ಉದ್ಯಮ ಅಭಿವೃದ್ಧಿಯೂ ಸಮಾಜ ಸೇವೆಯೇ

KannadaprabhaNewsNetwork | Published : Dec 13, 2024 12:46 AM

ಸಾರಾಂಶ

ನಾವು ಸ್ಥಾಪಿಸಿದ ಉದ್ಯಮ ನೂರಾರು ಕುಟುಂಬಗಳಿಗೆ ಬೆಳಕಾದರೆ, ನಮ್ಮ ಒಂದು ಗುರಿ ಯಶಸ್ಸಿನ ದಾರಿಯಾದರೆ ಅದಕ್ಕಿಂತ ದೊಡ್ಡ ಸಾಧನೆ ಇನ್ನೊಂದಿಲ್ಲ

ಕನ್ನಡಪ್ರಭ ವಾರ್ತೆ ಮೈಸೂರುಸಮಾಜ ಹಾಗೂ ಜನರಿಗಾಗಿ ಪರಿಶ್ರಮ ಪಡಬೇಕು. ಉದ್ಯಮ ಅಭಿವೃದ್ಧಿಯೂ ಅಂತಿಮವಾಗಿ ಸಾಮಾಜಿಕ ಸೇವೆಯೇ ಆಗಿರುತ್ತದೆ ‘ಶ್ರೀಕಾಂತ್’ ಹಿಂದಿ ಸಿನಿಮಾದ ಪ್ರೇರಕ, ನವೋದ್ಯಮಿ ಶ್ರೀಕಾಂತ್ ಬೊಳ್ಳ ಹೇಳಿದರು.ನಗರದ ಅರಮನೆ ಆವರಣದಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಆಯೋಜಿಸಿದ್ದ ‘ಟಿಐಇ ಜಾಗತಿಕ ಶೃಂಗ–2024ರ ಗ್ಲೋಬಲ್ ಸೂಪರ್ ಸ್ಟಾರ್ಸ್ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ನಾವು ಸ್ಥಾಪಿಸಿದ ಉದ್ಯಮ ನೂರಾರು ಕುಟುಂಬಗಳಿಗೆ ಬೆಳಕಾದರೆ, ನಮ್ಮ ಒಂದು ಗುರಿ ಯಶಸ್ಸಿನ ದಾರಿಯಾದರೆ ಅದಕ್ಕಿಂತ ದೊಡ್ಡ ಸಾಧನೆ ಇನ್ನೊಂದಿಲ್ಲ ಅಲ್ಲವೇ? ಉದ್ಯಮಶೀಲತೆ ಎಂಬುದು ಅಧ್ಯಾತ್ಮದ ಪಯಣವಷ್ಟೇ ಅಲ್ಲ. ಕಟ್ಟಕಡೆಯದಾಗಿ ಅದೊಂದು ಏಕಾಂಗಿ ಯಾನ. ಇದಕ್ಕೆ ಪರಿಶ್ರಮವಷ್ಟೇ ಯಶಸ್ಸಿನ ಗುಟ್ಟು ಎಂದು ಅವರು ಹೇಳಿದರು.

ಪೋಷಕರು ಮಗ ಸರ್ಕಾರಿ ನೌಕರನಾಗಬೇಕು. ಒಳ್ಳೆಯ ಸುಂದರ ಹುಡುಗಿ ಮದುವೆ ಆಗಬೇಕು ಎಂದು ಬಯಸುತ್ತಾರೆ. ಆದರೆ ಈ ವ್ಯಕ್ತಿ ಯಾಕಿಷ್ಟು ಪರಿಶ್ರಮ ಪಡುತ್ತಾನೆ. ಯಾರಿಗಾಗಿ ಕೆಲಸ ಮಾಡುತ್ತಾನೆ ಎಂಬುದನ್ನು ನೋಡುವುದಿಲ್ಲ ಎಂದರು.

ಯಾರೋ ಒಬ್ಬರು ಬಂದು ವ್ಯವಸ್ಥೆ ಬದಲಿಸುತ್ತಾರೆ ಎಂದು ಕಾಯುತ್ತಾ ಕೂರುವ ಯೋಚನೆಯು ನವೋದ್ಯಮಿಗಳಿಗೆ ವಂಶವಾಹಿಯಲ್ಲೂ ಬಂದಿರಬಾರದು. ನಾನೂ ಹಾಗೆಯೇ ಅಂದುಕೊಂಡಿದ್ದೆ, ಹೀಗಾಗಿಯೇ ಅದ್ಬುತ ಅರಮನೆಯ ಮುಂದೆ ನಿಂತಿದ್ದೇನೆ. ನಾನೊಬ್ಬನೇ ಇಲ್ಲಿ ನಿಂತಿಲ್ಲ. ನನ್ನೊಂದಿಗೆ ನಿಂತ ಕಂಪನಿಯ ಎಲ್ಲಾ ಕೆಲಸಗಾರರು, ಹೂಡಿಕೆದಾರರ ಪರಿಶ್ರಮವು ಇಲ್ಲಿಗೆ ಕರೆತಂದಿದೆ ಎಂದು ಅವರು ತಿಳಿಸಿದರು.

ಸಾಧನೆಯ ಹಿಂದೆ ನಿಂತ ರವಿ ಮಂತಾಯಿಸ್ ಹಾಗೂ ಸುಂದರ ಭವಿಷ್ಯಕ್ಕಾಗಿ ಶ್ರಮಿಸುತ್ತಿರುವ ಎಲ್ಲಾ ಸಿಬ್ಬಂದಿಗೆ ಪುರಸ್ಕಾರ ಅರ್ಪಿಸುವುದಾಗಿ ಅವರು ಹೇಳಿದರು.

ಕೆಡಿಇಎಂ ಅಧ್ಯಕ್ಷ ಬಿ.ವಿ. ನಾಯ್ಡು, ಸಿಇಒ ಸಂಜೀವ್ ಗುಪ್ತಾ, ಟಿಜಿಎಸ್ ಅಧ್ಯಕ್ಷ ಮದನ್ ಪದಕಿ, ಎಕ್ಸೆಲ್ ಸಾಫ್ಟ್ ಸಿಇಒ ಸುಧನ್ವ ಧನಂಜಯ, ಟಿಐಇ ಮೈಸೂರು ವಿಭಾಗದ ಮಹೇಶ್ ರಾವ್, ಉದ್ಯಮಿಗಳಾದ ಅರ್ಜುನ್ ರಂಗಾ, ನಂದ ಕಿಶೋರ್ ಚೌಧರಿ, ವಿನಯ್ ಪರಮೇಶ್ವರಪ್ಪ, ಪಾಯಲ್ ನಾಥ್, ಸಹರ್ ಮನ್ಸೂರ್ ಇದ್ದರು.

Share this article