ಜಮ್ಮು-ಕಾಶ್ಮೀರದ ಕುಪ್ವಾರದ ಅನುಭವ ತೆರೆದಿಟ್ಟ ನಿವೃತ್ತ ಯೋಧ ನರೇಶ್ ಪೈ
ಕನ್ನಡಪ್ರಭ ವಾರ್ತೆ ಮಂಗಳೂರು
‘ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿ ಕಾಯುತ್ತಿರುವ ಸೈನಿಕರು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಇಫ್ತಾರ್ ಕೂಟ ಆಯೋಜಿಸುವುದು ಕ್ರಮ. ಹಾಗೆ ಒಂದು ದಿನ ಇಫ್ತಾರ್ ಕೂಡ ಆಯೋಜಿಸಿದ್ದೆವು. ಇಫ್ತಾರ್ ಕೂಟ ಮುಗಿಸಿ ಎಲ್ಲರೂ ತೆರಳಿದ ಬಳಿಕ ಅಗಂತುಕರಿಂದ ಕರೆಯೊಂದು ಬಂದಿತ್ತು. ಆ ಕರೆಯಲ್ಲಿ, ನಾವು ಪಾಕಿಸ್ತಾನಿ ಸೈನಿಕರು. ನಾವಿಬ್ಬರು ಇಫ್ತಾರ್ ಕೂಟಕ್ಕೆ ಬಂದು ಹೋಗಿದ್ದೆವು. ನಿಮಗೆ ನಮ್ಮನ್ನು ಪತ್ತೆ ಮಾಡಲೂ ಸಾಧ್ಯವಾಗಿಲ್ಲವಲ್ಲ ಎಂದು ಮೂದಲಿಸಿ ಮಾತನಾಡಿ ಕರೆ ಕಡಿತಗೊಳಿಸಿದ್ದರು.’‘ಗಡಿ ಕಾಯುತ್ತಿರುವ ಭಾರತೀಯ ಸೈನಿಕರಾದ ನಮಗೆ ಅಷ್ಟೇ ಸಾಕಿತ್ತು. ಕೂಡಲೇ ಸಿಸಿ ಕ್ಯಾಮರಾ ಪರಿಶೀಲಿಸಿ ಯಾರೆಲ್ಲ ಇಫ್ತಾರ್ ಕೂಟಕ್ಕೆ ಬಂದುಹೋಗಿದ್ದಾರೆ ಎಂದು ಪರಿಶೀಲಿಸಿದೆವು. ಸೂಕ್ಷ್ಮವಾಗಿ ನೋಡಿದಾಗ ಇಬ್ಬರು ಉಗ್ರರು ಸ್ಥಳೀಯರ ಪೊಷಾಕಿನಲ್ಲಿ ಬಂದುಹೋಗಿರುವುದು ಗೊತ್ತಾಯಿತು. ನಾವು ಸ್ಥಳೀಯರ ದಿರಿಸಿನಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರ ಜೊತೆಯಲ್ಲಿ ಇನ್ನೊಬ್ಬ ಉಗ್ರನನ್ನೂ ಕೇವಲ 72 ಗಂಟೆಯಲ್ಲಿ ಕೊಂದು ಹಾಕಿದೆವು.’
ತಾಂತ್ರಿಕತೆಯ ಜೊತೆ ಯೋಧನಾಗಿ ಕಾರ್ಯ:
ಇಲ್ಲಿ ಕಾರ್ಯನಿರ್ವಹಿಸುವಾಗ ನರೇಶ್ ಪೈ ಅವರು ಸೇನೆಯ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರೂ ಯೋಧನಾಗಿಯೂ ಎರಡೂ ಕಾರ್ಯವನ್ನು ನಡೆಸಬೇಕಾಗುತ್ತಿತ್ತು. ಮಿಲಿಟರಿ ಟ್ಯಾಂಕರ್ ನಿರ್ವಹಣೆ ಜೊತೆಗೆ ಸೇನಾ ಕಾರ್ಯಚರಣೆಗೂ ಕಳುಹಿಸುತ್ತಿದ್ದರು. ಉತ್ತರ ಕಾಶ್ಮೀರದ ಕುಪ್ವಾರದಂತಹ ಉಗ್ರರ ಉಪಟಳ ಪ್ರದೇಶಗಳಲ್ಲೂ ಇವರು ಕಾರ್ಯನಿರ್ವಹಿಸಿದ್ದಾರೆ.
