ಉತ್ತರ ಕನ್ನಡ ಜಿಲ್ಲೆಯಲ್ಲಿ 16ರಂದು ಪಂಚ ಗ್ಯಾರಂಟಿ ಉತ್ಸವ: ಎಸ್.ಆರ್. ಪಾಟೀಲ್

KannadaprabhaNewsNetwork |  
Published : Jan 08, 2026, 02:30 AM IST
ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು. | Kannada Prabha

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಅತ್ಯಂತ ಯಶಸ್ವಿಯಾಗಿದ್ದು, ಈ ಕುರಿತು ಜಿಲ್ಲೆಯಲ್ಲಿ ಜ. 16ರಂದು ಪಂಚ ಗ್ಯಾರಂಟಿ ಉತ್ಸವ ಆಯೋಜಿಸಲಾಗುವುದು.

ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ, ಜಿಲ್ಲಾ ಪಂಚ ಗ್ಯಾರಂಟಿ ಉತ್ಸವ, ಕಾರ್ಯಾಗಾರದ ಕುರಿತು ಚರ್ಚೆ

ಕನ್ನಡಪ್ರಭ ವಾರ್ತೆ ಕಾರವಾರ

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕ ಪ್ರಗತಿ ಸೇರಿದಂತೆ ರಾಜ್ಯದಲ್ಲಿನ ಪ್ರತಿ ಕುಟುಂಬದಲ್ಲೂ ಆರ್ಥಿಕ ಸುಧಾರಣೆಗಳನ್ನು ತಂದಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಅತ್ಯಂತ ಯಶಸ್ವಿಯಾಗಿದ್ದು, ಈ ಕುರಿತು ಜಿಲ್ಲೆಯಲ್ಲಿ ಜ. 16ರಂದು ಪಂಚ ಗ್ಯಾರಂಟಿ ಉತ್ಸವ ಆಯೋಜಿಸಲಾಗುವುದು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ, ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಹಾಗೂ ಜಿಲ್ಲಾ ಪಂಚ ಗ್ಯಾರಂಟಿ ಉತ್ಸವ, ಕಾರ್ಯಾಗಾರದ ಕುರಿತ ಚರ್ಚೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಹಿಳಾ ಸಬಲೀಕರಣ ಮತ್ತು ಆರ್ಥಿಕ ಸ್ವಾವಲಂಬನೆಯ ಉದ್ದೇಶದಿಂದ ಜಾರಿಗೊಳಿಸಿದ ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿನ ಪ್ರತೀ ಕುಟುಂಬಕ್ಕೂ ನೆರವಾಗುವುದರ ಜೊತೆಗೆ ರಾಜ್ಯದ ಆರ್ಥಿಕ ಪ್ರಗತಿಗೂ ಕಾರಣವಾಗಿವೆ. ಶಕ್ತಿ ಯೋಜನೆಯು ರಾಜ್ಯದ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಿದೆ, ಗೃಹಲಕ್ಷ್ಮಿ ಯೋಜನೆಯಿಂದ ಕುಟುಂಬಗಳಲ್ಲಿ ಸೌಹಾರ್ದತೆ ಮೂಡಿದೆ. ಗ್ಯಾರಂಟಿ ಯೋಜನೆಗಳ ಫಲಾನುಭವಿಗಳೊಂದಿಗೆ ಯೋಜನೆಯ ಯಶಸ್ಸನ್ನು ಆಚರಿಸಲು ಜಿಲ್ಲಾಮಟ್ಟದ ಪಂಚ ಗ್ಯಾರಂಟಿ ಉತ್ಸವವನ್ನು ಆಯೋಜಿಸಲಾಗುತ್ತಿದ್ದು, ಈ ಕುರಿತಂತೆ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ತಿಳಿಸಿದರು.

