ಮುನಿರಾಬಾದ್: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಖ್ಯಾತ ತೊಗಲು ಗೊಂಬೆಯಾಟ ಕಲಾವಿದೆ ಭೀಮವ್ವ ಶಿಳ್ಳಿಕ್ಯಾತರ ಸೋಮವಾರ ರಾತ್ರಿ ಪ್ರಸಿದ್ಧ ಪುಣ್ಯಕ್ಷೇತ್ರ ಹುಲಿಗೆಮ್ಮ ದೇವಸ್ಥಾನದಲ್ಲಿ ಪ್ರಸಕ್ತ ಸಾಲಿನ ದಸರಾ ಮಹೋತ್ಸವ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಹುಲಿಗಮ್ಮ ದೇವಿ ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಮೇಲೆ ದೇವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯಗಳು ಶೀಘ್ರಗತಿಯಲ್ಲಿ ಆಗುತ್ತಿವೆ. ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಕಾರಣೀಭೂತರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರಿಗೆ ಅಭಿನಂದನೆ ಸಲ್ಲಿಸಿದ ಹಿಟ್ನಾಳ್, ಮಳೆಗಾಲದ ಬಳಿಕ ಹುಲಿಗೆಮ್ಮ ದೇವಸ್ಥಾನದಲ್ಲಿ ₹70 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹುಲಿಗೆಮ್ಮ ದೇವಸ್ಥಾನದಲ್ಲಿ ಅನೇಕ ಜನಪ್ರಿಯ ಕಾರ್ಯಗಳು ನಡೆಯುತ್ತಿದ್ದು ಸಂತಸದ ವಿಷಯ. ಪ್ರಸಕ್ತ ಸಾಲಿನಲ್ಲಿ ಜಾತ್ರಾ ಮಹೋತ್ಸವದಲ್ಲಿ ಮಹಾ ದಾಸೋಹವು ಅದ್ಭುತವಾಗಿ ನಡೆಯಿತು. ಇದರಿಂದ ಸಾರ್ವಜನಿಕರಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿತು. ಕಳೆದ ತಿಂಗಳು ತುಂಗಾ ಆರತಿಯನ್ನು ಆಯೋಜಿಸಲಾಯಿತು. ಇದು ಸಹ ಜನರ ಮೆಚ್ಚುಗೆಗೆ ಕಾರಣವಾಯಿತು. ಈ ಕಾರ್ಯಕ್ರಮದ ಹಿಂದೆ ಹುಲಿಗಿ ಗ್ರಾಮಸ್ಥರ, ಭಕ್ತರ ಪರಿಶ್ರಮವಿದೆ. ಗ್ರಾಮಸ್ಥರು ಈ ಪರಂಪರೆಯನ್ನು ಹೀಗೆ ಮುಂದುವರಿಸಿಕೊಂಡು ಹೋಗುವಂತೆ ಮನವಿ ಮಾಡಿದರು.ಈ ವೇಳೆ ಹುಲಿಗೆಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪದ್ಮಶ್ರೀ ಪುರಸ್ಕೃತ ಕಲಾವಿದೆ ಭೀಮವ್ವ ಶಿಳ್ಳಿಕ್ಯಾತರ ಅವರನ್ನು ಸನ್ಮಾನಿಸಲಾಯಿತು. ಕಾರ್ಯನಿರ್ವಹಣಾ ಅಧಿಕಾರಿ ಪ್ರಕಾಶ್ ರಾವ್, ಸದಸ್ಯರುಗಳಾದ ಶರಣಗೌಡ ಪಾಟೀಲ್, ಈರಣ್ಣ, ವೆಂಕಟೇಶ್, ಪಾಲಾಕ್ಷಪ್ಪ ಗುಂಗಾಡಿ, ಗ್ರಾಮಸ್ಥರಾದ ಪ್ರಭುರಾಜ್ ಪಾಟೀಲ್, ವಿಜಯ್ ಕುಮಾರ್ ಶೆಟ್ಟಿ ಹಾಗೂ ಇತರರಿದ್ದರು.