ನಂತರ ರಾಷ್ಟ್ರೀಯ ರೈಫಲ್ಸ್ ಯೋಧನಾಗಿ ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಎರಡೂವರೆ ವರ್ಷ ಕಾರ್ಯನಿರ್ವಹಿಸಿದರು. ಯಾವಾಗಲೂ ಪಾಕಿಸ್ತಾನದಿಂದ ಗ್ರೆನೇಡ್ ದಾಳಿ ನಡೆಯುತ್ತಿತ್ತು. ಅಲ್ಲಿರುವಾಗಲೇ ಇಫ್ತಾರ್ ಕೂಟಕ್ಕೆ ಪಾಕಿಸ್ತಾನ ಉಗ್ರರು ಆಗಮಿಸಿದ ಘಟನೆ ನಡೆದದ್ದು ಎಂದು ಅನುಭವ ಹೇಳುತ್ತಾರೆ ಅವರು.
ಕುಪ್ವಾರದಲ್ಲಿ ಗಡಿ ಕಾಯುತ್ತಿದ್ದಾಗ ಅಲ್ಲಿನ ಸ್ಥಳೀಯರು ಸೈನಿಕರ ಮೇಲೆ ರೇಗುತ್ತಿದ್ದರು. ಮಕ್ಕಳು ಕೂಡ ಸೈನಿಕರಿಗೆ ಕಲ್ಲು ಬಿಸಾಡುತ್ತಿದ್ದರು. ಪ್ರಥಮ ಬುಲೆಟ್ ಗುಂಡು ಬೀಳುವ ವರೆಗೆ ಸೈನಿಕರು ಪ್ರತ್ಯಾಕ್ರಮಣ ನಡೆಸುವಂತಿಲ್ಲ. ಅದು ಕೂಡ ಯಾರು ಗುಂಡೇಟು ಹಾಕುತ್ತಾನೆಯೇ ಆತನ ಮೇಲೆ ಮಾತ್ರ ಪ್ರತಿಯಾಗಿ ಗುಂಡು ಹಾರಾಟ ನಡೆಸಬೇಕು ಎಂಬ ನಿಯಮ ಇತ್ತು. ಇದರಿಂದಾಗಿ ಸ್ಥಳೀಯ ದೇಶ ವಿರೋಧಿಗಳು ಸೈನಿಕರನ್ನು ಕಂಡಾಗ ಅಟ್ಟಹಾಸದಿಂದ ಮೆರೆಯುತ್ತಿದ್ದರು ಎಂಬುದನ್ನು ಮೆಲುಕು ಹಾಕುತ್ತಾರೆ ನರೇಶ್ ಪೈ. 370ನೇ ವಿಧಿಯನ್ನು ಈಗ ತೆಗೆದು ಹಾಕಿದ ಕಾರಣ ಅಲ್ಲಿನ ಸ್ಥಳೀಯರು ಸ್ವಲ್ಪ ಬದಲಾದಂತೆ ಕಂಡುಬರುತ್ತಿದೆ. ಈಗ ಸೈನಿಕರ ಮೇಲೆ ಅಷ್ಟಾಗಿ ಆಕ್ರಮಣಗಳು ಆಗುತ್ತಿಲ್ಲ ಎನ್ನುತ್ತಾರೆ.
