ನರಗುಂದ: ಕರ್ನಾಟಕ ಏಕೀಕರಣದ ಹೋರಾಟದಲ್ಲಿ ನಾಡಿಗಾಗಿ ತನ್ನ ಪ್ರಾಣ ಸಮರ್ಪಿಸಿದ ಹುತಾತ್ಮ ಪೈಲ್ವಾನ ರಂಜಾನ್ ಕನ್ನಡ ನಾಡಿನ ಹೆಮ್ಮೆ. ಕನ್ನಡಕ್ಕಾಗಿ ಹೋರಾಡಿ ಹುತಾತ್ಮರಾದ ವೀರ ಕನ್ನಡಿಗ, ಅಪ್ರತಿಮ ಹೋರಾಟಗಾರನನ್ನು ಕನ್ನಡಿಗರೆಲ್ಲರೂ ಧನ್ಯತಾ ಭಾವದಿಂದ ಸ್ಮರಿಸಿಕೊಳ್ಳಬೇಕಿದೆ ಎಂದು ಶಾಂತಲಿಂಗ ಶ್ರೀಗಳು ಹೇಳಿದರು.
ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ಏರ್ಪಡಿಸಿದ್ದ ಕರ್ನಾಟಕ ಸುವರ್ಣ ಸಂಭ್ರಮದ ಸ್ಮರಣೆಯಲ್ಲಿ ಕರ್ನಾಟಕ ಏಕೀಕರಣ ಯೋಧರ ಯಶೋಗಾಥೆ-೯ ಕಾಯಕ್ರಮದಲ್ಲಿ ಹುತಾತ್ಮ ಏಕೀಕರಣ ಯೋಧ ಪೈಲ್ವಾನ್ ರಂಜಾನ್ ಸಾಬ್ ಕುರಿತು ಮಾತನಾಡಿದರು.ಬಳ್ಳಾರಿಯನ್ನು ಕನ್ನಡ ನಾಡಿನಲ್ಲಿಯೇ ಉಳಿಸಿಕೊಳ್ಳಲು ಹೋರಾಡಿದ ಮಹನೀಯರು, ರಂಜಾನ್ ಸಾಬ್ ಅವರು ಕನ್ನಡ ಪರ ಹೋರಾಟಗಳಿಗೆ, ಚಳವಳಿಗಾರರಿಗೆ ಎಂದೆಂದೂ ಸ್ಫೂರ್ತಿಯ ಸೆಲೆ. ಕನ್ನಡ ಕ್ರಿಯಾ ಸಮಿತಿ ಕಾರ್ಯಕರ್ತರಾಗಿದ್ದ ಪೈಲ್ವಾನ್ ರಂಜಾನ್ ಸಾಬ್ ಮೇಲೆ ಅನ್ಯಭಾಷಿಕರ ಗುಂಪೊಂದು ಆ್ಯಸಿಡ್ ಎಸೆಯುವ ಮೂಲಕ ಮಾರಣಾಂತಿಕ ಹಲ್ಲೆಯಿಂದಾಗಿ ತೀವ್ರ ಗಾಯಗಳೊಂದಿಗೆ ಮೂರು ದಿನಗಳ ನಂತರ ಸಾವನ್ನಪ್ಪಿದರು ಎಂದರು.
ಕೆ.ಟಿ. ಪಾಟೀಲ ಮಾತನಾಡಿ, ಕನ್ನಡಭಿಮಾನಿಯಾಗಿದ್ದ ಪೈಲ್ವಾನ್ ರಂಜಾನ್ ಸಾಬ್ ಅಂದು ಬಳ್ಳಾರಿ ನಗರದಲ್ಲಿ ಮನೆಮಾತಾಗಿದ್ದರು. ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸಿದ ಅವರು ಎಲ್ಲ ಕನ್ನಡಪರ ಹೋರಾಟಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು ಎಂದರು.ಈ ಸಂದರ್ಭದಲ್ಲಿ ವೀರಯ್ಯ ಸಾಲಿಮಠ, ಕೆ.ಟಿ. ಪಾಟೀಲ ಮುದಕನ್ ಹೆರಕಲ್, ಹನಮಂತಗೌಡ ಪಾಟೀಲ, ಮುರುಳಿಧರ, ದಾವಲಸಾಬ್ ಪ್ರಮುಖರು ಉಪಸ್ಥಿತರಿದ್ದರು.
ಗದಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಅಧೀಕ್ಷಕ ಎಸ್.ಡಿ. ಕುಲಕರ್ಣಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರೊ. ಆರ್.ಕೆ.ಐನಾಪೂರ ನಿರ್ವಹಿಸಿದರು. ಮಹಾಂತೇಶ ಹಿರೇಮಠ ಸ್ವಾಗತಿಸಿ, ವಂದಿಸಿದರು.