ಮುಂಡಗೋಡ: ನಿರಂತರ ಮಳೆಯಿಂದಾಗಿ ತಾಲೂಕಿನ ಬಹುತೇಕ ಕೆರೆ- ಕಟ್ಟೆಗಳು ತುಂಬಿ ಹೆಚ್ಚುವರಿ ನೀರು ಸುತ್ತಮುತ್ತ ಪ್ರದೇಶದ ಭತ್ತದ ಗದ್ದೆಗಳಿಗೆ ನುಗ್ಗಿ ಜಲಾವೃತಗೊಂಡಿದ್ದು, ರೈತರಲ್ಲಿ ಆತಂಕ ಸೃಷ್ಟಿಸಿದೆ. ತಾಲೂಕಿನ ಚಿಗಳ್ಳಿ ಗ್ರಾಮದ ರೈತ ಕಮಲೇಶ್ ಆಲದಕಟ್ಟಿ ಅವರು ನಾಟಿ ಮಾಡಲು ಗದ್ದೆಯಲ್ಲಿ ಭತ್ತದ ಸಸಿಗಳನ್ನು ಸಿದ್ಧಪಡಿಸಿದ್ದರು. ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ನಾಟಿ ಮಾಡಲು ಸಿದ್ಧಪಡಿಸಿದ್ದ ಸಸಿಗಳಿದ್ದ ಗದ್ದೆ ಮುಳುಗಡೆಯಾಗಿದೆ.ಇದರಿಂದ ರೈತ ಕಮಲೇಶ ಆಲದಕಟ್ಟಿ ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದು, ತಾಲೂಕಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.ಮಳೆ ಇಳಿಕೆ: 44 ಮನೆಗಳು ಕುಸಿತ
ಕರಾವಳಿ ಹಾಗೂ ಘಟ್ಟದ ಮೇಲಿನ ತಾಲೂಕುಗಳಲ್ಲಿ ಮಳೆ ಪ್ರಮಾಣ ಶನಿವಾರ ಕಡಿಮೆಯಾಗಿದೆ. ಆದರೆ ಭಟ್ಕಳ ತಾಲೂಕಿನ ಹಾಡುವಳ್ಳಿಯಲ್ಲಿ ಸುರಿದ ಭಾರೀ ಮಳೆಯಿಂದ ಅಡಕೆ ತೋಟ ನಾಶವಾಗಿ ಕೃಷಿಕರು ತೀವ್ರ ಕಳವಳಗೊಂಡಿದ್ದಾರೆ. ನೂರಾರು ಅಡಕೆ ಮರಗಳು ಮುರಿದುಬಿದ್ದಿವೆ.3- 4 ದಿನಗಳಿಂದ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಇತ್ತೀಚೆಗೆ ಪ್ರವಾಹ ತಂದಿಟ್ಟ ಪ್ರಮುಖ ನದಿಗಳಾದ ಅಘನಾಶಿನಿ, ಗಂಗಾವಳಿ, ಗುಂಡಬಾಳ, ಚಂಡಿಕಾ ನದಿಗಳಲ್ಲಿ ನೀರಿನ ಪ್ರಮಾಣ ಇಳಿಮುಖವಾಗುತ್ತಿದೆ.
ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ನೀರನ್ನು ಹೊರಬಿಡುವ ಮುನ್ನೆಚ್ಚರಿಕೆ ನೀಡಿದ್ದು, ವ್ಯಾಪಕ ಪ್ರಮಾಣದಲ್ಲಿ ನೀರನ್ನು ಹೊರಬಿಟ್ಟಲ್ಲಿ ಶರಾವತಿ ನದಿಯ ಇಕ್ಕೆಲಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಲಿದೆ. ಅದೇ ರೀತಿ ಬೊಮ್ಮನಳ್ಳಿ ಜಲಾಶಯದಿಂದ ನೀರನ್ನು ಹೊರಬಿಡುವ ಎಚ್ಚರಿಕೆ ನೀಡಲಾಗಿದೆ. ಇದರಿಂದ ಕಾಳಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಲಿದೆ.