ಪಾಕಿಸ್ತಾನ್‌ ಜಿಂದಾಬಾದ್‌ VS ನಾಸಿರ್‌ ಸಾಬ್‌ ಜಿಂದಾಬಾದ್‌ ಹೈಡ್ರಾಮಾ!

KannadaprabhaNewsNetwork |  
Published : Feb 28, 2024, 02:36 AM ISTUpdated : Feb 28, 2024, 03:55 PM IST
ಘೋಷಣೆ ವೇಳೆ | Kannada Prabha

ಸಾರಾಂಶ

ರಾಜ್ಯಸಭೆ ಗೆಲುವಿನ ಸಂಭ್ರಮಾಚರಣೆ ವೇಳೆ ವಿಧಾನಸೌಧದಲ್ಲಿ ಕಾಂಗ್ರೆಸ್‌ನ ಸೈಯದ್ ನಾಸಿರ್‌ ಹುಸೇನ್‌ ಪರ ಕೇಳಿ ಬಂದ ಘೋಷಣೆಯೊಂದು ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ತೀವ್ರ ಸಂಘರ್ಷಕ್ಕೆ ಕಾರಣವಾಗಿದ್ದು, ದೇಶಾದ್ಯಂತ ಸಂಚಲನ ಹುಟ್ಟುಹಾಕಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯಸಭೆ ಗೆಲುವಿನ ಸಂಭ್ರಮಾಚರಣೆ ವೇಳೆ ವಿಧಾನಸೌಧದಲ್ಲಿ ಕಾಂಗ್ರೆಸ್‌ನ ಸೈಯದ್ ನಾಸಿರ್‌ ಹುಸೇನ್‌ ಪರ ಕೇಳಿ ಬಂದ ಘೋಷಣೆಯೊಂದು ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ತೀವ್ರ ಸಂಘರ್ಷಕ್ಕೆ ಕಾರಣವಾಗಿದ್ದು, ದೇಶಾದ್ಯಂತ ಸಂಚಲನ ಹುಟ್ಟುಹಾಕಿದೆ.

ಈ ಘೋಷಣೆಯು ‘ಪಾಕಿಸ್ತಾನ್‌ ಜಿಂದಾಬಾದ್‌’ ಎಂದಾಗಿದೆ ಎಂದು ಆರೋಪಿಸಿ ಬಿಜೆಪಿ ರಾಜ್ಯಾದ್ಯಂತ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದರೆ, ಕಾಂಗ್ರೆಸ್‌ ಪಕ್ಷವು ‘ನಾಸಿರ್‌ ಸಾಬ್‌ ಜಿಂದಾಬಾದ್‌’ ಎಂದು ಘೋಷಣೆ ಕೂಗಿರುವುದನ್ನು ಬಿಜೆಪಿ ರಾಜಕೀಯಕ್ಕಾಗಿ ತಿರುಚುತ್ತಿದೆ ಎಂದು ತಿರುಗೇಟು ನೀಡಿದೆ.

ಈ ನಡುವೆ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಸ್ಲೋ ಮೋಷನ್‌ನಲ್ಲಿ (ನಿಧಾನವಾಗಿ ಪ್ಲೇ ಮಾಡಿ) ಕೇಳಿದಾಗ ‘ನಾಸಿರ್‌ ಸಾಬ್‌ ಜಿಂದಾಬಾದ್‌’ ಎಂದು ಕೂಗಿರುವುದು ಸ್ಪಷ್ಟವಾಗಿದೆ ಎಂದು ಪೊಲೀಸ್‌ ಮೂಲಗಳು ಸ್ಪಷ್ಟನೆ ನೀಡಿವೆ.

ಏನಾಯ್ತು?
ಮಂಗಳವಾರ ಸಂಜೆ ಮತ ಎಣಿಕೆ ಮುಕ್ತಾಯವಾಗಿ ನಾಸಿರ್‌ ಹುಸೇನ್‌ ಗೆಲುವು ಘೋಷಣೆಯಾದ ಬಳಿಕ ಅವರನ್ನು ಬೆಂಬಲಿಗರು ಸುತ್ತುವರೆದರು.

ಈ ವೇಳೆ ನಾಸಿರ್‌ ಹುಸೇನ್ ಪರ ಘೋಷಣೆಗಳ ನಡುವೆಯೇ ‘ಪಾಕಿಸ್ತಾನ್‌ ಜಿಂದಾಬಾದ್’ ಎಂದು ಘೋಷಣೆ ಕೇಳಿಬಂದಿದ್ದಾಗಿ ಮಾಧ್ಯಮಗಳಲ್ಲಿ ಪ್ರಸಾರವಾಯಿತು.

ಬೆನ್ನಲ್ಲೇ ವಿಧಾನಸೌಧಕ್ಕೆ ಆಗಮಿಸಿದ ಬಿಜೆಪಿ ಮುಖಂಡರು, ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ವಿಜಯೋತ್ಸವದ ವೇಳೆ ಶಕ್ತಿ ಕೇಂದ್ರ ವಿಧಾನಸೌಧದಲ್ಲೇ ‘ಪಾಕಿಸ್ತಾನ್‌ ಜಿಂದಾಬಾದ್’ ಎಂಬ ಘೋಷಣೆ ಕೂಗಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದರು.

ಈ ವೇಳೆ ಮಾತನಾಡಿದ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಶಕ್ತಿಸೌಧ ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಕೂಗಿರುವುದು ಸಂವಿಧಾನಕ್ಕೆ ಮಾಡಿದ ಅಪಮಾನ. 

ದೇಶದ್ರೋಹಿಗಳನ್ನು ವಿಧಾನಸೌಧಕ್ಕೆ ಬಿಟ್ಟಿದ್ದು ದೊಡ್ಡ ತಪ್ಪು. ಅವರಿಂದ ದೇಶದ್ರೋಹಿ ಹೇಳಿಕೆ ಕೊಡಿಸಿದ್ದು ದೊಡ್ಡ ತಪ್ಪು. ಹೀಗಾಗಿ ಈ ಸರ್ಕಾರವನ್ನು ಕೂಡಲೇ ವಜಾಗೊಳಿಸಲು ಹೋರಾಟ ನಡೆಸುತ್ತೇವೆ ಎಂದು ಹೇಳಿದರು.

ಜೈಶ್ರೀರಾಮ್‌, ಜೈ ಭೀಮ್‌ ಘೋಷಣೆ: ಫಲಿತಾಂಶ ಪ್ರಕಟವಾದ ಬಳಿಕ ಕಾಂಗ್ರೆಸ್‌ ಹಾಗೂ ಬಿಜೆಪಿ ಬೆಂಬಲಿಗರು ಪರಸ್ಪರ ಘೋಷಣೆಗಳನ್ನು ಕೂಗುತ್ತಿದ್ದರು. ಬಿಜೆಪಿಯಿಂದ ಗೆದ್ದ ನಾರಾಯಣಸಾ ಬಾಂಡಗೆ ಅವರು ಹೊರ ಬಂದ ವೇಳೆ ಅವರ ಬೆಂಬಲಿಗರು ಜೈ ಶ್ರೀರಾಮ್‌, ಜೈ ಭೀಮ್‌ ಘೋಷಣೆಗಳನ್ನು ಕೂಗಿದರು. 

ಇದಕ್ಕೆ ಪ್ರತಿಯಾಗಿ ಅಲ್ಲೇ ಇದ್ದ ಕಾಂಗ್ರೆಸ್ಸಿಗರು ಜೈ ಭೀಮ್‌, ಜೈ ಬಸವಣ್ಣ ಎಂದು ಕೂಗಿದರು.ಬಳಿಕ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಕಾಂಗ್ರೆಸ್‌ನಿಂದ ಗೆದ್ದ ಅಭ್ಯರ್ಥಿಗಳಾದ ಸೈಯದ್‌ ನಾಸಿರ್‌ ಹುಸೇನ್‌, ಡಾ.ಅಜಯ್‌ ಮಾಕನ್‌, ಜಿ.ಸಿ.ಚಂದ್ರಶೇಖರ್‌ ಅವರೊಟ್ಟಿಗೆ ಹೊರಗಡೆ ಬಂದು ಮಾಧ್ಯಮಗಳೊಂದಿಗೆ ಗೆಲುವಿನ ಖುಷಿ ಹಂಚಿಕೊಂಡರು.

