ಕನ್ನಡಪ್ರಭ ವಾರ್ತೆ ಕೊಪ್ಪಳ
ಇದೇ ಮೊದಲ ಬಾರಿಗೆ ಸಂಗೀತ ಸಾಧಕರೊಬ್ಬರು ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವಕ್ಕೆ ಚಾಲನೆ ನೀಡುತ್ತಿರುವುದು ವಿಶೇಷವಾಗಿದೆ. ಕ್ರೀಡಾಪಟುಗಳು, ಪರಿಸರ ಪ್ರೇಮಿಗಳು, ಸಾಲುಮರದ ತಿಮ್ಮಕ್ಕ ಹಾಗೂ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಆರ್ಟ್ ಆಫ್ ಲಿವಿಂಗ್ ಶ್ರೀ ರವಿಶಂಕರ ಗುರೂಜಿ ಸೇರಿದಂತೆ ಮೊದಲಾದವರು ಇದುವರೆಗೂ ರಥೋತ್ಸವಕ್ಕೆ ಚಾಲನೆ ನೀಡಿದ್ದಾರೆ.
ಉದ್ಘಾಟನೆ ಸಮಾರಂಭದ ಸಾನಿಧ್ಯವನ್ನು ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ವಿಜಯಪುರದ ಹುಬ್ಬಳ್ಳಿ ಶ್ರೀ ಷಣ್ಮುಖಾರೂಢಮಠದ ಶ್ರೀ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಹಾಗೂ ಚಿಂತಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಭಾಗವಹಿಸುವರು.ಕೈಲಾಸ ಮಂಟಪದಲ್ಲಿ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಧಾರವಾಡದ ಬಸವರಾಜ ವಂದಲಿ ಹಾಗೂ ಹುಬ್ಬಳ್ಳಿಯ ಸುಜಯಿಂದ್ರಕುಲಕರ್ಣಿ ಹಾಗೂ ತಂಡದವರಿಂದ ಕಾರ್ಯಕ್ರಮ ಜರುಗಲಿದೆ. ಮೈಸೂರಿನ ಸರಿಗಮಪ ಖ್ಯಾತಿಯ ಗಾಯಕ ಹರ್ಷ ಎಂ.ಆರ್. ಹಾಗೂ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಸಿ ಕೊಡುವರು.
ಜ. 16ರಂದು ಸಂಜೆ 6 ಗಂಟೆಗೆ ಕೈಲಾಸ ಮಂಟಪದಲ್ಲಿ ನಡೆಯುವ ಭಕ್ತ ಹಿತಚಿಂತನ ಸಭೆಯ ಕಾರ್ಯಕ್ರಮದ ವಿವರ:ಭಕ್ತಹಿತ ಚಿಂತನ ಸಭೆಯ ಸಾನಿಧ್ಯವನ್ನು ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರು ಬಸವ ಪಟ್ಟದೇವರು ಹಾಗೂ ಒಳ ಬಳ್ಳಾರಿಯ ಸುವರ್ಣಗಿರಿ ವಿರಕ್ತ ಮಠದ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಹಾಗೂ ಮಂಗಳೂರಿನ ಅರಳಲೇ ಹಿರೇಮಠ ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸುವರು. ದಾವಣಗೆರೆಯ ಶ್ರೀ ಜಡೆಸಿದ್ದ ಶಿವಯೋಗಿಶ್ವರ ಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳಿಂದ ಉಪದೇಶಾಅಮೃತ ನೀಡುವರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಸ್ಸಾಂ ರಾಜ್ಯದ ಜೋಹೃಟ್ ಪ್ರದೇಶದ ಫಾರೆಸ್ಟ್ ಮ್ಯಾನ್ ಆಫ್‌ಇಂಡಿಯಾ ಎಂದು ಪ್ರಖ್ಯಾತಿ ಪಡೆದ ಪದ್ಮಶ್ರೀ ಜಾದವ್ ಪಾಯಂಗ್ ಭಾಗವಹಿಸುವರು.
