ಕನ್ನಡಪ್ರಭ ವಾರ್ತೆ ಯಾದಗಿರಿ / ಇಂಡಿ
ಯಾದಗಿರಿ ಸಮೀಪದ ಗುರುಸುಣಗಿ ಬ್ರಿಡ್ಜ್ ಕಂ ಬ್ಯಾರೇಜಿನ 24 ಗೇಟುಗಳನ್ನು ಮಂಗಳವಾರ ತೆರೆದು 3.50ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದೆ. ಭೀಮೆಯೊಡಲು ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದ್ದು, ನದಿತೀರದ ಗ್ರಾಮಗಳಲ್ಲಿ ಆತಂಕ ಮನೆ ಮಾಡಿದೆ. ಶ್ರೀಕಂಗಳೇಶ್ವರ ಹಾಗೂ ಶ್ರೀವೀರಾಂಜನೇಯ ದೇವಾಲಯಗಳು ಜಲಾವೃತಗೊಂಡಿವೆ. ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಸನ್ನತಿ ಬಳಿಯ ಬ್ರಿಡ್ಜ್ ಕಂ ಬ್ಯಾರೇಜಿನಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ನದಿತೀರದ ಹೊಲಗದ್ದೆಗಳೆಲ್ಲ ಜಲಾವೃತಗೊಂಡಿವೆ.
ಮಹಾರಾಷ್ಟ್ರದ ಉಜನಿಯ ಜಲಾಶಯ ಪಾತ್ರದಲ್ಲಿ ಧಾರಾಕಾರ ಮಳೆಯಾಗಿದ್ದರಿಂದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅರ್ಜುಣಗಿ ಬಿ.ಕೆ.ಗ್ರಾಮದ ತೋಟದ ಮನೆಗಳಿಗೆ ನೀರು ನುಗ್ಗಿದ್ದು, ತಗಡಿನ ಶೆಡ್‌ಗಳಲ್ಲಿ ವಾಸವಿದ್ದ ಸುಮಾರು 20 ಜನರನ್ನು ಸ್ಥಳೀಯರೇ ಹೆಗಲ ಮೇಲೆ ಹೊತ್ತು ಹೊರತಂದು ರಕ್ಷಣೆ ಮಾಡಿದ್ದಾರೆ.ಅಲ್ಲದೇ, ರಾಯಚೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿಯೂ ಸೋಮವಾರ ತಡರಾತ್ರಿ ಮಳೆಯಾಗಿದೆ.