ಶಕ್ತಿ ಯೋಜನೆಯ ನಂತರ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು, ವಿದ್ಯಾರ್ಥಿಗಳು ಹೆಚ್ಚಿನ ಸಂಖೆಯಲ್ಲಿ ಪ್ರಯಾಣ ಮಾಡುತ್ತಿದ್ದು, ಬಸ್ ಚಾಲಕರು ಹಾಗೂ ನಿರ್ವಾಹಕರು ಮಹಿಳೆಯರು ಮತ್ತು ವಿದ್ಯಾರ್ಥಿಗಳ ಜತೆ ಅನುಚಿತವಾಗಿ ವರ್ತಿಸಿದರೆ ತಕ್ಷಣವೇ ಅವರನ್ನು ಕೆಲಸದಿಂದ ಅಮಾನತು ಮಾಡುವಂತೆ ಮತ್ತು ಬಸ್ ನಿಲ್ದಾಣಗಳಲ್ಲಿ ಹಾಲುಣಿಸುವ ಕೊಠಡಿ ಸೌಲಭ್ಯ ಒದಗಿಸುವಂತೆ ಹಾಗೂ ಶೌಚಾಲಯ ಬಳಕೆ ಕುರಿತಂತೆ ದೂರುಗಳಿಗೆ ಆಸ್ಪದ ನೀಡದಂತೆ ಹಾಗೂ ನಿಗದಿತ ಸ್ಥಳಗಳಲ್ಲಿ ಕಡ್ಡಾಯವಾಗಿ ಬಸ್ ನಿಲ್ಲಿಸುವಂತೆ, ಶಾಲಾ ಮಕ್ಕಳಿಗೆ ತೊಂದರೆಯಾಗದಂತೆ ಬಸ್‌ಗಳ ಕಾರ್ಯಾಚರಣೆ ನಡೆಸುವಂತೆ ವಾ.ಕ.ರ.ಸಾ.ಸಂಸ್ಥೆಯ ಅಧಿಕಾರಿಗಳಗೆ ಸೂಚನೆ ನೀಡಿದರು.

ಶಕ್ತಿ ಯೋಜನೆಯ ಅನುಷ್ಠಾನದ ನಂತರ ರಾಜ್ಯದಲ್ಲಿ ಕೋಟಿಗಟ್ಟಲೇ ಮಹಿಳೆಯರು ಪ್ರಯಾಣ ಮಾಡುವುದರ ಮೂಲಕ ವರ್ಲ್ಡ್ ಬುಕ್ ಆಫ್ ರೇಕಾರ್ಡ್‌ ನಲ್ಲಿ ದಾಖಲೆಯಾಗಿದೆ ಹಾಗೂ ಗೃಹಲಕ್ಷ್ಮಿ ಯೋಜನೆಯಿಂದ ಲಕ್ಷಾಂತರ ಜನ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದು, ಈ ಹಣದಿಂದ ತಮ್ಮ ಅಗತ್ಯ ವಸ್ತುಗಳ ಖರೀದಿ ಮಾಡಲು ಹಾಗೂ ಅನೇಕರು ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗಿದ್ದಾರೆ ಇದರಿಂದ ರಾಜ್ಯದಲ್ಲಿ ತಲಾ ಆದಾಯ ಹೆಚ್ಚಾಗಿದೆ. ಉತ್ತರ ಕನ್ನಡ ಜಿಲ್ಲೆಯ 1136 ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಬೇಡ ಎಂದು ಅಧಿಕೃತವಾಗಿ ಬರೆದುಕೊಡುವುದರ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದಾರೆ ಎಂದರು.

