ಪಡೀಲ್‌ ಅಂಡರ್‌ಪಾಸ್‌, ಕಣ್ಣೂರಲ್ಲಿ ಚರಂಡಿಗಳ ಕುರುಹೇ ಇಲ್ಲ!

KannadaprabhaNewsNetwork |  
Published : Jun 22, 2025, 01:18 AM IST
ಪಡೀಲ್‌ ರೈಲ್ವೆ ಅಂಡರ್‌ಪಾಸ್‌ ಬಳಿ ಹೆದ್ದಾರಿ ಇಕ್ಕೆಲದ ಚರಂಡಿ ಮಣ್ಣಿನಡಿ ಹೂತುಹೋಗಿರುವುದು. | Kannada Prabha

ಸಾರಾಂಶ

ಮಳೆ ಸುರಿಯುವಾಗ ಪಡೀಲು ಆಸುಪಾಸಿನ ಗುಡ್ಡ ಪ್ರದೇಶದಿಂದ ಹರಿದುಬರುವ ಭಾರೀ ಪ್ರಮಾಣದ ನೀರಿಗೆ ಸಾಗಲು ರಾಜಕಾಲುವೆಗಳಲ್ಲಿ ಜಾಗವಿಲ್ಲದೆ ಉಕ್ಕಿ ಹರಿಯುತ್ತದೆ. ಪರಿಣಾಮ ತಗ್ಗು ಪ್ರದೇಶವಾಗಿರುವ ಇಡೀ ಕಣ್ಣೂರು ಕೃತಕ ಪ್ರವಾಹದಲ್ಲಿ ಮುಳುಗೇಳುತ್ತದೆ. ಜೂ.14ರಂದು ಹಿಂದೆಂದೂ ಕಾಣದಷ್ಟು ಪ್ರವಾಹ ಉಂಟಾಗಿರುವ ಕುರಿತು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಬರಬರುತ್ತಾ ಅಗಲ ಕಿರಿದಾಗುತ್ತಿರುವ ರಾಜಕಾಲುವೆಗಳು, ನೀರಿನ ಹರಿವಿಗೆ ಜಾಗವೇ ಇಲ್ಲದೆ ಪ್ರವಾಹ ಪರಿಸ್ಥಿತಿಸಂದೀಪ್‌ ವಾಗ್ಲೆ

ಕನ್ನಡಪ್ರಭ ವಾರ್ತೆ ಮಂಗಳೂರು

ಜೂನ್ 14ರಂದು ಸುರಿದ ಧಾರಾಕಾರ ಮಳೆಯ ಪ್ರವಾಹದಿಂದ ಎರಡು ಗಂಟೆ ಸಂಚಾರ ಸಂಪೂರ್ಣವಾಗಿ ಸ್ತಬ್ಧವಾದ ರಾಷ್ಟ್ರೀಯ ಹೆದ್ದಾರಿ ಪ್ರದೇಶವೇ ಪಡೀಲ್‌ ರೈಲ್ವೆ ಅಂಡರ್‌ಪಾಸ್‌. ಹೆದ್ದಾರಿ ಮಾತ್ರವಲ್ಲದೆ ಕಣ್ಣೂರು ಆಸುಪಾಸಿನ 50ಕ್ಕೂ ಅಧಿಕ ಮನೆಗಳು, ವಾಣಿಜ್ಯ ಕಟ್ಟಡಗಳು, ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಅಪಾರ ನಷ್ಟವಾಗಿತ್ತು. ರಾಜಕಾಲುವೆಗಳ ಅಸಮರ್ಪಕ ನಿರ್ವಹಣೆ, ಚರಂಡಿಗಳು ಹೂಳು ತುಂಬಿ ಮುಚ್ಚಿರುವುದು, ರಾಜಕಾಲುವೆಗಳಿಗೆ ತಾಗಿಕೊಂಡೇ ಕಟ್ಟಡಗಳ ನಿರ್ಮಾಣ ಎಲ್ಲವೂ ಕೃತಕ ಪ್ರವಾಹಕ್ಕೆ ಬಹುದೊಡ್ಡ ಕೊಡುಗೆ ನೀಡಿವೆ.

