ಪದ್ಮಭೂಷಣ ಬಂದಿದ್ದೇ ಕನ್ನಡಿಗರಿಂದ: ನಟ ಅನಂತನಾಗ್‌

KannadaprabhaNewsNetwork |  
Published : Jun 04, 2025, 01:30 AM IST
ಅನಂತನಾಗ್‌ ಗೆ ಸನ್ಮಾನ. | Kannada Prabha

ಸಾರಾಂಶ

ಗುಬ್ಬಿಗೂಡು, ಚಿತ್ರಸಮೂಹ ಮತ್ತು ಹಾಫ್‌ ಸರ್ಕಲ್‌ ಜಂಟಿಯಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಸನ್ಮಾನ ಸ್ವೀಕರಿಸಿದ ಅವರು ತಮ್ಮ ವೃತ್ತಿ, ಬದುಕಿನ ಕುರಿತು ಮಾತನಾಡಿದರು.

ಕನ್ನಡಪ್ರಭ ಬೆಂಗಳೂರು

‘ನನಗೆ ಪದ್ಮಭೂಷಣ ಬಂದಿದ್ದೇ ಕನ್ನಡಿಗರಿಂದ. ನಾನು ಯಾವ ಪ್ರಶಸ್ತಿಗೂ ಅರ್ಜಿ ಹಾಕಿದವನಲ್ಲ. ನಮ್ಮ ಕನ್ನಡಿಗರು, ಪತ್ರಿಕೆಗಳು, ವಾಹಿನಿಗಳು ಎಲ್ಲರೂ ನನಗೆ ಪ್ರಶಸ್ತಿ ನೀಡಬೇಕು ಎಂದು ಕೂಗೆಬ್ಬಿಸಿದರು. ಬಹುಶಃ ಆ ಕೂಗು ತಿರಸ್ಕರಿಸಲು ಆಗಲಿಲ್ಲ. ಈ ಪ್ರಶಸ್ತಿಯನ್ನು ಕರ್ನಾಟಕಕ್ಕೆ, ಕನ್ನಡಿಗರಿಗೆ ಅರ್ಪಿಸುತ್ತೇನೆ. ಇದು ನಿಮ್ಮ ಪ್ರಶಸ್ತಿ. ನಾನು ನಿಮಿತ್ತ ಮಾತ್ರ’ ಎಂದು ಅನಂತನಾಗ್‌ ಹೇಳಿದ್ದಾರೆ.

ಮಂಗ‍ಳವಾರ ಗುಬ್ಬಿಗೂಡು, ಚಿತ್ರಸಮೂಹ ಮತ್ತು ಹಾಫ್‌ ಸರ್ಕಲ್‌ ಜಂಟಿಯಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಸನ್ಮಾನ ಸ್ವೀಕರಿಸಿದ ಅವರು ತಮ್ಮ ವೃತ್ತಿ, ಬದುಕಿನ ಕುರಿತು ಮಾತನಾಡಿದರು. ‘ನಾನು ಮಧ್ಯಮ ವರ್ಗದ ನಟ. ಕೆಳ ಮಧ್ಯಮವರ್ಗದಿಂದ ಬಂದವನು. ಮೇಲ್ಮಧ್ಯಮ ವರ್ಗದವರೆಗೆ ಹೋಗಬಲ್ಲೆ. ಅದರಿಂದಾಚೆ ಹೋಗುವುದಿಲ್ಲ. ಯಾಕೆಂದರೆ ಮೌಲ್ಯ ಇರುವುದು, ಜೀವನಾನುಭವ ಇರುವುದು, ಲೈಫು ಇರುವುದು ಅಲ್ಲೇ’ ಎಂದು ಹೇಳಿದರು.

