ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ರಬಕವಿ-ಬನಹಟ್ಟಿ ಅವಳಿ ನಗರಗಳು ರಾಜ್ಯದಲ್ಲಿಯೇ ಪ್ರಮುಖ ಜವಳಿ ಕೇಂದ್ರವಾಗಿ ಹೆಸರಾಗಿದ್ದು, ಸಾವಿರಾರು ಕುಟುಂಬಗಳು ಪವರ್ಲೂಮ್ ಉದ್ಯಮವನ್ನು ಅವಲಂಬಿಸಿವೆ. ಕಳೆದ ಕೆಲವು ದಿನಗಳಿಂದ ಮಜೂರಿ ಹೆಚ್ಚಳದ ಬೇಡಿಕೆ ಮುಂದಿಟ್ಟುಕೊಂಡು ಬನಹಟ್ಟಿಯ ನೇಕಾರರು ಮಗ್ಗಗಳ ನೇಯ್ಗೆ ಕಾರ್ಯ ಸ್ಥಗಿತಗೊಳಿಸಿದ್ದರಿಂದ ನಗರದಲ್ಲಿನ ಜವಳಿ ಚಟುವಟಿಕೆಗಳು ಸಂಪೂರ್ಣವಾಗಿ ಸ್ತಬ್ಧಗೊಂಡಿದ್ದವು. ಇದರಿಂದ ನೇಕಾರರು, ಮಾಲೀಕರು ಹಾಗೂ ಉದ್ಯಮಕ್ಕೆ ಸಂಬಂಧಿಸಿದ ವಿವಿಧ ವರ್ಗಗಳ ಮೇಲೆ ಪರಿಣಾಮ ಉಂಟಾಗಿತ್ತು.
ನೇಕಾರರ ಸಂಘವು ಪ್ರತಿ 2 ವರ್ಷಗಳಿಗೊಮ್ಮೆ ಮಜೂರಿ ಪರಿಷ್ಕರಣೆ ಮಾಡುವಂತೆ ಒತ್ತಾಯಿಸುತ್ತಿದ್ದು, ಸಾಮಾನ್ಯವಾಗಿ ಶೇ.10 ರಿಂದ 20ರಷ್ಟು ವೇತನ ಹೆಚ್ಚಳದ ಬೇಡಿಕೆ ಮುಂದೆವರಿಸುತ್ತದೆ. ಈ ಬಾರಿಯೂ ನೇಕಾರರ ಸಂಘದ ಮುಖಂಡರು ಶೇ.20ರಷ್ಟು ಮಜೂರಿ ಹೆಚ್ಚಳಕ್ಕೆ ಆಗ್ರಹಿಸಿದ್ದರು.ಈ ಹಿನ್ನೆಲೆಯಲ್ಲಿ ಭಾನುವಾರ ಬನಹಟ್ಟಿ ಪವರ್ಲೂಮ್ ಮಾಲೀಕರ ಸಂಘ ಹಾಗೂ ನೇಕಾರರ ಸಂಘದ ಪ್ರಮುಖರ ನಡುವೆ ನಡೆದ ಮಾತುಕತೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಎರಡೂ ಪಕ್ಷಗಳು ಪರಸ್ಪರ ಸಹಕಾರ ಮತ್ತು ಉದ್ಯಮದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸಂಧಾನಕ್ಕೆ ಮುಂದಾದ ಪರಿಣಾಮ, ಈಗಿರುವ ಮಜೂರಿಯ ಮೇಲೆ ಶೇ.10ರಷ್ಟು ಹೆಚ್ಚಳ ಮಾಡುವ ನಿರ್ಧಾರಕ್ಕೆ ನೇಕಾರ ಧುರೀಣರಾದ ಎನ್.ಎಸ್.ದೇವರವರ, ರವೀಂದ್ರ ಹಳಿಂಗಳಿ ಹಾಗೂ ಮಾಲೀಕರ ಸಂಘದ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತೆಂದು ಅಸೋಶಿಯೇಶನ್ ಅಧ್ಯಕ್ಷ ಶಂಕರ ಜಾಲಿಗಿಡದ ತಿಳಿಸಿದರು.
-ಕಾರ್ಯದರ್ಶಿ ಪ್ರಭು ಕರಲಟ್ಟಿ, ಪವರ್‌ಲೂಮ್ ಮಾಲೀಕರ ಸಂಘ, ಬನಹಟ್ಟಿ.
-ಎನ್.ಎಸ್.ದೇವರವರ, ಉಪಾಧ್ಯಕ್ಷ, ಕಾರ್ಮಿಕ ಸಂಘಟನೆ, ಬನಹಟ್ಟಿ.