ಅನ್ನಭಾಗ್ಯ ಯೋಜನೆಯ ಅಕ್ಕಿಗಳು ಕಾಳಸಂತೆಯಲ್ಲಿ ಮಾರಾಟವಾಗುವ ಪ್ರಕರಣಗಳು ಜಿಲ್ಲೆಯಲ್ಲಿ ನಡೆಯದಂತೆ ಸಂಬಂಧಪಟ್ಟ ಅಧಿಕಾರಿಗಳು ಕಡಿವಾಣ ಹಾಕಬೇಕು ಎಂದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳಡಿಯಲ್ಲಿ ಇದುವರೆಗೆ, ಶಕ್ತಿ ಯೋಜನೆಯಡಿ 13.72 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, 404.49 ಕೋಟಿ ರು. ವೆಚ್ಚವಾಗಿದ್ದು, ಗೃಹಲಕ್ಷ್ಮಿ ಯೋಜನೆಯಡಿ 3,37,155 ಫಲಾನುಭವಿಗಳನ್ನು ನೋಂದಣಿ ಮಾಡಿದ್ದು 1493.50 ಕೋಟಿ ರು. ಪಾವತಿಸಿದ್ದು, ಗೃಹಜ್ಯೋತಿ ಯೋಜನೆಯಡಿ 3,95,190 ಸ್ಥಾವರಗಳನ್ನು ನೋಂದಣಿ ಮಾಡಿದ್ದು 510.98 ಕೋಟಿ ರು. ವೆಚ್ಚವಾಗಿದೆ, ಯುವನಿಧಿ ಯೋಜನೆಯಡಿ 7953 ಮಂದಿಯನ್ನು ನೋಂದಾಯಿಸಿ 17.80 ಕೋಟಿ ರು. ಪಾವತಿಸಲಾಗಿದೆ ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ದಿಲೀಷ್ ಶಶಿ, ಗ್ಯಾರಂಟಿ ಯೋಜನೆಗಳು ಅನುಷ್ಠಾನವಾಗಿ 2 ವರ್ಷಕ್ಕೂ ಅಧಿಕವಾಗಿದ್ದು, ಈ ಹಿಂದೆ ಇ-ತಂತ್ರಾಂಶದಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಯೋಜನೆಗಳ ರೂಪುರೇಷೆಗಳನ್ನು ರೂಪಿಸುವ ಅವಕಾಶ ಸಿಕ್ಕಿದ್ದು ಈಗ ಜಿಲ್ಲಾಮಟ್ಟದಲ್ಲಿ ಯೋಜನೆಗಳ ಅನುಷ್ಠಾನ ಮಾಡುವ ಅವಕಾಶ ಸಿಕ್ಕಿದೆ. ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಅತ್ಯುತ್ತಮವಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ ಪಾಂಡುರಂಗ ನಾಯ್ಕ, ಉಪಾಧ್ಯಕ್ಷರಾದ ನಾಗರಾಜ ಮುರ್ಡೇಶ್ವರ, ಜನಾರ್ದನ ಕುಪ್ಪ ದೇವಾಡಿಗ, ಸದಸ್ಯರಾದ ರಾಜೇಂದ್ರ ರಾಣೆ, ಪಾಂಡುರಂಗ ಕೆ. ಗೌಡ, ರಿಯಾಜ್ ಅಹಮದ್ ಬಾಬುಸಾಬ್, ಸುಮಾ ರಾಜು ಉಗ್ರಾಣಕರ, ಅನಿಲ್ ಗೋವಿಂದ ದಂಡಗಲ್, ರಾಜಶೇಖರ ರುದ್ರಗೌಡ ಹಿರೇಮಠ, ದೇವಿದಾಸ ನಾಗೇಶ ಶಾನಭಾಗ, ಅಣ್ಣಪ್ಪ ಮಹಾಬಲೇಶ್ವರ ನಾಯ್ಕ, ರಾಜು ಮಂಜಪ್ಪ ನಾಯ್ಕ, ಅಶೋಕ ಕೃಷ್ಣ ಗೌಡ, ರಾಜೇಶ ಚಂದ್ರಕಾಂತ ನಾಯ್ಕ, ಸತೀಶ ತಳೇಕರ, ಶಶಾಂಕ ಕಡವಾಡಕರ, ಸ್ನೇಹಾ ಹಳದನಕರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುವಾದಕರು ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ:ಎಸ್.ಜಿ.ಎಸ್‌
9.5 ಲಕ್ಷ ಲಂಚ ಪಡೆದ ಕೇಂದ್ರ ವಿದ್ಯುತ್‌ಸಂಸ್ಥೆ ಜಂಟಿ ನಿರ್ದೇಶಕ ಸಿಬಿಐ ಬಲೆಗೆ