ಮುಂಡರಗಿ: ಸ್ವಾಮೀಜಿ ಅವರು ಪಲ್ಲಕ್ಕಿ ಉತ್ಸವ ಏಕೆ ಮಾಡುತ್ತಿದ್ದಾರೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ನಾವು ತೋಂಟದಾರ್ಯ ಮಠದಲ್ಲಿ ಹಿಂದಿನಿಂದಲೂ ನಮಗಾಗಿ ಬದುಕಿದ ಮಹಾತ್ಮರಿಗೆ ಗೌರವ ಸಲ್ಲಿಸುವುದಕ್ಕಾಗಿ ಪಲ್ಲಕ್ಕಿ ಮೆರವಣಿಗೆ ಮಾಡುತ್ತಾ ಬಂದಿದ್ದೇವೆಯೇ ಹೊರತು, ನಾವು ಕಾಲ್ಪನಿಕವಾದ ದೇವರಿಗಾಗಿ ಮೆರವಣಿಗೆ ಮಾಡುತ್ತಿಲ್ಲ ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.
ಮುಂಡರಗಿ ತೋಂಟದಾರ್ಯ ಮಠದಲ್ಲಿ ಆಷಾಢ ಮಾಸದ ಅಂಗವಾಗಿ ಪ್ರಾರಂಭಿಸಿದ ಶರಣ ಚರಿತಾಮೃತ ಪ್ರವಚನದ ಮಹಾಮಂಗಲ ಕಾರ್ಯಕ್ರಮದ ಅಂಗವಾಗಿ ಬುಧವಾರ ಜರುಗಿದ ಎಡೆಯೂರು ಸಿದ್ದಲಿಂಗೇಶ್ವರರು ಹಾಗೂ ಬಸವಾದಿ ಶರಣರ ವಚನದ ಕಟ್ಟುಗಳನ್ನಿಟ್ಟಿರುವ ಪಲ್ಲಕ್ಕಿ ಮೆರವಣಿಗೆಯ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ಜಾಗತಿಕ ಮಟ್ಟದಲ್ಲಿ ಅಶಾಂತಿಯ ವಾತಾವರಣವಿದೆ. ದೇಶ ದೇಶಗಳ ಮಧ್ಯ ಯುದ್ಧ ಪ್ರಾರಂಭವಾಗಿವೆ. ಈ ಸಮಾಜದಲ್ಲಿ ಭಯೋತ್ಪಾದಕರ ಅಟ್ಟಹಾಸ ಮೆರೆಯುತ್ತಿದೆ. ದೇಶದಲ್ಲಿ ಭಯೋತ್ಪಾದಕರ ಅಟ್ಟಹಾಸ ನಿಲ್ಲಬೇಕು. ಜನತೆ ಶಾಂತಿ, ನೆಮ್ಮದಿಯಿಂದ ಬದುಕಬೇಕು. ಈ ಬಹುತ್ವದ ಭಾರತದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಲಿಂಗಾಯತರೆಲ್ಲರೂ ಕೂಡಿ ಬದುಕುವಂತಹ ವ್ಯವಸ್ಥೆ ಬರಬೇಕು ಎಂದು ಹೇಳಿದರು.ಯಾರು ಏನೇ ಹೇಳಿದರೂ ಈ ದೇಶ ಧಾರ್ಮಿಕತೆಯ ಮತ್ತು ಸಂಸ್ಕೃತಿಯ ದೇಶ. ಈ ಮುಂಡರಗಿ ತೋಂಟದಾರ್ಯ ಮಠಕ್ಕೆ ತನ್ನದೇ ಆದ ಇತಿಹಾಸ, ಪರಂಪರೆ ಇದೆ. ಇದಕ್ಕೆಲ್ಲ ಗದುಗಿನ ಲಿಂಗೈಕ್ಯ ತೋಂಟದ ಸಿದ್ದಲಿಂಗ ಮಹಾಸ್ವಾಮೀಜಿ ಅವರ ಆಶೀರ್ವಾದವಿದೆ. ಈಗಿನ ಪೀಠಾಧಿಪತಿಗಳ ಆಶೀರ್ವಾದವೂ ಇದೆ. ಹೀಗಾಗಿ ಎಲ್ಲರ ಪ್ರೀತಿ, ವಿಶ್ವಾಸ ಸದಾ ಇರಲಿ ಎಂದು ಹೇಳಿದರು.
