ಹುಮನಾಬಾದ್ ಪಟ್ಟಣದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 144 ಸೆಕ್ಷನ್ ಜಾರಿ ಮುಂದುವರಿಕೆ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಹುಮನಾಬಾದ್
ಹುಮನಾಬಾದ್ ಪಟ್ಟಣದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 144 ಸೆಕ್ಷನ್ ಜಾರಿ ಮುಂದುವರಿಕೆ ಮಾಡಲಾಗಿದೆ.ಸೋಮವಾರ ಬೀದರ ಜಿಲ್ಲಾ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹುಮನಾಬಾದ್ ಶಾಸಕ ಸಿದ್ದು ಪಾಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ಅವರು ಒಬ್ಬರಿಗೊಬ್ಬರು ನಿಂದಿಸಿಕೊಂಡು ಕೈ ಕೈ ಮಿಲಾಯಿಸಿದ ಘಟನೆ ಹಿನ್ನಲೆ ಸೋಮವಾರ ಸಾಯಂಕಾಲದಿಂದ ಜಾರಿಗೊಂಡಿರುವ ಸೆಕ್ಷನ್ 144 ಮಂಗಳವಾರ ಸಹಿತ ಬೆಳಿಗ್ಗೆಯಿಂದಲೇ ಮುಂದುವರೆಸಲಾಗಿದೆ.
ಈ ಹಿನ್ನೆಲೆಯಲ್ಲಿ ಡಿವೈಎಸ್ಪಿ ಸೇರಿದಂತೆ ಪೊಲೀಸ್ ವಾಹನಗಳಿಂದ ಸೈರನ್ ಬಳಸುವ ಮೂಲಕ ಪಟ್ಟಣದ ವ್ಯಾಪಾರಸ್ಥರು, ಜನ ಸಾಮಾನ್ಯರು ಕೆಲ ಸಮಯ ಲಾಕ್‌ಡೌನ್ ಸಮಯ ಜ್ಞಾಪಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಅನೇಕರು ಇಂದು ಸಹಿತ ಪೊಲೀಸರು ಅಂಗಡಿಗಳನ್ನು ಬಂದ್ ಮಾಡಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತಿದ್ದವು.ಪಟ್ಟಣದಲ್ಲಿ ಅಶಾಂತಿ ಹಿನ್ನೆಲೆಯಲ್ಲಿ ಕಲಂ 144 ಜಾರಿ ಮಾಡಿದ್ದು, ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಜನರ ಗುಂಪು ಸೇರುವುದನ್ನು ನಿಷೇಧಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು, ಗಲಭೆಗಳನ್ನು ತಡೆಯಲು, ಮತ್ತು ಶಾಂತಿ ಕಾಪಾಡಲು 144 ವಿಧಿಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು.
ಹುಮನಾಬಾದ್ ಪಟ್ಟಣ ಎಂದಿನಂತೆ ಇಂದು ಮಂಗಳವಾರ ಶಾಂತಿಯುತವಾಗಿದ್ದು, ಶಾಸಕ ಹಾಗೂ ಮಾಜಿ ಸಚಿವರ ಮನೆಯ ಮುಂದೆ ಪೊಲೀಸ್ ವಾಹನಗಳೊಂದಿಗೆ ಬಿಗಿ ಬಂದೋಬಸ್ತ್ ಮುಂದುವರಿಸಲಾಗಿದೆ.