25ರಿಂದ ‘ಪಡ್ತಿ ಪ್ರೀಮಿಯರ್ ಲೀಗ್ ಸೀಸನ್-3’ ಕ್ರಿಕೆಟ್ ಪಂದ್ಯಾವಳಿ

KannadaprabhaNewsNetwork |  
Published : Mar 23, 2026, 02:45 AM IST
ಜೆರ್ಸಿ ಅನಾವರಣಗೊಳಿಸಲಾಯಿತು | Kannada Prabha

ಸಾರಾಂಶ

ನಗರದ ಬಾಡದ ಚಂದ್ರಾದೇವಿ ಕ್ರಿಕೆಟ್ ಮೈದಾನದಲ್ಲಿ ಮಾ. 25ರಿಂದ 29 ರವರೆಗೆ ‘ಪಡ್ತಿ ಸಮಾಜ ಪ್ರೀಮಿಯರ್ ಲೀಗ್’ ಸೀಸನ್-3ರ ರೋಚಕ ಕ್ರಿಕೆಟ್ ಪಂದ್ಯಾವಳಿಯನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಕಾರವಾರ

ನಗರದ ಬಾಡದ ಚಂದ್ರಾದೇವಿ ಕ್ರಿಕೆಟ್ ಮೈದಾನದಲ್ಲಿ ಮಾ. 25ರಿಂದ 29 ರವರೆಗೆ ‘ಪಡ್ತಿ ಸಮಾಜ ಪ್ರೀಮಿಯರ್ ಲೀಗ್’ (PPL) ಸೀಸನ್-3ರ ರೋಚಕ ಕ್ರಿಕೆಟ್ ಪಂದ್ಯಾವಳಿಯನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ. 25ರಂದು ಬೆಳಗ್ಗೆ 9.15ಕ್ಕೆ ಮಾಜಿ ಶಾಸಕಿ ರೂಪಾಲಿ ನಾಯ್ಕ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ ಎಂದು ಆಯೋಜಕ ಸಮಿತಿಯ ಅಧ್ಯಕ್ಷ ಸತೀಶ್ ತಳೇಕರ್ ತಿಳಿಸಿದರು.

ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ, ಪಡ್ತಿ ಸಮಾಜ ಪ್ರೀಮಿಯರ್ ಲೀಗ್ ಸಮಿತಿ, ಚಂದ್ರಾದೇವಿ ಸ್ಪೋರ್ಟ್ಸ್ ಕ್ಲಬ್ ಹಾಗೂ ಎನ್.ಬಿ.ಸಿ ಸ್ಪೋರ್ಟ್ಸ್ ಕ್ಲಬ್ ಹಿರೇಶಿಟ್ಟಾ ಇವರ ಜಂಟಿ ಆಶ್ರಯದಲ್ಲಿ ಈ ಟೂರ್ನಿ ನಡೆಯಲಿದೆ. ಕಳೆದ 2 ವರ್ಷಗಳಿಂದ 6 ತಂಡಗಳೊಂದಿಗೆ ಯಶಸ್ವಿಯಾಗಿ ನಡೆಯುತ್ತಿದ್ದ ಈ ಪಂದ್ಯಾವಳಿಯು ಈ ಬಾರಿ 10 ತಂಡಗಳಿಗೆ ವಿಸ್ತರಿಸಲ್ಪಟ್ಟಿದೆ. ಮಾ. 1ರಂದು ನಡೆದ ಐಪಿಎಲ್ ಮಾದರಿಯ ಹರಾಜು ಪ್ರಕ್ರಿಯೆಯಲ್ಲಿ ಸಮಾಜದ ಸುಮಾರು 225 ಆಟಗಾರರು ಭಾಗವಹಿಸಿದ್ದರು. ಪ್ರತಿಯೊಂದು ತಂಡಕ್ಕೂ ಇಬ್ಬರು ಐಕಾನ್ ಆಟಗಾರರು ಸೇರಿದಂತೆ ಒಟ್ಟು 15 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದರಲ್ಲಿ ಅನಿಲ್ ಗಾಂವಕರ್, ಮಹೇಶ್ ಗಾಂವಕರ್, ಅಮಿತ್ ತಳೇಕರ್ ಹಾಗೂ ಸಂದೀಪ್ ಕಂತ್ರೇಕರ್ ತಲಾ 13,500 ರೂ. ಗೆ ಹರಾಜಾಗುವ ಮೂಲಕ ಅತಿ ಹೆಚ್ಚು ಬೇಡಿಕೆಯ ಆಟಗಾರರಾಗಿ ಹೊರಹೊಮ್ಮಿದ್ದಾರೆ ಎಂದು ವಿವರಿಸಿದರು.

