ನಾಡಿನ ಕಲ್ಯಾಣಕ್ಕಾಗಿ ಧರೆಗಿಳಿದು ಬಂದ ಪಂಚಾಕ್ಷರ, ಪುಟ್ಟರಾಜ ಗವಾಯಿಗಳು

KannadaprabhaNewsNetwork |  
Published : Jun 28, 2024, 12:57 AM IST
ಕಾರ್ಯಕ್ರಮದಲ್ಲಿ ಸಾಧಕರಿಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.  | Kannada Prabha

ಸಾರಾಂಶ

ಗದಗ ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾನಯೋಗಿ ಶಿವಯೋಗಿ ಲಿಂ. ಪಂಚಾಕ್ಷರ ಗವಾಯಿಗಳವರ 80ನೇ ಪುಣ್ಯ ಸ್ಮರಣೋತ್ಸವ ಹಾಗೂ ಪದ್ಮಭೂಷಣ ಲಿಂ. ಡಾ. ಪುಟ್ಟರಾಜ ಕವಿ ಗವಾಯಿಗಳವರ 14ನೇ ಪುಣ್ಯಸ್ಮರಣೋತ್ಸವ, ಉಭಯ ಗುರುಗಳ ಜಾತ್ರಾ ಮಹೋತ್ಸವ ಅಂಗವಾಗಿ ಧರ್ಮೋತ್ತೇಜಕ ಮಹಾಸಭೆ ನಡೆಯಿತು.

ಗದಗ: ವೀರೇಶ್ವರ ಪುಣ್ಯಾಶ್ರಮದಿಂದಾಗಿ ಗದುಗಿನ ಈ ಭೂಮಿ ಪುಣ್ಯಭೂಮಿಯಾಗಿದೆ. ಒಂದು ಸಂಗೀತ ವಿಶ್ವ ವಿದ್ಯಾಲಯ ಮಾಡುವ ಕೆಲಸವನ್ನು ವೀರೇಶ್ವರ ಪುಣ್ಯಾಶ್ರಮ ನಿರಂತರವಾಗಿ ಮಾಡುತ್ತಾ ಬಂದಿದೆ ಎಂದು ಹುಬ್ಬಳ್ಳಿಯ ಮೂರು ಸಾವಿರ ಮಠದ ಜ. ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳು ಹೇಳಿದರು.

ಅವರು ಬುಧವಾರ ರಾತ್ರಿ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾನಯೋಗಿ ಶಿವಯೋಗಿ ಲಿಂ. ಪಂಚಾಕ್ಷರ ಗವಾಯಿಗಳವರ 80ನೇ ಪುಣ್ಯ ಸ್ಮರಣೋತ್ಸವ ಹಾಗೂ ಪದ್ಮಭೂಷಣ ಲಿಂ. ಡಾ. ಪುಟ್ಟರಾಜ ಕವಿ ಗವಾಯಿಗಳವರ 14ನೇ ಪುಣ್ಯಸ್ಮರಣೋತ್ಸವ, ಉಭಯ ಗುರುಗಳ ಜಾತ್ರಾ ಮಹೋತ್ಸವ ಅಂಗವಾಗಿ ಜರುಗಿದ ವಿಶೇಷ ಕಾರ್ಯಕ್ರಮ ಧರ್ಮೋತ್ತೇಜಕ ಮಹಾಸಭೆಯ ಸಾನ್ನಿಧ್ಯವಹಿಸಿ ಮಾತನಾಡಿದರು.

ವ್ಯಕ್ತಿಯು ಪರಿಪೂರ್ಣವಾಗಿ ಬೆಳೆಯಲು ಗುರು ಬೇಕು. ಅದರಂತೆ ತ್ರಿಕಾಲ ಜ್ಞಾನಿ ಶ್ರೀಗುರು ಹಾನಗಲ್ ಕುಮಾರೇಶ್ವರರು ಬಾಲಕನಾಗಿದ್ದ ಪಂ. ಪಂಚಾಕ್ಷರಿ ಗವಾಯಿಗಳವರನ್ನು ಕಂಡಾಗ ಈ ಮಗು ಮುಂದೆ ಸಾಧನೆ ಮಾಡುತ್ತದೆ ಎಂದು ಗುರುತಿಸಿ, ವಿದ್ಯೆ ನೀಡಿದರಲ್ಲದೆ, ವಿದ್ಯೆ ವೈಯಕ್ತಿಕವಾಗಬಾರದು, ಅದು ಪರಿಪೂರ್ಣವಾಗಬೇಕಾದರೆ ಅಂಧರಿಗೆ, ಅನಾಥರಿಗೆ, ದೀನರಿಗೆ ವಿದ್ಯೆ ಕಲಿಸಬೇಕು ಎಂದು ಆಶೀರ್ವದಿಸಿದರು. ಅದರಂತೆ ಇಂದು ದೇಶ-ವಿದೇಶಗಳಲ್ಲಿ ಪುಣ್ಯಾಶ್ರಮದ ಭಕ್ತರು ಸಂಗೀತ ಸಾಧನೆ ಮಾಡಿದ್ದಾರೆ ಎಂದರೆ ಅದು ಪಂ. ಪಂಚಾಕ್ಷರಿ ಗವಾಯಿಗಳವರ ಕೊಡುಗೆಯಾಗಿದೆ. ಪಂ. ಪಂಚಾಕ್ಷರಿ ಗವಾಯಿಗಳವರು ಆಚಾರ, ನಿಷ್ಠೆ ಶಿವಪೂಜೆಗೆ ವಿಶೇಷ ಒತ್ತು ನೀಡುತ್ತಿದ್ದರು. ಅವರ ಆರೋಗ್ಯ ಕ್ಷೀಣಿಸಿದಾಗ ಆಚಾರಕ್ಕೆ ಧಕ್ಕೆ ಬರುತ್ತದೆ ಎಂದು ಆಂಗ್ಲ ಔಷಧಗಳನ್ನು ತಿರಸ್ಕರಿಸಿ, ದೇಹ ತ್ಯಾಗ ಮಾಡಿ, ಮೌಲ್ಯಯುತವಾದ ಬದುಕನ್ನು ಬದುಕಿದರು. ಅಂತಹ ಮಹಾನುಭಾವರು ಪುಣ್ಯಾಶ್ರಮ ಕಟ್ಟಿ ಸಾಕಷ್ಟು ಜನರಿಗೆ ಆಶ್ರಯ ನೀಡಿದ್ದಾರೆ ಎಂದು ಹೇಳಿದರು.