ನಂತರ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಪಂಡಿತ್ ಡಾ. ಮೈಸೂರು ಮಂಜುನಾಥ್ ಇವರಿಂದ ವಾಯೋಲಿನ್, ಮುಂಬೈನ ಪಂಡಿತ್ ರೂಪ ಕುಲಕರ್ಣಿ ಅವರಿಂದ ಬಾನ್ಸೂರಿ, ಧಾರವಾಡದ ಪಂಡಿತ್ ಕೈವಲ್ಯಕುಮಾರ್ ಗುರವ್ ಇವರಿಂದ ಗಾಯನ, ಬೆಂಗಳೂರಿನ ಪಂಡಿತ್ ಗಿರಿಧರ ಉಡುಪ ಇವರಿಂದ ಘಟಂ, ಮುಂಬೈನ ಪಂಡಿತ್ ಮುಕುಂದರಾಜ್ ದೇವು ಇವರಿಂದ ತಬಲಾ ಕಾರ್ಯಕ್ರಮ ಜರುಗಲಿದೆ.ಜ. ೧೭ರಂದು ಸಂಜೆ ೬ ಗಂಟೆಗೆ ಸಮಾರೋಪ ಸಮಾರಂಭ ಕಾರ್ಯಕ್ರಮದ ವಿವರ:
ಕಾರ್ಯಕ್ರಮದ ಸಾನಿಧ್ಯವನ್ನು ಹೆಬ್ಬಾಳದ ಬೃಹನ್ಮಠದ ಶ್ರೀ ಷ.ಬ್ರ. ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು, ಶಿರೂರು ಮಹಾಂತ ತೀರ್ಥಯೋಗ ಮತ್ತು ನಿಸರ್ಗ ಚಿಕಿತ್ಸಾ ಕೇಂದ್ರದ ಡಾ. ಬಸವಲಿಂಗ ಮಹಾಸ್ವಾಮಿಗಳು ವಹಿಸುವರು. ಬೆಂಗಳೂರಿನ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವಿ. ಶ್ರೀಶಾನಂದ್ ಸಮಾರೋಪ ನುಡಿ ನುಡಿಯಲಿದ್ದಾರೆ.ನಂತರ ಜೀ ಕನ್ನಡ ಖ್ಯಾತಿಯ ಶುಭ ರಾಘವೇಂದ್ರ ಮೈಸೂರು ಹಾಗೂ ತಂಡದವರಿಂದ ಮತ್ತು ಸಹ ಗಾಯನ ಕಾರ್ಯಕ್ರಮ ವೆ.ಚಿ. ಅರುಣ್‌ಕುಮಾರ್ ಬೆಂಗಳೂರು ಇವರಿಂದ ಮತ್ತು ಕಲರ್ಸ್ ಕನ್ನಡ ಎದೆ ತುಂಬಿ ಹಾಡುವೆನು ಖ್ಯಾತಿಯ ಬೆಂಗಳೂರಿನ ಸೂರ್ಯಕಾಂತ್ ಗಡಿನಿಂಗದಹಳ್ಳಿ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಲಿದೆ. ನಂತರದಲ್ಲಿ ಗಂಗಾವತಿಯ ಬಿ. ಪ್ರಾಣೇಶ್ ಇವರಿಂದ ಹಾಸ್ಯೋತ್ಸವ ಕಾರ್ಯಕ್ರಮ ಜರುಗಲಿದೆ ಎಂದು ಶ್ರೀ ಗವಿಮಠದ ಪ್ರಕಟಣೆಯಲ್ಲಿ ತಿಳಿಸಿದೆ.
ಪರಿಚಯವೆಂಕಟೇಶ್ಕುಮಾರ್:
ಪಂಡಿತ್ ಎಂ. ವೆಂಕಟೇಶ್‌ಕುಮಾರ್ ಹಿರಿಯ ಹಿಂದೂಸ್ತಾನಿ ಗಾಯಕ. ಸ್ವಾಮಿ ಹರಿದಾಸ್ ಮತ್ತು ಕನಕದಾಸರು ರಚಿಸಿದ ಭಕ್ತಿಗೀತೆಗಳ ನಿರೂಪಣೆಗಾಗಿ ಅವರು ಹೆಚ್ಚು ಹೆಸರುವಾಸಿಯಾಗಿದ್ದಾರೆ.ನಾಗತಿಹಳ್ಳಿ ಚಂದ್ರಶೇಖರ್:
ಚಿತ್ರ ನಿರ್ದೇಶಕ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಬಹುಮುಖ ಪ್ರತಿಭೆ. ಕತೆಗಾರ, ಕಾದಂಬರಿಗಾರ, ಅಂಕಣಕಾರ, ಅಧ್ಯಾಪಕ, ಸಂಘಟಕ, ಪ್ರಕಾಶಕ ಹೀಗೆ ಬಹುಮುಖ ವ್ಯಕ್ತಿತ್ವ ಹೊಂದಿದ್ದಾರೆ.