ಗಳೂ ಈಗ ಹೊಡೆತ ತಿಂದು ಸಾವನ್ನಪ್ಪಿವೆ. ನಾಯಿಗಳ ಜೊತೆಗೆ ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದೂ ಮುಖ್ಯ. ನಾಯಿ ಸಾಕುವವರು ಇದನ್ನೆಲ್ಲಾ ಅರಿಯಬೇಕು. ಹೀಗೆ ಎಲ್ಲೆಂದರಲ್ಲಿ ನಾಯಿಗಳನ್ನು ಬಿಟ್ಟು ಹೋಗುವುದು ಮತ್ತೊಬ್ಬರಿಗೆ ಅಪಾಯ, ಸಂಕಷ್ಟ ತಂದೊಡ್ಡಿದಂತೆ ಎಂದು ಅನೇಕ ಶ್ವಾನಪ್ರಿಯರು ಕಿಡಿಕಾರಿದ್ದಾರೆ.

- - -

(ಬಾಕ್ಸ್‌-3) ನನ್ನ, ಮಾವನ ಮೇಲೆ ದಾಳಿ ಮಾಡಿದ್ದವು: ಮಾಲೀಕ

- ಶೈಲೇಶ ಕುಮಾರ್‌ಗೆ ನ್ಯಾಯಾಂಗ ಬಂಧನ: ಪೊಲೀಸ್ ಇಲಾಖೆ ಪ್ರಕಟಣೆ

ದಾವಣಗೆರೆ: ನನ್ನ ರಾಟ್‌ ವೀಲರ್‌ ಶ್ವಾನಗಳು ನನ್ನ ಹಾಗೂ ಮಾವನ ಮೇಲೆ ದಾಳಿ ಮಾಡಿ, ಹೊಟ್ಟೆಗೆ ಪರಚಿದ್ದದ್ದವು. ಈ ಕಾರಣಕ್ಕೆ ನಾನೇ ಸಾಕಿದ್ದ ನಾಯಿಗಳ ಪೈಕಿ 2 ರಾಟ್ ವೀಲರ್‌ ನಾಯಿಗಳನ್ನು ತಾಲೂಕಿನ ಹೊನ್ನೂರು ಕ್ರಾಸ್ ಬಳಿ ಬಿಟ್ಟು ಬಂದಿದ್ದೆ ಎಂದು ಮಾಲೀಕ ಪಿ.ಶೈಲೇಶಕುಮಾರ್‌ (27) ಪೊಲೀಸರಿಗೆ ತಿಳಿಸಿದ್ದಾರೆ.ಮಹಿಳೆ ಅನಿತಾಳ ಸಾವಿಗೆ ಕಾರಣವಾದ ನಾಯಿಗಳ ಮಾಲೀಕ, ದಾವಣಗೆರೆ ದೇವರಾಜ ಅರಸು ಬಡಾವಣೆ ಶೈಲೇಶಕುಮಾರನನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಶೈಲೇಶಕುಮಾರ ಬ್ರಾಡೋ, ಪಪ್ಪಿ ಹಾಗೂ ಹೀರೋ ಹೆಸರಿನ ನಾಯಿಗಳನ್ನು ಸಾಕಿದ್ದಾರೆ. ಈ ಪೈಕಿ ರಾಟ್ ವೀಲರ್ ನಾಯಿಗಳಾದ ಪಪ್ಪಿ, ಹೀರೋ ಇತ್ತೀಚೆಗೆ ತಮ್ಮ ಮೇಲೆ ದಾಳಿ ಮಾಡಲು ಬರುತ್ತಿದ್ದವು. ತನ್ನ ಹಾಗೂ ಮಾವ ಶಿವಕುಮಾರ ಅವರ ಮೇಲೂ ದಾಳಿ ನಡೆಸಿ, ಹೊಟ್ಟೆಗೆ ಪರಚಿದ್ದವು. ಇದರಿಂದಾಗಿ ಡಿ.4ರಂದು ರಾತ್ರಿ 10.30ರ ವೇಳೆಗೆ ಹೊನ್ನೂರು ಗೊಲ್ಲರಹಟ್ಟಿ ಬಳಿ ಅವುಗಳನ್ನು ಬಿಟ್ಟುಬಂದಿದ್ದಾಗಿ ಬಂಧಿತ ಶೈಲೇಶಕುಮಾರ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾರೆ.

ಮೃತ ಅನಿತಾಳ ಶವವನ್ನು ಮಲ್ಲಶೆಟ್ಟಿಹಳ್ಳಿಗೆ ತಂದಿದ್ದಾಗ ಶಾಸಕ ಕೆ.ಎಸ್.ಬಸವಂತಪ್ಪ ಅಂತಿಮ ದರ್ಶನ ಪಡೆದು, ನಾಯಿಗಳ ಮಾಲೀಕರನ್ನು ಪತ್ತೆ ಮಾಡಿ, ಕಠಿಣ ಶಿಕ್ಷೆ ವಿಧಿಸುವಂತೆ ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್.ಬಸವರಾಜ, ಗ್ರಾಮಾಂತರ ವೃತ್ತ ನಿರೀಕ್ಷಕ ಕೆ.ಟಿ.ಅಣ್ಣಯ್ಯಗೆ ಸೂಚನೆ ನೀಡಿದ್ದರು. ಎಸ್ಪಿ ಉಮಾ ಪ್ರಶಾಂತ, ಎಎಸ್ಪಿ ಪರಮೇಶ್ವರ ಹೆಗಡೆ, ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್.ಬಸವರಾಜ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ ಕೆ.ಟಿ.ಅಣ್ಣಯ್ಯ ನೇತೃತ್ವದಲ್ಲಿ ಎಎಸ್‌ಐ ರಮೇಶ, ನಾಗಭೂಷಣ ಅವರನ್ನು ಒಳಗೊಂಡ ತಂಡ ಶ್ವಾನಗಳ ಮಾಲೀಕನ ಪತ್ತೆ ಕಾರ್ಯಾಚರಣೆಗೆ ಇಳಿದಿತ್ತು. ವಿವಿಧ ಬಾತ್ಮಿದಾರರಿಂದ ಮಾಹಿತಿ ಸಂಗ್ರಹಿಸಿದ್ದ ಪೊಲೀಸರು ಕಡೆಗೂ ನಾಯಿಗಳ ಮಾಲೀಕ ಪಿ.ಶೈಲೇಶಕುಮಾರನನ್ನು ದೇವರಾಜ ಅರಸು ಬಡಾವಣೆಯಲ್ಲಿ ಬಂಧಿಸಿದ್ದಾರೆ.ಬಂಧಿತ ಶೈಲೇಶಕುಮಾರನ ವಿರುದ್ಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ:403/2025 ಕಲಂ:291, 105, 106(1) ಬಿ.ಎನ್.ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಶೈಲೇಶ ಕುಮಾರನನ್ನು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.- - -

-7ಕೆಡಿವಿಜಿ2, 3:

ರಾಟ್ ವೀಲರ್ ನಾಯಿಗಳ ಮಾಲೀಕ ಶೈಲೇಶಕುಮಾರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೈಲಲ್ಲೂ ದರ್ಶನ್‌ಗೆ ‘ಅಭಿಮಾನಿಗಳು’ ಕಾಟ!
ನಾಳೆ ಹಲವು ಸಾಧಕರಿಗೆ ಗಾಂಧಿ ಪುರಸ್ಕಾರ ಪ್ರದಾನ