ಕೊಪ್ಪಳ: ಬಹುಮುಖ ವ್ಯಕ್ತಿತ್ವದ ಡಾ. ಬಸವರಾಜ ದಿಂಡೂರು ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದವರನ್ನು ಒಗ್ಗೂಡಿಸಿದರು. ಪಂಚಮಸಾಲಿ ಸಮಾಜ ಸಂಘಟಿಸಿದ ಹಿರಿಮೆ ಅವರದಾಗಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದಿಗೂ ಸಹ ಅವರು ಹಸನ್ಮುಖಿಯಾಗಿಯೇ ಇದ್ದಾರೆ.ಆತಸಾಕ್ಷಿಯಾಗಿದ್ದಾಗ ಮಾತ್ರ ಅದು ಸಾಧ್ಯವಾಗುತ್ತದೆ. ತಾವು ಉದ್ಯಮಿಯಾಗಿ ಬೆಳೆಯುವುದರ ಜತೆಗೆ ಇತರರನ್ನು ಬೆಳೆಸಿದರು. ಅಷ್ಟೇ ಅಲ್ಲ,ವಿಶೇಷವಾಗಿ ಪಂಚಮಸಾಲಿ ಸಮಾಜವನ್ನು ಕಟ್ಟಿ ಬೆಳೆಸಿದ ಹಿರಿಮೆ ಅವರಿಗಿದೆ ಎಂದರು.
ಅವರು ಎಂದೂ ಇನ್ಮೊಬ್ಬರನ್ನು ಮೆಚ್ಚಿಸಲು ಮಾತನಾಡಿದ್ದನ್ನು ನಾನು ನೋಡಿಲ್ಲ. ಇಳಿವಯಸ್ಸಿನಲ್ಲಿಯೂ ಸಮಾಜದ ಸಂಘಟನೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿರುವ ದಿಂಡೂರು ಅವರ ಸಾಧನೆ ಅನನ್ಯ ಎಂದರು.ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಗವಿಮಠದ ಶ್ರೀಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಆರ್ಶಿವಚನ ನೀಡಿ, ಪ್ರತಿಯೊಬ್ಬರ ಬದುಕಿನಲ್ಲಿಯೂ ಹುಟ್ಟು ಸಾವು ಇದ್ದೇ ಇರುತ್ತದೆ. ಯಾರು ಸಹ ನಾವು ಇಲ್ಲಿಯೇ ಹುಟ್ಟಬೇಕು ಎಂದು ಕೇಳಿಕೊಂಡು ಬಂದಿರುವುದಿಲ್ಲ. ಹುಟ್ಟು ಮತ್ತು ಸಾವನ್ನು ಯಾರು ಸಹ ತಡೆಯಲು ಸಾಧ್ಯವಿಲ್ಲ. ಆದರೆ, ಇದ್ದಾಗ ನಮ್ಮ ಜೀವನ ನಾವು ರೂಪಿಸಿಕೊಳ್ಳಬೇಕು. ಜೀವನೋತ್ಸಾಹಿಯಾಗಿ ಕಾರ್ಯ ನಿರ್ವಹಿಸಬೇಕು. ಉತ್ಸಾಹ ಕಳೆದುಕೊಳ್ಳದೆ, ನಾಡಿಗಾಗಿ, ಸಮಾಜಕ್ಕಾಗಿ ದುಡಿಯುತ್ತಿರಬೇಕು. ಅಂದಾಗಲೇ ಅದು ಅರ್ಥಪೂರ್ಣ ಜೀವನ ಆಗಲು ಸಾಧ್ಯ ಎಂದರು.
ಜಗದ್ಗುರು ಶ್ರೀ ಫಕೀರೇಶ್ವರ ಸಂಸ್ಥಾನ ಮಠದ ಶಿರಹಟ್ಟಿ ಉತ್ತರಾಧಿಕಾರಿ ಶ್ರೀಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ ದಿಂಡೂರ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಸಮಾಜಕ್ಕಾಗಿ ಇಷ್ಟೊಂದು ದುಡಿದ ವ್ಯಕ್ತಿಯನ್ನು ನಾನು ಮತ್ತೊಬ್ಬರನ್ನು ಕಾಣಲು ಸಾಧ್ಯವಿಲ್ಲ ಎಂದರು.
ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀವಚನಾನಂದ ಮಹಾಸ್ವಾಮಿ ಮಾತನಾಡಿ, ದಿಂಡೂರು ಕಳೆಯುವ ಪ್ರತಿಕ್ಷಣ ಕೂಡ ಸಮಾಜದ ಏಳ್ಗೆ ಕುರಿತು ಚಿಂತಿಸುತ್ತಾರೆ. ಪಂಚಮಸಾಲಿ ರಾಜ್ಯಾಧ್ಯಕ್ಷರಾಗಿದ್ದ ಅವರು ಆ ಸ್ಥಾನಕ್ಕೆ ನ್ಯಾಯ ಒದಗಿಸಿ ಸಮಾಜದ ಸಂಘಟನೆಗೆ ಹೊಸ ದಿಕ್ಸೂಚಿಯಾದರು.
ಪಂಚಮಸಾಲಿ ಘಟಕದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.