ಮಳೆ ಸುರಿಯುವಾಗ ಪಡೀಲು ಆಸುಪಾಸಿನ ಗುಡ್ಡ ಪ್ರದೇಶದಿಂದ ಹರಿದುಬರುವ ಭಾರೀ ಪ್ರಮಾಣದ ನೀರಿಗೆ ಸಾಗಲು ರಾಜಕಾಲುವೆಗಳಲ್ಲಿ ಜಾಗವಿಲ್ಲದೆ ಉಕ್ಕಿ ಹರಿಯುತ್ತದೆ. ಪರಿಣಾಮ ತಗ್ಗು ಪ್ರದೇಶವಾಗಿರುವ ಇಡೀ ಕಣ್ಣೂರು ಕೃತಕ ಪ್ರವಾಹದಲ್ಲಿ ಮುಳುಗೇಳುತ್ತದೆ. ಜೂ.14ರಂದು ಹಿಂದೆಂದೂ ಕಾಣದಷ್ಟು ಪ್ರವಾಹ ಉಂಟಾಗಿರುವ ಕುರಿತು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಕಿರಿದಾಗುತ್ತಾ ಸಾಗಿದ ರಾಜಕಾಲುವೆ:

ಪಡೀಲ್‌ ಕಡೆಯಿಂದ ರೈಲ್ವೆ ಮಾರ್ಗದ ಅಡಿಭಾಗದಿಂದ ಸಾಗುವ ಇಲ್ಲಿನ ಮುಖ್ಯ ರಾಜಕಾಲುವೆ ಕೊನೆಕೊನೆಗೆ ಅಗಲ ಕಿರಿದಾಗಿದೆ. ಅಕ್ರಮವಾಗಿ ಕಾಲುವೆಗಳ ಮೇಲ್ಭಾಗವನ್ನು ಮುಚ್ಚಲಾಗಿದೆ. ಕಾಲುವೆ ನಡುವೆಯೇ ಪೈಪ್‌ಲೈನ್‌ ಹಾಕಲಾಗಿದೆ. ಮೇಲ್ನೋಟಕ್ಕೆ ಮುಖ್ಯ ರಾಜಕಾಲುವೆಯ ಹೂಳು ತೆಗೆದಂತೆ ಕಾಣುತ್ತದೆಯಾದರೂ ಹೂಳು ತೆಗೆದು ಕಾಲುವೆ ಪಕ್ಕವೇ ಹಾಕುವುದರಿಂದ ಮಳೆ ಬಂದಾಗ ಮರಳಿ ಕಾಲುವೆ ಸೇರುತ್ತಿದೆ.

ರೈಲ್ವೆ ಅಂಡರ್‌ಪಾಸ್‌ನ ಸ್ವಲ್ಪ ಮುಂದೆ ಕಣ್ಣೂರು ದಾರಿಯಲ್ಲಿ ಮುಖ್ಯ ರಾಜಕಾಲುವೆಗೆ 2-3 ಕಡೆ ‘ಎಲ್‌’ ಆಕಾರದಲ್ಲಿ ತಡೆಗೋಡೆ ಕಟ್ಟಲಾಗಿದೆ. ನೀರು ಹರಿವಿಗೆ ಇದೇ ದೊಡ್ಡ ಅಡಚಣೆ. ಇಲ್ಲೇ ಹೆದ್ದಾರಿ ಪಕ್ಕ ರಾಜಕಾಲುವೆಯ ಒಂದು ಬದಿಯ ಗೋಡೆಯನ್ನು ಕಡಿದು ಹಾಕಿದ್ದು ದೊಡ್ಡ ಮಟ್ಟದಲ್ಲಿ ಪ್ರವಾಹ ಉಕ್ಕಲು ಕಾರಣವಾಗಿದೆ ಎನ್ನುತ್ತಾರೆ ಸ್ಥಳೀಯರಾದ ಜಯಲಕ್ಷ್ಮೀ.

