ಸಾಕಿದ ನಾಯಿ ಕಚ್ಚಿದರೆ ಮಾಲೀಕರೆ ಹೋಣೆಗಾರರು: ಹೈಕೋರ್ಟ್‌

KannadaprabhaNewsNetwork |  
Published : Jul 07, 2026, 04:15 AM ISTUpdated : Jul 07, 2026, 04:53 AM IST
Karnataka High court

ಸಾರಾಂಶ

ಮಹಿಳೆಯೊಬ್ಬರ ಮುಖಕ್ಕೆ ನಾಯಿ ಕಚ್ಚಿದ ಪ್ರಕರಣದಲ್ಲಿ ನಾಯಿ ಮಾಲೀಕರ ವಿರುದ್ಧ‌ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಲು ನಿರಾಕರಿಸಿರುವ ಹೈಕೋರ್ಟ್,‌‘ನಾಯಿಯನ್ನು‌ ಕಟ್ಟಿಹಾಕದೆ ಬಿಟ್ಟು, ಅದರಿಂದ ಬೇರೆಯವರ ಮೇಲೆ ದಾಳಿಯಾದರೆ, ಘಟನೆಗೆ ನಾಯಿ ಸಾಕುವವರೇ ಹೊಣೆ’ ಎಂದು ಕಟುವಾಗಿ ನುಡಿದಿದೆ.

 ಬೆಂಗಳೂರು :  ಮಹಿಳೆಯೊಬ್ಬರ ಮುಖಕ್ಕೆ ನಾಯಿ ಕಚ್ಚಿದ ಪ್ರಕರಣದಲ್ಲಿ ನಾಯಿ ಮಾಲೀಕರ ವಿರುದ್ಧ‌ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಲು ನಿರಾಕರಿಸಿರುವ ಹೈಕೋರ್ಟ್,‌‘ನಾಯಿಯನ್ನು‌ ಕಟ್ಟಿಹಾಕದೆ ಬಿಟ್ಟು, ಅದರಿಂದ ಬೇರೆಯವರ ಮೇಲೆ ದಾಳಿಯಾದರೆ, ಘಟನೆಗೆ ನಾಯಿ ಸಾಕುವವರೇ ಹೊಣೆ’ ಎಂದು ಕಟುವಾಗಿ ನುಡಿದಿದೆ.ನಾಯಿ ಕಚ್ಚಿದ ಪ್ರಕರಣ ಸಂಬಂಧ ‌ತಮ್ಮ ವಿರುದ್ಧ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕೆಂದು ಕೋರಿ‌ ಇಂದಿರಾನಗರದ ಲಲಿತಾ ಗೋಪಾಲಕೃಷ್ಣನ್‌ (40) ಎಂಬಾಕೆ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ರೀತಿ ನುಡಿದಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮನೆಯ ಸಾಕು ನಾಯಿಗೆ ದೂರುದಾರರು ಪರಿಚಿತರೇ ಆಗಿದ್ದು, ನಾಯಿಗೆ ಅವರೇ ಮುಖವೊಡ್ಡಿದ್ದರಿಂದ ಘಟನೆ ನಡೆದಿದೆ.‌ ಪೋಲೀಸರು ಮಹಜರು‌ ಮಾಡಿಲ್ಲ. ವೈದ್ಯಕಿಯ ವರದಿಯಲ್ಲಿ ದೂರುದಾರೆಗೆ ಯಾವುದೇ ಗಾಯದ ಗುರುತುಗಳ ಬಗ್ಗೆ ದಾಖಲೆ ಇಲ್ಲ. ಅಷ್ಟಕ್ಕೂ ಈ ನಾಯಿಯ ತಳಿ ಅಪಾಯಕಾರಿಯಾದದ್ದೇನೂ ಅಲ್ಲ.‌‌ ಒಂದು ತಿಂಗಳ ನಂತರ ದೂರು ದಾಖಲಿಸಲಾಗಿದೆ. ದೂರು ದಾಖಲಿಸುವ ಮುನ್ನ ದೂರುದಾರೆ ಹಣ‌‌ ಕೇಳಿದರು ಎಂದು ತಿಳಿಸಿದರು.

