ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಟ್ರಸ್ಟ್‌ನಿಂದ ಈವರೆಗೆ ಲೆಕ್ಕ ನೀಡದ ಹಿನ್ನೆಲೆಯಲ್ಲಿ ಟ್ರಸ್ಟಿಗಳ ವಿರುದ್ಧ ಮತ್ತೆ ಲೆಕ್ಕ ಕೊಡಿ ಚಳವಳಿ ಪುನಾರಂಭಿಸಲಿದ್ದೇವೆ ಎಂದು ಸಮಾಜದ ಹಿರಿಯ ಮುಖಂಡ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಎಚ್ಚರಿಸಿದ್ದಾರೆ.
- ಟ್ರಸ್ಟಿಗಳ ಅಂಗಡಿ, ಮನೆ ಮುಂದೆ ಹೋರಾಟ ಶುರು ಮಾಡ್ತೇವೆ: ಎಚ್.ಎಸ್.ಶಿವಶಂಕರ್ ಎಚ್ಚರಿಕೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆ
ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಟ್ರಸ್ಟ್‌ನಿಂದ ಈವರೆಗೆ ಲೆಕ್ಕ ನೀಡದ ಹಿನ್ನೆಲೆಯಲ್ಲಿ ಟ್ರಸ್ಟಿಗಳ ವಿರುದ್ಧ ಮತ್ತೆ ಲೆಕ್ಕ ಕೊಡಿ ಚಳವಳಿ ಪುನಾರಂಭಿಸಲಿದ್ದೇವೆ ಎಂದು ಸಮಾಜದ ಹಿರಿಯ ಮುಖಂಡ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಎಚ್ಚರಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಳವಳಿಯ ಭಾಗವಾಗಿ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿಯವರ ಅಂಗಡಿಗಳ ಮುಂದೆ ಪ್ರತಿಭಟಿಸುವ ಮೂಲಕ ಚಳವಳಿಯನ್ನು ಮತ್ತೆ ಆರಂಭಿಸಲಿದ್ದು, ಟ್ರಸ್ಟಿಗಳು ಲೆಕ್ಕ ಕೊಡುವವರೆಗೂ ಹೋರಾಟ ನಡೆಯಲಿದೆ ಎಂದರು.
ಸಮಾಜದ ನಾಯಕರು ಸಂಧಾನ ನಡೆಸಿದ್ದರಿಂದ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೆವು. ಕೊಟ್ಟ ಮಾತಿನಂತೆ ಟ್ರಸ್ಟಿಗಳು ಸತ್ಯ ಹಾಗೂ ಧರ್ಮದ ಲೆಕ್ಕವನ್ನು ಒಪ್ಪಿಸದ ಕಾರಣ ಮತ್ತೆ ಹೋರಾಟ ಶುರು ಮಾಡುತ್ತಿದ್ದೇವೆ. ಸತ್ಯ ಮತ್ತು ಧರ್ಮದ ಲೆಕ್ಕವನ್ನು ಟ್ರಸ್ಟಿಗಳು ನೀಡುವವರೆಗೂ ಹೋರಾಟ ನಿಲ್ಲದು ಎಂದು ಅವರು ಸ್ಪಷ್ಟಪಡಿಸಿದರು.
ದಾವಣಗೆರೆ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ ಜಾಮೀನು ದೊರೆತಿದೆ. ಇದರಿಂದ ನಮ್ಮ ಹೋರಾಟಕ್ಕೆ ಮತ್ತಷ್ಟು ಬಲ ಸಿಕ್ಕಂತಾಗಿದೆ. ಇನ್ನು ಟ್ರಸ್ಟ್‌ನ ಸತ್ಯ ಮತ್ತು ಧರ್ಮದ ಲೆಕ್ಕ ನೀಡುವಂತೆ ಹೋರಾಟವನ್ನು ತೀವ್ರಗೊಳಿಸುತ್ತಿದ್ದೇವೆ ಎಂದು ಎಚ್ಚೆಸ್ ಶಿವಶಂಕರ್ ಹೇಳಿದರು.