ಮಣ್ಣಿನಡಿ ಸಿಲುಕಿ ಬಚಾವ್ ಆದದ್ದು...:
------------------ಸೇನೆಯಲ್ಲಿ 18 ವರ್ಷದ ಸೇವೆ
ಮಂಗಳೂರು ಮೂಲದ ನರೇಶ್ ಪೈ ಅವರು 2003ರಲ್ಲಿ ಭಾರತೀಯ ಭೂಸೇನೆಗೆ ಸೇರ್ಪಡೆಯಾಗಿ ತಾಂತ್ರಿಕ ವಿಭಾಗದಲ್ಲಿ ಸುಮಾರು 18 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದು, ಕ್ಷಿಪಣಿ ವಿಭಾಗದಲ್ಲೂ ಕೆಲಸ ಮಾಡಿದ ಅನುಭವಿ. ಜಮ್ಮು ಕಾಶ್ಮೀರದ ವಿವಿಧ ಕಡೆ, ಮೀರತ್ ರಾಡಾರ್ ಸೆಕ್ಷನ್, ಅಸ್ಸಾಂಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. 2022ರಲ್ಲಿ ಸ್ವಯಂ ನಿವೃತ್ತರಾದರು.ಇವರ ತಂದೆ ಗಂಗೊಳ್ಳಿಯ ಉಮೇಶ್ ಪೈ, ತಾಯಿ ಜ್ಯೋತಿ ಪೈ. ಮಂಗಳೂರಿನ ಕೆಪಿಟಿಯಲ್ಲಿ ಎಲೆಕ್ಟ್ರಾನಿಕ್ ಡಿಪ್ಲೊಮಾ ಕಲಿಯುತ್ತಿದ್ದಾಗ ಎರಡು ವರ್ಷದಲ್ಲೇ ಸ್ನೇಹಿತರೊಂದಿಗೆ ಭೂಸೇನೆ ಸೇರ್ಪಡೆಗೆ ಅರ್ಜಿ ಹಾಕಿದ್ದರು. ಪರೀಕ್ಷೆ ಬಳಿಕ ಸ್ನೇಹಿತರ ಬದಲು ಇವರೇ ಆಯ್ಕೆಯಾಗಿದ್ದರು. ಒಬ್ಬನೇ ಪುತ್ರನಾದ ಕಾರಣ ಮನೆಯವರು ಸೇನೆಗೆ ಸೇರುವುದು ಬೇಡ ಎನ್ನುವ ಭೀತಿಯಲ್ಲಿ ತಿಳಿಸಿರಲಿಲ್ಲ. ಸೇನಾ ತರಬೇತಿಗೆ ತೆರಳುವ ವೇಳೆ ರೈಲು ನಿಲ್ದಾಣದಿಂದಲೇ ಕರೆ ಮಾಡಿ ತಿಳಿಸಿದ್ದರು. ಸೇನೆಯಲ್ಲಿದ್ದಾಗ ಪಿಯುಸಿ, ದೂರಶಿಕ್ಷಣದಲ್ಲಿ ಪದವಿ ತೇರ್ಗಡೆಯಾದರು. ಸಿಕಂದರಾಬಾದ್‌ನಲ್ಲಿ ಆರ್ಮಿ ಟೆಕ್ನಿಕಲ್ ಡಿಪ್ಲೊಮಾ ಉತ್ತೀರ್ಣರಾದರು.
ನರೇಶ್ ಪೈ ಅವರು ಮಂಗಳೂರಿನ ಮಾಜಿ ಸೈನಿಕರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು. ಬಿಜೆಪಿ ಮಾಜಿ ಸೈನಿಕರ ಸಂಘ ಪ್ರಕೋಷ್ಠದ ಸಹ ಸಂಚಾಲಕ. ಪ್ರಸ್ತುತ ಶಕ್ತಿ ಶಿಕ್ಷಣ ಸಂಸ್ಥೆಯ ಭದ್ರತಾ ಅಧಿಕಾರಿ. ಪತ್ನಿ, ಇಬ್ಬರು ಮಕ್ಕಳೊಂದಿಗೆ ಮಂಗಳೂರಿನ ಕೊಂಚಾಡಿಯಲ್ಲಿ ವಾಸವಿದ್ದಾರೆ.