ಈ ಕಾಲದ ಕಲಾವಿದರು, ತಂತ್ರಜ್ಞರ ಕುರಿತು ಮಾತನಾಡಿದ ಅವರು, ‘ಈ ರಂಗದ ಕಿರಿಯರು ಕೊಂಚ ಸಾಹಿತ್ಯದ ಕಡೆಗೂ ಗಮನ ಕೊಡಬೇಕು. ನಾವು ನಾಟಕರಂಗದಿಂದ ಬಂದವರು ಸಾಹಿತ್ಯದ ನಂಟು ಹೊಂದಿದ್ದೆವು. ಜೊತೆಗೆ ಚಾನಲ್‌ಗಳು ಬರಹಗಾರರಿಗೆ, ಉತ್ತಮ ನಿರ್ದೇಶಕರಿಗೆ, ಒಳ್ಳೆಯ ಸಂಭಾಷಣೆ ಬರೆಯುವವರಿಗೆ ಅವಕಾಶ ಕೊಡಬೇಕು’ ಎಂದರು.

ತಮ್ಮ ರಾಜಕೀಯ ಬದುಕಿನ ಕುರಿತು ಮಾತನಾಡಿದ ಅವರು, ‘ಸಿನಿಮಾದಲ್ಲಿ ರಾಜಕಾರಣಿ ಪಾತ್ರ ಮಾಡುವುದು ಬಹಳ ಸುಲಭ. ಆದರೆ ನಿಜ ಬದುಕಿನಲ್ಲಿ ರಾಜಕಾರಣಿ ಆಗುವುದು ಬಹಳ ಕಷ್ಟ. ಸಾಮಾನ್ಯವಾಗಿ ರಾಜಕಾರಣಿಗಳು ದುಡ್ಡು ಮಾಡುತ್ತಾರೆ ಎಂದು ಎಲ್ಲರೂ ಹೇಳುತ್ತಾರೆ. ಅದು ಅರ್ಧ ನಿಜ. ಒಳ್ಳೆಯವರೂ ಇದ್ದಾರೆ. ಐದು ವರ್ಷ ಶಕ್ತಿಯನ್ನು ಕಾಪಾಡಿಕೊಂಡು ಕೆಲಸ ಮಾಡಿ ಮತ್ತೆ ಎಲೆಕ್ಷನ್‌ಗೆ ನಿಲ್ಲುವುದು ಸುಲಭವಲ್ಲ. ಬಹಳ ಕಷ್ಟ’ ಎಂದರು.

ಈ ಸಂದರ್ಭದಲ್ಲಿ ಹಾಜರಿದ್ದ ಹಿರಿಯ ನಟಿ ಜಯಮಾಲಾ, ‘ನಮ್ಮಲ್ಲಿ ಯಾರಿಗಾದರೂ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬರುವ ಅರ್ಹತೆ ಇದ್ದರೆ ಅದು ಅನಂತನಾಗ್‌ ಅವರಿಗೆ. ಅವರು ರಾಮಕೃಷ್ಣ ಹೆಗಡೆಯವರ ಜೊತೆಗೆ ಮಾತನಾಡಿ ಮದ್ರಾಸ್‌ನಲ್ಲಿದ್ದ ಉದ್ಯಮವನ್ನು ಕರ್ನಾಟಕಕ್ಕೆ ತೆಗೆದುಕೊಂಡು ಬಂದರು. ಶಂಕರ್‌ನಾಗ್‌ ಮತ್ತು ಅವರು ಸಂಕೇತ್‌ ಸ್ಟುಡಿಯೋ ಕಟ್ಟಿ ಅದೆಷ್ಟೋ ಮಂದಿಯನ್ನು ಬೆಳೆಸಿದರು. ಸಚಿವರಾಗಿದ್ದಾಗ ಕಾರ್ಮಿಕರ ಪರ ನಿಂತರು. ಅವರ ಜೊತೆ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ’ ಎಂದರು.