ಪೀಠದ ಆಡಳಿತಾಧಿಕಾರಿ ಪಿ.ರಾಜಕುಮಾರ ಮಾತನಾಡಿ, ಪೀಠದಲ್ಲಿ ವಸತಿ ನಿಲಯ ಸ್ಥಾಪಿಸದಿದ್ದರೂ ಟ್ರಸ್ಟಿಗಳು ಸರ್ಕಾರದಿಂದ ₹10.50 ಕೋಟಿ ಅನುದಾನ ಪಡೆದಿದ್ದಾರೆ. ಅದಕ್ಕಾಗಿ ಅಧಿಕಾರಿಗಳ ಪೋರ್ಜರಿ ಸಹಿಗಳನ್ನೂ ಮಾಡಲಾಗಿದೆ. ಟ್ರಸ್ಟಿಗಳು ನಡೆಸಿದ ಅವ್ಯವಹಾರ, ಅಕ್ರಮಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಲೋಕಾಯುಕ್ತ ಹಾಗೂ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಲಿದ್ದೇವೆ ಎಂದರು.
ಲೆಕ್ಕ ಕೊಡಿ ಹೋರಾಟ ಸಮಿತಿ ಅಧ್ಯಕ್ಷ ಎಂ.ಜಿ. ಪರಮೇಶ್ವರ ಗೌಡ ಮಾತನಾಡಿ, ಶ್ರೀ ವಚನಾನಂದ ಸ್ವಾಮೀಜಿಗೆ ಜೈಲಿಗೆ ಕಳಿಸಿ, ಮಠದ ಆಡಳಿತವನ್ನು ಸಂಪೂರ್ಣ ನಿಯಂತ್ರಿಸಲು ಟ್ರಸ್ಟಿಗಳು ಪ್ರಯತ್ನಿಸಿದ್ದರು. ಟ್ರಸ್ಟಿಗಳ ಸಂಚು, ಕುತಂತ್ರ ಫಲಿಸಿಲ್ಲ. ಈವರೆಗೂ ಸತ್ಯದ ಲೆಕ್ಕ ಟ್ರಸ್ಟಿಗಳು ಒಪ್ಪಿಸಿಲ್ಲ. ಹೀಗಿದ್ದರೂ ಪಂಚಮಸಾಲಿ ವಿದ್ಯಾರ್ಥಿಗಳಿಗೆ ಟ್ರಸ್ಟ್‌ನಿಂದ ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸುತ್ತಿರುವುದು ಸರಿಯಲ್ಲ. ಮಕ್ಕಳು, ಪಾಲಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಮನವಿ ಮಾಡಿದರು.
ಸಮಾಜದ ಮುಖಂಡರು, ಲೆಕ್ಕ ಕೊಡಿ ಚಳವಳಿ ಸಮಿತಿ ಮುಖಂಡರಾದ ಪಂಚಣ್ಣ, ಎಚ್.ಪಿ.ಬಾಬಣ್ಣ, ಡಾ.ವೀರಾಪುರ, ಶಂಕರಗೌಡ, ವೀರಣ್ಣ, ಎಸ್.ಓಂಕಾರಪ್ಪ, ಅಶೋಕ, ನಾಗಪ್ಪ ಕಡಕೋಳ ಇತರರು ಇದ್ದರು.
- - -
(ಬಾಕ್ಸ್)
* 29ರಂದು ಗುರು ಪೂರ್ಣಿಮೆ ಹರಿಹರ ಪಂಚಮಸಾಲಿ ಪೀಠದಲ್ಲಿ ಗುರು ಪೂರ್ಣಿಮೆ ಕಾರ್ಯಕ್ರಮವನ್ನು ಜು.29ರಂದು ಹಮ್ಮಿಕೊಂಡಿದ್ದು, ವಚನಾನಂದ ಸ್ವಾಮೀಜಿ ಸನ್ಯಾಸ ಸ್ವೀಕರಿಸಿ 25 ವರ್ಷವಾದ ಬೆಳ್ಳಿ ಹಬ್ಬವೂ ಅಂದೇ ಇದೆ. ಹಾಗಾಗಿ, ಮಹಾಜಪ ಯೋಗ, ಇಷ್ಟಲಿಂಗ ಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿತರಣೆ ಸೇರಿದಂತೆ ದಿನವಿಡೀ ಕಾರ್ಯಕ್ರಮ ನಡೆಯಲಿದೆ. ಪಂಚಮಸಾಲಿ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಎಚ್.ಎಸ್.ಶಿವಶಂಕರ ಈ ಸಂದರ್ಭ ಮನವಿ ಮಾಡಿದರು.
- - -
-24ಕೆಡಿವಿಜಿ6: ದಾವಣಗೆರೆಯಲ್ಲಿ ಶುಕ್ರವಾರ ಪಂಚಮಸಾಲಿ ಸಮಾಜದ ಹಿರಿಯ ಮುಖಂಡ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.