ಗಂಗಾವತಿ ಕಲ್ಮಠದ ಕೊಟ್ಟೂರೇಶ್ವರ ಶ್ರೀಗಳು, ಬಳಗಾನೂರಿನ ಶಿವಶಾಂತವೀರ ಶರಣರು, ಮುದ್ದೇಬಿಹಾಳದ ಡಾ. ಲಾಲಲಿಂಗೇಶ್ವರ ಶರಣರು, ಹಿರೇಗುಳವಾಳದ ಹನುಮಂತಪ್ಪ ಯಾಳವಾರ ಸಮ್ಮುಖ ವಹಿಸಿದ್ದರು. ನಂದೀಕೇಶ್ವರದ ಮುಚಖಂಡಯ್ಯನವರು, ಡಾ. ಜೆ.ಎಂ. ಚೆಂದುನವರ, ಬಳ್ಳಾರಿಯ ಪುರುಷೋತ್ತಮಗೌಡ್ರ, ಪಂಚಾಕ್ಷರಯ್ಯ ಹಿಡ್ಕಿಮಠ, ಕಲ್ಲೂರಿನ ಕಳಕಪ್ಪಗೌಡ್ರ ಜಮ್ಮಾಪುರ, ಜೇವರ್ಗಿಯ ನಾಡಗೌಡ್ರ ಅಪ್ಪಸಾಬಗೌಡ್ರ, ಬದಾಮಿಯ ನಾಗರಾಜ ಕಾಚಟ್ಟಿ, ಎಸ್.ಬಿ. ಅವರಾದಿ, ರಾಚಣ್ಣ ಪಟ್ಟಣದ ಉಪಸ್ಥಿತರಿದ್ದರು.

ಪಂ. ಪಂಚಾಕ್ಷರಿ ಗವಾಯಿಗಳವರ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕಲ್ಲಯ್ಯಜ್ಜನವರು ಅಭಾರ ಮನ್ನಿಸಿದರು. ಅಡ್ನೂರಿನ ಕಲ್ಲಿನಾಥ ಶಾಸ್ತ್ರಿಗಳು ಕಾರ್ಯಕ್ರಮ ನಿರೂಪಿಸಿದರು. ಶಿವಲಿಂಗಯ್ಯಶಾಸ್ತ್ರಿಗಳು ಹಿರೇಮಠ ಸಿದ್ದಾಪುರ ಸ್ವಾಗತಿಸಿದರು.

ಇದೇ ಸಂದರ್ಭದಲ್ಲಿ ಮದರಿಯ ರಾಚಯ್ಯ ಶಾಸ್ತ್ರಿ ಹಿರೇಮಠ-ಪ್ರವಚನ ಕ್ಷೇತ್ರ, ನಾಗಾವಿಯ ಲಕ್ಷ್ಮಣ ತಳವಾರ-ಗಾಯನ ಕ್ಷೇತ್ರ ಹಾಗೂ ಡಾ. ಹನುಮಂತ ಕೊಡಗಾನೂರ ಅವರಿಗೆ ಕುಮಾರಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಮಣ್ಣ ಮಲ್ಲಿಗವಾಡ ಅವರಿಗೆ ಪದ್ಮಭೂಷಣ ಪಂ. ಪುಟ್ಟರಾಜ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಆನಂತರ ಪದ್ಮಭೂಷಣ ಡಾ. ಪುಟ್ಟರಾಜ ಕವಿಗವಾಯಿಗಳವರ ಅಷ್ಟೋತ್ತರ ಶತನಾಮಾವಳಿ ಅಷ್ಟಾವರಣ ಕಥಾ ಕೀರ್ತನ ಮಾಲಿಕೆ ಹಾಗೂ ಶ್ರೀಗುರು ಪುಟ್ಟರಾಜ ಚರಿತಂ (ಪುರಾಣ) ಲೋಕಾರ್ಪಣೆಗೊಂಡವು. ಅಹೋರಾತ್ರಿ ಸ್ವರಸಮಾರಾಧನೆ ನಡೆಯಿತು. ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ ಭಕ್ತರು ತಮ್ಮ ಸಂಗೀತ ಸೇವೆಯನ್ನು ಅರ್ಪಣೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ
ರೈತ ಭವನ ಶಿಥಿಲ, ವಾಸಿಸಲು ಜಟಿಲ!