ಸುರ್ಜೆವಾಲ, ಶಿವಕುಮಾರ್ ಹೊರಟ ಬಳಿಕ ನಾಸಿರ್‌ ಹುಸೇನ್‌ ಅವರು ಮಾಧ್ಯಮಗಳ ಜೊತೆ ಪ್ರತ್ಯೇಕವಾಗಿ ಮಾತನಾಡಿದರು. ಈ ವೇಳೆ ಅವರ ಹಿಂಬದಲ್ಲಿದ್ದ ವ್ಯಕ್ತಿಗಳು ‘ಜಿಂದಾಬಾದ್‌ ಜಿಂದಾಬಾದ್‌, ಕಾಂಗ್ರೆಸ್‌ ಜಿಂದಾಬಾದ್‌’ ಎಂದು ಘೋಷಣೆಗಳನ್ನು ಕೂಗುತ್ತಿದ್ದರು. 

ಇದರ ನಡುವೆಯೇ ‘ಜಿಂದಾಬಾದ್‌ ಜಿಂದಾಬಾದ್‌’ ಎಂಬ ಘೋಷಣೆಗೆ ಪೂರಕವಾಗಿ ವ್ಯಕ್ತಿಯೋರ್ವ ‘ಪಾಕಿಸ್ತಾನ್‌ ಜಿಂದಾಬಾದ್‌’ ಎಂದು ಕೂಗಿದಂತೆ ವಿಡಿಯೋದಲ್ಲಿ ಕೇಳಿ ಬರುತ್ತದೆ. ಸ್ಲೋ ಮೋಷನ್‌ನಲ್ಲಿ ಅದು ನಾಸಿರ್‌ ಸಾಬ್‌ ಜಿಂದಾಬಾದ್‌ ಎಂದೂ ಕೇಳಿ ಬರುವ ಹಿನ್ನೆಲೆಯಲ್ಲಿ ತೀವ್ರ ಗೊಂದಲ ಉಂಟಾಗಿದೆ.

ವರದಿಗಾರರ ಮೇಲೆ ನಾಸಿರ್‌ ಕಿಡಿ: ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಕೂಗಿದ ಬಗ್ಗೆ ಪ್ರಶ್ನೆ ಕೇಳಿದ ವರದಿಗಾರರ ಮೇಲೆ ಕಿಡಿ ಕಾರಿದ ನಾಸಿರ್‌ ಹುಸೇನ್‌, ‘ಯಾರೋ ನೀನು, ನಡೀ ಇಲ್ಲಿಂದ. ಯಾವನೋ ಹುಚ್ಚ ಇರಬೇಕು’ ಎಂದು ಹೇಳಿ ಅಸಹನೆ ಪ್ರದರ್ಶಿಸಿದರು.

ಭಾರತ್‌ ಮಾತಾ ಕಿ ಜೈ: ‘ಇಂತಹ ಘೋಷಣೆ ಯಾರು ಕೂಗಿದ್ದಾರೆ ಎಂಬುದು ಗೊತ್ತಿಲ್ಲ. ಯಾರೇ ಮಾಡಿದ್ದರೂ ಇದು ತಪ್ಪು. ಯಾರು ಮಾಡಿದ್ದಾರೆ? ಸೋತಿರುವುದಕ್ಕಾಗಿ ಮಾಡಿದ್ದಾರಾ? ಉದ್ದೇಶವೇನು ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ನಮ್ಮ ಘೋಷಣೆ ಭಾರತ್‌ ಮಾತಾ ಕಿ ಜೈ’ - ಬಿ.ವಿ. ಶ್ರೀನಿವಾಸ್‌, ರಾಷ್ಟ್ರೀಯ ಅಧ್ಯಕ್ಷ, ಯುವ ಕಾಂಗ್ರೆಸ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