ಬಡವರ ಬದುಕಿಗೆ ವರವಾದ ಪಂಚ ‘ಗ್ಯಾರಂಟಿ’

KannadaprabhaNewsNetwork | Published : Mar 13, 2024 2:01 AM

ಸಾರಾಂಶ

ರಾಜ್ಯದ ಪ್ರತಿಯೊಂದು ಮನೆಯಲ್ಲೂ ಪಂಚ ಗ್ಯಾರಂಟಿ ಯೋಜನೆಯ ಒಬ್ಬರಾದರೂ ಫಲಾನುಭವಿ ಇದ್ದೇ ಇರುತ್ತಾರೆ. ಯೋಜನೆಗಳ ಅನುಷ್ಠಾನದಲ್ಲಿ ಕೆಲ ಫಲಾನುಭವಿಗಳಿಗೆ ಉಂಟಾಗಿರುವ ತಾಂತ್ರಿಕ ದೋಷ ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದ ಕಡು ಬಡವರಿಗೆ ಹಾಗೂ ಮಧ್ಯಮ ವರ್ಗದವರುಗಳಿಗೆ ಅವರ ಬದುಕಿಕೆ ಸಾಕಷ್ಟು ಅನುಕೂಲಕರವಾಗಿದೆ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ತಿಳಿಸಿದರು.

ತಾಲೂಕು ಆಡಳಿತದ ವತಿಯಿಂದ ನಗರದ ಆಚಾರ್ಯ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಅಮ್ಮಿಕೊಂಡಿದ್ದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ತಾಲೂಕು ಮಟ್ಟದ ಸಮಾವೇಶವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಬಡವರಿಗೆ ಗ್ಯಾರಂಟಿ ವರದಾನ

ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಿಂದಾಗಿ ಹಸಿದವರ ಹಸಿವನ್ನು ನೀಗಿಸುವಲ್ಲಿ ಸರ್ಕಾರ ಯಶಸ್ವಿಯಾದರೆ, ಗೃಹ ಲಕ್ಷ್ಮೀ ಯೋಜನೆ ಗೃಹಿಣಿಯರಿಗೆ ಆರ್ಥಿಕವಾಗಿ ಶಕ್ತಿ ತುಂಬಿದೆ, ಉಳಿದ ಯೋಜನೆಗಳಾದ ಶಕ್ತಿ ಯೋಜನೆ ಗೃಹ ಜ್ಯೋತಿ ಯೋಜನೆ, ಯುವನಿಧಿ ಯೋಜನೆಗಳು ಬಡವರಿಗೆ ವರದಾನವಾಗಿದೆ ಎಂದರು.

ತಾವು ಶಾಸಕನಾಗಿ ಆಯ್ಕೆಯಾದ ಮೇಲೆ ಕ್ಷೇತ್ರದಲ್ಲಿ ಕೇವಲ ಹತ್ತು ತಿಂಗಳಲ್ಲಿಯೇ ಸುಮಾರು ಐದುನೂರು ಕೋಟಿ ರುಪಾಯಿಗಳ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸಿಮೆಂಟ್ ರಸ್ತೆ, ಚರಂಡಿ ಅಭಿವೃದ್ಧಿ, ಡಾಂಬರ್‌ ರಸ್ತೆ ಹಾಗೂ ಸೇತುವೆಗಳ ನಿರ್ಮಾಣ, ಮನೆಮನೆಗೆ ನೀರು ಮುಂತಾದ ಯೋಜನೆಗಳ ಕಾಮಗಾರಿಗಳು ನಡೆಯುತ್ತಿವೆ. ಮುಖ್ಯಮಂತ್ರಿಗಳು ಕ್ಷೇತ್ರದ ಅಭಿವೃದ್ಧಿಗೆ ಸುಮಾರು ಇಪ್ಪತೈದು ಕೋಟಿ ರು.ಗಳ ವಿಶೇಷ ಅನುದಾನವನ್ನು ನೀಡಿದ್ದಾರೆ. ಎಂದರು

ಪ್ರತಿ ಮನೆಯಲ್ಲೂ ಫಲಾನುಭವಿ

ತಹಸೀಲ್ದಾರ್ ಮಹೇಶ್ ಎಸ್ ಪತ್ರಿ ಮಾತನಾಡಿ, ರಾಜ್ಯದ ಪ್ರತಿಯೊಂದು ಮನೆಯಲ್ಲೂ ಪಂಚ ಗ್ಯಾರಂಟಿ ಯೋಜನೆಯ ಒಬ್ಬರಾದರೂ ಫಲಾನುಭವಿ ಇದ್ದೇ ಇರುತ್ತಾರೆ. ಯೋಜನೆಗಳ ಅನುಷ್ಠಾನದಲ್ಲಿ ಕೆಲ ಫಲಾನುಭವಿಗಳಿಗೆ ತಾಂತ್ರಿಕ ದೋಷಗಳಿಂದ ಸಮಸ್ಯೆಯಾಗಿದೆ. ಅಂತವರಿಗಾಗಿ ಎರಡು ಮಳಿಗೆಗಳನ್ನು ತೆರೆಯಲಾಗಿದ್ದು ನಿಮ್ಮ ತೊಂದರೆಗಳನ್ನು ನಿವಾರಿಸಿಕೊಂಡು ಗ್ಯಾರಂಟಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದರು. ಶಾಸಕ ಕೆಎಚ್.ಪುಟ್ಟಸ್ವಾಮಿಗೌಡ ಹಾಗೂ ಗಣ್ಯರನ್ನು ಕಾರ್ಯಕ್ರಮಕ್ಕೆ ಮಹಿಳೆಯರು ಪೂರ್ಣಕುಂಭದೊಂದಿಗೆ ಅಂಬೇಡ್ಕರ್ ಸರ್ಕಲ್ ಯಿಂದ ಮೆರವಣಿಗೆಮೂಲಕ ವೇದಿಕೆಗೆ ಕರೆದೊಯ್ಯಲಾಯಿತು. ಕಾರ್ಯಕ್ರಮದಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಉಪ ನಿರ್ದೇಶಕಿ ಮನೀಷಾ,ತಾಲ್ಲೂಕು ಪಂಚಾಯತಿ ಇಓ ಹೊನ್ನಯ್ಯ,ಕ್ಷೇತ್ರ ಶಿಕ್ಷಣಾಧಿಕಾರಿ ಕೆವಿ.ಶ್ರೀನಿವಾಸಮೂರ್ತಿ, ನಗರಸಭೆ ಪೌರಾಯುಕ್ತೆ ಡಿ.ಎಂ.ಗೀತಾ,ಕೋಚಿಮುಲ್ ನಿರ್ದೇಶಕ ಜೆ.ಕಾಂತರಾಜು, ಸಿಡಿಪಿಓ ಅಧಿಕಾರಿ ರವಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ನಗರಸಭೆ ಸದಸ್ಯರು, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು ಹಾಗೂ ಇನ್ನಿತರರು ಭಾಗವಹಿಸಿದ್ದರು.

Share this article