ಈ ಬಾರಿಯ ಟೂರ್ನಿಯಲ್ಲಿ ಅಮ್ಚೆ ಸೂಪರ್ ಕಿಂಗ್ಸ್ ಅಮದಳ್ಳಿ, ಅಸ್ನೋಟಿ ಟೈಗರ್ಸ್ ಅಸ್ನೋಟಿ, ಚಂದ್ರಾದೇವಿ ಟೈಗರ್ಸ್ ಬಾಡ, ಚೆಂಡ್ಯಾ ಚಾಲೆಂಜರ್ಸ್ ಚೆಂಡಿಯಾ, ಎನ್.ಬಿ.ಸಿ ಹಿರೇಶಿಟ್ಟಾ, ಓಂ ಸಾಯಿ ಹಳಗೇಜೂಗ್, ರಾಮ ಬೇತಾಳ ವಾರಿಯರ್ಸ್ ಮಾಜಾಳಿ, ರಾಮಸಾಥಿ ಚಾಂಪಿಯನ್ ಬ್ಲಾಸ್ಟರ್ಸ್ ಮಖೇರಿ, ಸೂಪರ್ ಸ್ಟ್ರೈಕರ್ಸ್ ಪೂಜಗೇರಿ ಅಂಕೋಲಾ ಹಾಗೂ ಯಂಗ್ ಚಾಣಕ್ಯ ಕಡವಾಡ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ.

ಬಹುಮಾನದ ಕುರಿತು ಮಾಹಿತಿ ನೀಡಿದ ಸಮಿತಿ ಸದಸ್ಯ ನರೇಂದ್ರ ತಳೇಕರ್, ವಿಜೇತ ಪ್ರಥಮ ತಂಡಕ್ಕೆ ₹2 ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದವರಿಗೆ ₹1 ಲಕ್ಷ ಹಾಗೂ ಟ್ರೋಫಿ ಮತ್ತು ತೃತೀಯ ಸ್ಥಾನಿಗಳಿಗೆ ₹50 ಸಾವಿರ ಬಹುಮಾನ ನೀಡಲಾಗುವುದು. ಇದರೊಂದಿಗೆ ಸರಣಿ ಶ್ರೇಷ್ಠ, ಅತ್ಯುತ್ತಮ ಬ್ಯಾಟ್ಸ್‌ಮನ್ ಹಾಗೂ ಬೌಲರ್‌ಗಳಿಗೆ ಪ್ರತ್ಯೇಕ ಪ್ರಶಸ್ತಿಗಳನ್ನು ನೀಡಲಾಗುವುದು. ಮಾಜಿ ಶಾಸಕಿ ರೂಪಾಲಿ ನಾಯ್ಕ ಸೀಸನ್ 1ರಿಂದಲೂ ಈ ಟೂರ್ನಿಗೆ ನಿರಂತರ ಬೆಂಬಲ ಹಾಗೂ ಸಹಕಾರ ನೀಡುತ್ತಾ ಬಂದಿದ್ದಾರೆ. ಕ್ರಿಕೆಟ್ ಅಭಿಮಾನಿಗಳಿಗಾಗಿ ಪಂದ್ಯಾವಳಿಯ ನೇರಪ್ರಸಾರ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದರು.

ಸುದ್ದಿಗೋಷ್ಠಿಯ ವೇಳೆ ವಿವಿಧ ತಂಡಗಳ ಜೆರ್ಸಿಯನ್ನು ಗಣ್ಯರ ಸಮ್ಮುಖದಲ್ಲಿ ಅನಾವರಣಗೊಳಿಸಲಾಯಿತು. ಈ ಸಂದರ್ಭ ಟೂರ್ನಿಯ ಉಪಾಧ್ಯಕ್ಷರಾದ ಮೋಹನ್ ಕೊಚರೇಕರ್, ಪ್ರದೀಪ್ ಗೋವೇಕರ್, ಕಾರ್ಯದರ್ಶಿ ಉಲ್ಲಾಸ್ ನಾಗೇಕರ್ ಹಾಗೂ ಪ್ರಮುಖರಾದ ಪ್ರಶಾಂತ್ ತಳೇಕರ್, ನರೇಂದ್ರ ತಳೇಕರ್, ಸಂತೋಷ್ ಟಕ್ಕರಕರ್ ಸೇರಿದಂತೆ ಆಯೋಜಕ ಸಮಿತಿಯ ಪದಾಧಿಕಾರಿಗಳು ಮತ್ತು ತಂಡಗಳ ಮಾಲೀಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ ಬಗ್ಗೆ ವಿಧಾನಸಭೆ ಕಲಾಪದಲ್ಲಿ ಧ್ವನಿ ಎತ್ತಿ
ಕೆರೆ ಅಭಿವೃದ್ಧಿಯಿಂದ ರೈತರಿಗೆ ಅನುಕೂಲ: ಬಸವರಾಜ ಬೊಮ್ಮಾಯಿ