ದೇಶದಲ್ಲಿ ಶಾಂತಿ ನೆಲೆಸಲಿ, ವ್ಯಸನಮುಕ್ತ ಸಮಾಜ ನಿರ್ಮಾಣವಾಗಲಿ, ಯುವಕರು ಒಳ್ಳೆಯ ಉದ್ಯೋಗ ಮಾಡಲಿ, ಮಹಿಳೆಯರ ಮೇಲಿನ ಅತ್ಯಾಚಾರಗಳು ನಿಲ್ಲಲಿ, ಮಹಿಳೆಯರು ಗೌರವಯುತವಾಗಿ ಬದುಕಲಿ. ರೈತರಿಗೆ ಕಾಲಕಾಲಕ್ಕೆ ಉತ್ತಮ ಮಳೆಗಳಾಗಿ ಚೆನ್ನಾಗಿ ಬೆಳೆ ಬೆಳೆದು, ಬೆಳೆದ ಉತ್ಪನ್ನಗಳಿಗೆ ಉತ್ತಮವಾದ ಬೆಲೆ ಸಿಗುವಂತಾಗಲಿ ಎಂದರು.ಹಾಸನದ ಬೇಲೂರಿನ ಮಹಾಂತಸ್ವಾಮೀಜಿ, ಪ್ರವಚನಕಾರರಾದ ಅತ್ತಿವೇರಿ ಬಸವಧಾಮದ ಬಸವೇಶ್ವರಿ ಮಾತಾಜಿ, ಹತ್ತರಗಾದ ಗೋಣಿರುದ್ರಸ್ವಾಮೀಜಿ, ಮಮ್ಮಿಗಟ್ಟಿಯ ಬಸವಾನಂದ ಸ್ವಾಮೀಜಿ, ಪ್ರವಚನ ಸಮಿತಿ ಅಧ್ಯಕ್ಷ ಬಸಯ್ಯ ಗಿಂಡಿಮಠ, ಎಸ್.ಎಸ್. ಪಾಟೀಲ, ಕೊಟ್ರೇಶ ಅಂಗಡಿ, ಶಿವಯೋಗಿ ಗಡ್ಡದ, ಈಶಣ್ಣ ಬೆಟಗೇರಿ, ಪಾಲಾಕ್ಷಿ ಗಣದಿನ್ನಿ, ಆನಂದಗೌಡ ಪಾಟೀಲ, ಕರಬಸಪ್ಪ ಹಂಚಿನಾಳ, ಎಚ್. ವಿರೂಪಾಕ್ಷಗೌಡ, ಮಂಜುನಾಥ ಇಟಗಿ, ಡಾ. ಬಸವರಾಜ ಮೇಟಿ, ಶರಣಪ್ಪ ಕುಬಸದ, ಶಿವಯೋಗಿ ಕೊಪ್ಪಳ, ದೇವಪ್ಪ ರಾಮೇನಹಳ್ಳಿ, ಅಶೋಕ ಹುಬ್ಬಳ್ಳಿ, ಸುಕನ್ಯಾ ಸದಾಶಿವಯ್ಯ ಕಬ್ಬೂರಮಠ, ಮಂಗಳಾ ಕರ್ಜಗಿ, ಗಿರೀಶಗೌಡ ಪಾಟೀಲ, ವಿಶ್ವನಾಥ ಉಳ್ಳಾಗಡ್ಡಿ, ಡಾ. ನಾಗೇಶ ಅಜ್ಜವಾಡಿಮಠ ಉಪಸ್ಥಿತರಿದ್ದರು.
ಪಲ್ಲಕ್ಕಿ ಮೆರವಣಿಗೆ: ತೋಂಟದಾರ್ಯ ಮಠದಿಂದ ಪ್ರಾರಂಭವಾದ ನೂತನ ಪಲ್ಲಕ್ಕಿ ಹಾಗೂ ಪಲ್ಲಕ್ಕಿಯಲ್ಲಿನ ಪಂಚಲೋಹದ ಹಾಗೂ ಬೆಳ್ಳಿಯ ಎರಡು ಎಡೆಯೂರು ಸಿದ್ದಲಿಂಗೇಶ್ವರರ ಮೂರ್ತಿಗಳನ್ನು ಹೊತ್ತಿರುವ ಪಲ್ಲಕ್ಕಿ, ಕಡ್ಡಿಯವರ ಅಂಗಡಿಯಿಂದ ಬಜಾರ, ಕನ್ನಿಕಾಪರಮೇಶ್ವರಿ ದೇವಸ್ಥಾನ, ಬೃಂದಾವನ ವೃತ್ತ, ಭಜಂತ್ರಿ ಓಣಿ ಮೂಲಕ ಕೊಪ್ಪಳ ವೃತ್ತಕ್ಕೆ ತೆರಳಿ ಅಲ್ಲಿಂದ ಕಿತ್ತೂರು ಚೆನ್ನಮ್ಮ ವೃತ್ತದಿಂದ ಕೋಟೆಭಾಗದ ಸರ್ ಸಿದ್ದಪ್ಪ ಕಂಬಳಿ ವೃತ್ತಕ್ಕೆ ತೆರಳಿ, ಅಲ್ಲಿಂದ ಜಾಗೃತ ವೃತ್ತದ ಮೂಲಕ ಶ್ರೀಮಠ ತಲುಪಿತು. ಮೆರವಣಿಗೆಯಲ್ಲಿ ಮೈಸೂರಿನ ನಾದಸ್ವರ ತಂಡ, ಚನ್ನಗಿರಿಯ ಬಸವೇಶ್ವರ ತಂಡದಿಂದ ವೀರಗಾಸೆ ನೃತ್ಯ, ಬಸವ ಕಲಾಲೋಕ ದಾವಣಗೆರೆ ತಂಡದಿಂದ ನಂದಿಕೋಲು ಕುಣಿತ ಹಾಗೂ ಮುಂಡರಗಿ ಕೋಟೆಭಾದದ ಭಕ್ತರಿಂದ ಭಜನೆ ಕಣ್ಮನ ಸೆಳೆಯಿತು.