ಅನಂತ್‌ನಾಗ್‌ ಈ ಕಾರ್ಯಕ್ರಮದಲ್ಲಿ ಹಲವು ಶ್ಲೋಕಗಳನ್ನು ಹಾಡಿ ನೆರೆದವರಿಗೆ ಅವಿಸ್ಮರಣೀಯ ಅನುಭವ ಒದಗಿಸಿದರು. ಅನಂತನಾಗ್‌ ಜೊತೆಗಿನ ಸಂವಾದವನ್ನು ಕನ್ನಡಪ್ರಭ ಪುರವಣಿ ಸಂಪಾದಕ ಗಿರೀಶ್‌ ರಾವ್‌ ಹತ್ವಾರ್‌ (ಜೋಗಿ) ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಗಾಯತ್ರಿ ಅನಂತನಾಗ್‌, ಹಿರಿಯ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಪಿ.ಶೇಷಾದ್ರಿ, ಯೋಗರಾಜ ಭಟ್‌, ಬಿ.ಎಸ್.ಲಿಂಗದೇವರು, ಷಡಕ್ಷರಿ, ಬಸಂತಕುಮಾರ್‌ ಪಾಟೀಲ್‌, ಗುಬ್ಬಿಗೂಡು ಮಾಲೀಕರಾದ ಮಹೇಶ್‌, ವಿಜಯವಾಣಿ ಸಂಪಾದಕ ಚನ್ನೇಗೌಡ, ವಿಜಯ ಕರ್ನಾಟಕ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ, ಉದಯವಾಣಿ ಸಂಪಾದಕ ಕೆ.ರವಿಶಂಕರ ಭಟ್‌, ಸಂಯುಕ್ತ ಕರ್ನಾಟಕ ಸಂಪಾದಕ ಮಹಾಬಲ ಸೀತಾಳಭಾವಿ ಇತರರು ಇದ್ದರು.-ಬಾಕ್ಸ್‌-

ಅನಂತನಾಗ್‌ರಿಗೆ ಪದ್ಮಭೂಷಣ ಸಿಕ್ಕಿದ್ದು

ಪದ್ಮಭೂಷಣಕ್ಕೆ ಸಿಕ್ಕ ಗೌರವ: ರವಿ ಹೆಗಡೆ

‘ನಾವು ಪತ್ರಕರ್ತರು ಅನಂತನಾಗ್‌ ಅವರನ್ನು ಬರೀ ಕಲಾವಿದರಾಗಿ ನೋಡುವುದಿಲ್ಲ. ಅವರು ರಾಜಕಾರಣದಲ್ಲಿ ರಾಮಕೃಷ್ಠ ಹೆಗಡೆಯವರ ಗರಡಿಯಲ್ಲಿ ಪಳಗಿದವರು. ಪ್ರಾಮಾಣಿಕ ರಾಜಕಾರಣ ಮಾಡುವುದು ಹೇಗೆ ಅಂತ ತೋರಿಸಿಕೊಟ್ಟವರು. ಅವರು ಈಗಲೂ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ರಾಜಕಾರಣವನ್ನು ಗಮನಿಸುತ್ತಾರೆ. ಜಿಯೋ ಪಾಲಿಟಿಕ್ಸ್ ಬಗ್ಗೆ ಅದ್ಭುತವಾಗಿ ಮಾತನಾಡುತ್ತಾರೆ. ಸಾಹಿತ್ಯವನ್ನು ಓದಿಕೊಂಡಿದ್ದಾರೆ. ಇಂಥ ಅನಂತ್‌ನಾಗ್‌ ಅವರಿಗೆ ಪದ್ಮಭೂಷಣ ಸಿಕ್ಕಿರುವುದು ಪದ್ಮಭೂಷಣಕ್ಕೆ ಸಿಕ್ಕ ಗೌರವ ಎಂದು ನಾನು ಅಂದುಕೊಂಡಿದ್ದೇನೆ. ಅ‍ವರಿಂದ ಈ ಪ್ರಶಸ್ತಿಯ ಮೌಲ್ಯ ಹೆಚ್ಚಿದೆ’ ಎಂದು ಕನ್ನಡಪ್ರಭ-ಸುವರ್ಣನ್ಯೂಸ್‌ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''