ಮಣ್ಣಿನಡಿ ಹೂತುಹೋದ ಚರಂಡಿಗಳು!:

ಕಣ್ಣೂರಿನ ಹೆದ್ದಾರಿ ಇಕ್ಕೆಲಗಳಲ್ಲಿ ಹಿಂದೆ ದೊಡ್ಡ ಚರಂಡಿಗಳನ್ನು ನಿರ್ಮಿಸಲಾಗಿತ್ತು. ಈಗ ಅದೆಲ್ಲವೂ ಮಣ್ಣಿನಡಿ ಹೂತುಹೋಗಿ ಚರಂಡಿ ಇತ್ತು ಎನ್ನುವ ಕುರುಹೇ ಕಾಣುತ್ತಿಲ್ಲ. ಮತ್ತೆ ಮಳೆ ನೀರು ಹರಿದು ಹೋಗುವುದು ಹೇಗೆ? ಕೇವಲ ರಾಜಕಾಲುವೆಯನ್ನು ಮಾತ್ರ ಸ್ವಚ್ಛಗೊಳಿಸಿದರೆ ಸಾಕೇ ಎನ್ನುವ ಪ್ರಶ್ನೆ ನಾಗರಿಕರದ್ದು.

‘‘ಅಂಡರ್‌ಪಾಸ್‌ ಬಳಿ ಕಳೆದ ವರ್ಷ ಮಳೆಗಾಲದಲ್ಲಿ ಸಿಮೆಂಟ್‌ನಿಂದ ನಿರ್ಮಿಸಿದ ಚರಂಡಿ ಇತ್ತು. ಆಗ ನೀರು ಸರಾಗವಾಗಿ ಹರಿದು ಹೋಗುತ್ತಿತ್ತು. ಈ ವರ್ಷ ಅದು ಮಣ್ಣಿನ ಅಡಿಯಲ್ಲಿ ಮುಚ್ಚಿಬಿಟ್ಟಿದೆ. ಮಳೆಗಾಲಕ್ಕಿಂತ ಮೊದಲು ಅದರ ಹೂಳು ತೆಗೆದಿದ್ದರೆ ಈ ರೀತಿ ಪ್ರವಾಹ ಬರಲು ಸಾಧ್ಯವಾಗುತ್ತಿರಲಿಲ್ಲ’’ ಎಂದು ಸ್ಥಳೀಯರಾದ ದಿನೇಶ್‌ ಹೇಳುತ್ತಾರೆ.

ಮನೆಗಳಿಗೆ ನುಗ್ಗಿದ ನೀರು, ಅಪಾರ ಹಾನಿ:

ಹೆದ್ದಾರಿ ಬದಿಯ ರಾಜಕಾಲುವೆ, ಚರಂಡಿಗಳ ನಿರ್ವಹಣೆ ಕೊರತೆಯಿಂದ ನೀರು ನುಗ್ಗದ ಪ್ರದೇಶಗಳಲ್ಲೂ ಈ ಸಲ ನೀರು ನುಗ್ಗಿ ಹಾನಿಯಾಗಿದೆ. ಕಣ್ಣೂರಿನ ಗುತ್ತಿಗೆಹೌಸ್‌ ಎಂಬಲ್ಲಿನ ಐದಾರು ಮನೆಗಳು, ಮಾತ್ರವಲ್ಲದೆ ಮಾಜಿ ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಅವರ ಮನೆಗೂ ನೀರು ನುಗ್ಗಿತ್ತು. ಅಲ್ಲಿನ ಖಾಸಗಿ ಆಸ್ಪತ್ರೆ, ವಾಣಿಜ್ಯ ಕಟ್ಟಡಗಳು ಜಲಾವೃತಗೊಂಡಿದ್ದವು.

“ನಮ್ಮ ಪ್ರದೇಶದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಪ್ರವಾಹ ಬಂದದ್ದು ಇದೇ ಮೊದಲು. ಮಣ್ಣಿನ ಗೋಡೆಯ ಮನೆಯೊಳಗೆ ನಾಲ್ಕಡಿಯಷ್ಟು ನೀರು ನಿಂತಿತ್ತು. ಮನೆಯ ಸಾಮಗ್ರಿಗಳೆಲ್ಲ ನೀರುಪಾಲಾಗಿದ್ದವು. ಸ್ವಲ್ಪ ಜಾಸ್ತಿ ಸಮಯ ನೀರು ನಿಂತಿರುತ್ತಿದ್ದರೆ ಮನೆ ಬೀಳುವ ಸಂಭವವಿತ್ತು” ಎಂದು ಕಣ್ಣೂರು ಗುತ್ತಿಗೆಹೌಸ್‌ ನಿವಾಸಿ ದಯಾನಂದ ಪೂಜಾರಿ ಆತಂಕ ವ್ಯಕ್ತಪಡಿಸಿದರು.

