ಕುಮಟಾ: ಕತಗಾಲ ಅರಣ್ಯ ಪ್ರದೇಶದಲ್ಲಿ ಶಿಕ್ಷಣ, ಪ್ರವಾಸೋದ್ಯಮ ಹಾಗೂ ಪರಿಸರ ಪೂರಕವಾಗಿ ಸಸ್ಯೋದ್ಯಾನ (ಟ್ರೀಪಾರ್ಕ್) ನಿರ್ಮಾಣಕ್ಕೆ ಉದ್ದೇಶಿಸಿದ್ದು, ಶೀಘ್ರ ಈ ಕುರಿತು ಪ್ರಕ್ರಿಯೆಗಳು ಆರಂಭಗೊಳ್ಳಲಿದೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.
ಸಸ್ಯೋದ್ಯಾನ ನಿರ್ಮಿಸುವ ನಮ್ಮ ಮುಖ್ಯ ಉದ್ದೇಶ, ಪ್ರವಾಸೋದ್ಯಮ ಉತ್ತೇಜಿಸುವ ಜತೆಗೆ ಪರಿಸರದ ಸುಧಾರಣೆಯತ್ತ ಗಮನಹರಿಸುವುದಾಗಿದೆ. ಪ್ರಕೃತಿಯೊಂದಿಗೆ ಮನುಷ್ಯನಿಗೆ ನಿಕಟ ಸಂಬಂಧ ಬೆಳೆಸಲು, ಶುದ್ಧ ವಾಯು ಮತ್ತು ಆರೋಗ್ಯಕರ ಪರಿಸರ ಒದಗಿಸಲು, ಸಸ್ಯೋದ್ಯಾನದೊಟ್ಟಿಗೆ ಆಮ್ಲಜನಕ ಉದ್ಯಾನ (ಆಕ್ಸಿಜನ್ ಪಾರ್ಕ್) ನಿರ್ಮಿಸಲು ಯೋಜನೆ ರೂಪಿಸಿಕೊಂಡಿದ್ದೇವೆ. ಇದು ಸ್ಥಳೀಯ ಜನತೆಗೂ ಪ್ರಯೋಜನಕಾರಿಯಾಗಲಿದೆ ಮತ್ತು ಮಕ್ಕಳಿಗೆ ಅರಣ್ಯ ಜ್ಞಾನವನ್ನು ನೀಡುವ ಶೈಕ್ಷಣಿಕ ಸ್ಥಳವಾಗಿ ಪರಿಣಮಿಸಲಿದೆ. ಪ್ರಕೃತಿಯ ಸೌಂದರ್ಯ ಅನುಭವಿಸಲು ಮತ್ತು ಅದನ್ನು ಸಂರಕ್ಷಿಸಲು ಇದು ಉತ್ತಮ ಹೆಜ್ಜೆಯಾಗಲಿದೆ ಎಂದು ವಿವರಿಸಿದರು.
ಜಿಪಂ ಮಾಜಿ ಸದಸ್ಯ ಹಾಗೂ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಗಜಾನನ ಪೈ, ಅಳಕೋಡ ಗ್ರಾಪಂ ಅಧ್ಯಕ್ಷ ದೇವು ಗೌಡ, ಮೋಹನ, ಶ್ರೀಧರ ಪೈ, ಎಸಿಎಫ್ ಕೃಷ್ಣ ಗೌಡ, ಆರ್‌ಎಫ್‌ಒ ಪ್ರೀತಿ ನಾಯ್ಕ ಹಾಗೂ ಸ್ಥಳೀಯರು ಇದ್ದರು.