ಆಗ ನ್ಯಾಯಪೀಠ  

ನಾಯಿ ಅಂದರೆ ನಾಯೀನೇ. ನಾಯಿಯನ್ನು ಕಟ್ಟಿಹಾಕದೇ ಬಿಟ್ಟಿದ್ದು ಬೇಜವಾಬ್ದಾರಿ.‌‌‌ ಹಾಗೆ ಬಿಟ್ಟ ನಾಯಿ, ಬೇರೆಯವರೆ ಮೇಲೆ‌ ದಾಳಿ ನಡೆಸಿದರೆ, ನಾಯಿ ಮಾಲೀಕರು‌ ಹೊಣೆಯಾಗಬೇಕು‌.‌ ಪ್ರಕರಣದಲ್ಲಿ ಮಧ್ಯಪ್ರವೇಶಿಸಲಾಗದು.‌‌‌‌ ಇದು ನಾಯಿ ಸಾಕುವವರಿಗೆಲ್ಲರಿಗೂ ಎಚ್ಚರಿಕೆಯ ಪಾಠವಾಗಬೇಕು. ಬೇಜವಾಬ್ದಾರಿ ತೋರುವ ನಾಯಿಗಳ ಮಾಲೀಕರ ಮೇಲಿನ ಪ್ರಕರಣ ರದ್ದಪಡಿಸಲು ಸಾಧ್ಯವಿಲ್ಲ‌ ಎಂದು ಕಟುವಾಗಿಯೇ ನುಡಿಯಿತು.

ಪ್ರಕರಣದಲ್ಲಿ ಈಗಾಗಲೇ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.‌‌‌ ಆರೋಪದಿಂದ ಕೈಬಿಡುವಂತೆ ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿ ಎಂದು ‌ಸೂಚಿಸಿತು.‌ ಇದರಿಂದ ಅರ್ಜಿಯನ್ನು ಅರ್ಜಿದಾರರ ಪರ ವಕೀಲರು ಅರ್ಜಿ ‌ಹಿಂಪಡೆದುಕೊಂಡರು.

ಪ್ರಕರಣ ಹಿನ್ನೆಲೆ:

ಪ್ರಕರಣದ ದೂರುದಾರೆಯಾದ ಎಲ್ಹಮ್ ರೇಜಾ ಎಂಬಾಕೆ 2026ರ ಮಾ.28ರಂದು ಇಂದಿರಾನಗರ ಠಾಣಾ‌ ಪೊಲೀಸರಿಗೆ ದೂರು‌ ನೀಡಿದ್ದು, ಫೆ.23ರಂದು‌‌ ಇಂದಿರಾನಗರದ 2ನೇ ಹಂತದ ಅಪಾರ್ಟ್ಮೆಂಟ್‌ನಲ್ಲಿ ನನ್ನ ಸ್ನೇಹಿತರಾದ ಲಲಿತಾ ಮನೆಗೆ ಹೋಗಿದ್ದೆ. ಅವರ ಮನೆಯ ನಾಯಿ ನನ್ನ ಮುಖಕ್ಕೆ ಕಚ್ಚಿರುತ್ತದೆ. ಇದಕ್ಕೆ ನಾಯಿಯ ಮಾಲೀಕರಾದ ಕಾರ್ತಿಕ್ ಶ್ರೀವಾತ್ಸವ ಹಾಗೂ ಅವರ ಪತ್ನಿ ಲಲಿತಾ ಅವರ ಬೇಜಾವಾಬ್ದಾರಿತನದಿಂದ ಈ ಘಟನೆ ಸಂಭವಿಸಿದೆ. ಹಾಗಾಗಿ, ಅವರ ವಿರುದ್ಧ ಸೂಕ್ತ ಕ್ರಮ ಕೈಗೋಳ್ಳಬೇಕು ಎಂದು ಕೋರಿದ್ದರು.‌

ಇದರಿಂದ‌ ಪ್ರಕರಣ‌ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು, ಕಾರ್ತಿಕ್ ಶ್ರೀವಾತ್ಸವ ಹಾಗೂ ಅವರ ಪತ್ನಿ ಲಲಿತಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆ-2023ರ ಸೆಕ್ಷನ್ 291ರ (ಪ್ರಾಣಿಗಳಿಗೆ ಸಂಬಂಧಿಸಿದ ನಿರ್ಲಕ್ಷ್ಯದ ನಡವಳಿಕೆ) ಅಡಿಯಲ್ಲಿ ದೋಷಾರೋಪ‌ ಪಟ್ಟಿ ಸಲ್ಲಿಸಿದ್ದರು.‌ ಪ್ರಕರಣವು ನಗರದ ಈ 10ನೇ ಎಸಿಎಂಎಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಆನ್ ಸಂಸ್ಥೆ ಸಹಯೋಗದಿಂದ ಶಿಶು ಮಂದಿರದಲ್ಲಿ 12 ಎಲೆಕ್ಟ್ರಿಕ್ ಆಟೋರಿಕ್ಷಾಗಳನ್ನು ಹಸ್ತಾಂತರ
ರಾಮಚರಿತ ಮಾನಸ ಸೇರಿ ಅಮೂಲ್ಯ ಕಾಣಿಕೆ ಪ್ರದರ್ಶನ