-----------

ಪಡೀಲ್‌ ಹೆದ್ದಾರಿ ರೈಲ್ವೆ ಅಂಡರ್‌ಪಾಸ್‌, ಕಣ್ಣೂರು ವ್ಯಾಪ್ತಿಯಲ್ಲಿ ಈ ಬಾರಿ ಹಿಂದೆಂದೂ ಇಲ್ಲದಷ್ಟು ಭಾರೀ ಪ್ರವಾಹ ಉಂಟಾಗಿತ್ತು. ಮಳೆನೀರ ತೋಡಿನ ಹೂಳು ತೆಗೆದು ಪಕ್ಕದಲ್ಲೇ ರಾಶಿ ಹಾಕುತ್ತಾರೆ, ಮಳೆಗಾಲದಲ್ಲಿ ಮತ್ತೆ ಅದು ತೋಡು ಸೇರುತ್ತದೆ, ಈ ಪ್ರದೇಶದಲ್ಲಿ ಚರಂಡಿಗಳೆಲ್ಲ ಮುಚ್ಚಿಹೋಗಿವೆ. ಮಳೆಗಾಲಕ್ಕಿಂತ ಮೊದಲು ಸರಿಯಾಗಿ ನಿರ್ವಹಣೆ ಮಾಡಿರುತ್ತಿದ್ದರೆ ಸಮಸ್ಯೆ ಉಂಟಾಗುತ್ತಿರಲಿಲ್ಲ.

- ಜಯಲಕ್ಷ್ಮೀ, ಸ್ಥಳೀಯ ನಿವಾಸಿ.

------------

ಪ್ರವಾಹಕ್ಕೆ ರಾ.ಹೆದ್ದಾರಿ ಪ್ರಾಧಿಕಾರವೇ ಮುಖ್ಯ ಕಾರಣ: ಸುಧೀರ್ ಶೆಟ್ಟಿ ಕಣ್ಣೂರುಪಡೀಲ್- ಕಣ್ಣೂರಿನ ಪ್ರವಾಹಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಮುಖ್ಯ ಕಾರಣ. ದಶಕದ ಹಿಂದೆ ಇಲ್ಲಿ ಹೆದ್ದಾರಿ ಅಗಲೀಕರಣ ಮಾಡುವ ಸಂದರ್ಭದಲ್ಲಿ 40 ಅಡಿ ಅಗಲವಿದ್ದ ರಾಜಕಾಲುವೆಯನ್ನು 15 ಅಡಿಗೆ ಇಳಿಸಿದ್ದರು. ಮಾತ್ರವಲ್ಲದೆ ಹೆದ್ದಾರಿ ಅಡಿಯಿಂದ ಸಾಗುವ ರಾಜಕಾಲುವೆಯ ಎತ್ತರವನ್ನು 15 ಅಡಿಯಿಂದ 5 ಅಡಿಗೆ ಇಳಿಸಿ ನೀರು ಸರಾಗವಾಗಿ ಹರಿದು ಹೋಗದಂತಾಯಿತು. ಅದರ ನಂತರವೇ ಪ್ರವಾಹ ಪರಿಸ್ಥಿತಿ ಉದ್ಭವವಾಗಿದೆ. ಆ ಸಂದರ್ಭದಲ್ಲಿ ರಾಜ ಕಾಲುವೆಯ ಅಗಲವನ್ನು ಕಡಿಮೆ ಮಾಡಬಾರದೆಂದು ನಾನು ಸಾಕಷ್ಟು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಈಗ ಕಾಲುವೆಯ ಅಗಲ ಜಾಸ್ತಿ ಮಾಡುವುದೊಂದೇ ಮುಖ್ಯವಾದ ಪರಿಹಾರ ಎಂದು ಈ ಕ್ಷೇತ್ರದ ಮಾಜಿ ಕಾರ್ಪೊರೇಟರ್, ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