ಕನ್ನಡಪ್ರಭ ವಾರ್ತೆ ರಾಮನಗರ
ನಗರದ ಕೆಎಸ್ ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವತಿಯಿಂದ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಪಾಕಿಸ್ತಾನದವರಿಗೆ ಬುದ್ಧಿ ಇಲ್ಲ. ಇಂಥ ದೇಶಕ್ಕೆ ಚೀನಾದಂತಹ ಕಚಡಾ ದೇಶ ಬೆಂಬಲ ಕೊಡುತ್ತಿರುವುದು ಸರಿಯಲ್ಲ. ಪಾಕಿಸ್ತಾನದಲ್ಲಿ ಅವರೇ ಬದುಕುವುದು ಕಷ್ಟವಿದೆ. ಅಲ್ಲಿನ ವಿದ್ಯಮಾನಗಳನ್ನು ನೋಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆ ಸಂಪೂರ್ಣ ಹಾಳಾಗಿರುವುದು ಕಂಡುಬರುತ್ತದೆ ಎಂದರು.ಭಾರತದಲ್ಲಿ ವಿಶ್ವಕ್ಕೆ ಮಾದರಿಯಾದ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ ಎಂಬುದನ್ನು ಪಾಕಿಸ್ತಾನ ಮರೆಯಬಾರದು. ಪಾಕಿಸ್ತಾನದವರು ರಕ್ತ ಹರಿಸುತ್ತೇವೆ ಎಂದು ಬೊಗಳೆ ಹೊಡೆಯುವುದನ್ನು ಬಿಡಬೇಕು ಎಂದು ತಿಳಿಸಿದರು.
ಬಸವಣ್ಣನವರು ಕಾಯಕಕ್ಕೆ ಮಹತ್ವ ನೀಡಿದ್ದರು. ಆದರೆ ಇಂದು ಕಾಯಕ ಎಂಬುದು ನರಕವಾಗಿದೆ. ಉದ್ಯೋಗದ ಭದ್ರತೆ ಇಲ್ಲದೆ ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಉದ್ಯೋಗದ ಗ್ಯಾರಂಟಿ ಇಲ್ಲದಂತಾಗಿದೆ. ಕಾರ್ಮಿಕ ಜೀವನ ಕೈಲಾಸವಾಗಬೇಕು ಎಂದು ತಿಳಿಸಿದರು.
ಎಲ್ಲಾ ಜಯಂತಿಗಳು ರಾಜಕೀಯ ಜಯಂತಿಗಳಾಗಿ ಮಾರ್ಪಾಡಾಗಿವೆ. ಜಯಂತಿ ಆಚರಣೆಯ ಉದ್ದೇಶ, ಮಹತ್ವವನ್ನು ಮರೆತು ಆಚರಣೆ ಮಾಡಲಾಗುತ್ತಿದೆ. ಕೇವಲ ಒಂದು ದಿನ ಪೋಟೋ ಇಟ್ಟು, ಮೆರವಣಿಗೆ ಮಾಡಿದರೆ ಜಯಂತಿಗಳಿಗೆ ಅರ್ಥ ಬರುವುದಿಲ್ಲ. ಮಹನೀಯರ ಸಂದೇಶಗಳನ್ನು ಅಳವಡಿಸಿಕೊಂಡರೆ ಅರ್ಥ ಬರುತ್ತದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎನ್ ಕೌಂಟರ್ ಸಾಧ್ಯವಿಲ್ಲ. ಆದರೆ ಹುಬ್ಬಳಿಯಲ್ಲಿ ಮಗುವನ್ನು ಕೊಂದಿರುವವನು ಇವನೇ ಎಂದು ಹೇಳಿ ಎನ್ ಕೌಂಟರ್ ಮಾಡಲಾಯಿತು. ಇದರಿಂದ ತಕ್ಷಣವೇ ನ್ಯಾಯ ಸಿಕ್ಕಿತ್ತು ಎಂದು ಜನರಿಗೆ ಸಂತೋಷವಾಯಿತು, ಆದರೆ ಶಿಕ್ಷೆ ಕೊಡಲು ಕಾನೂನು ಇದೆ ಎಂಬುದನ್ನು ಮರೆಯಬಾರದು ಎಂದು ವಾಟಾಳ್ ನಾಗರಾಜ್ ಹೇಳಿದರು.
ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ. ಜಗದೀಶ್, ಜಿಲ್ಲಾದ್ಯಕ್ಷ ಸಿ.ಎಸ್. ಜಯಕುಮಾರ್, ತಾಲೂಕು ಅಧ್ಯಕ್ಷ ವಿ. ಗಂಗಾಧರ್, ಪದಾಧಿಕಾರಿಗಳಾದ ಮಂಜುನಾಥ್. ಎನ್, ಕೆ. ಜಯರಾಮು, ಮಂಜುನಾಥ್, ಕೃಷ್ಣಮೂರ್ತಿ, ಭಾಗ್ಯಸುಧಾ, ಕುಮಾರ್, ಪ್ರಸನ್ನ, ಪಾರ್ಥಸಾರಥಿ, ವಾಟಾಳ್ ನಾಗರಾಜ್ ರವರ ಆಪ್ತ ಕಾರ್ಯದರ್ಶಿ ಲಾಲಸ ಶೆಟ್ಟಿ ಇತರರು ಇದ್ದರು.