ಭದ್ರಾ ಲಿಫ್ಟ್‌ ಇರಿಗೇಷನ್‌ಗೆ ನಮ್ಮ ಅಡ್ಡಿಯಿಲ್ಲ: ಎಂ.ಪಿ.ರೇಣುಕಾಚಾರ್ಯ

KannadaprabhaNewsNetwork |  
Published : Jun 22, 2025, 11:47 PM IST
ಹೊನ್ನಾಳಿ ಫೋಟೋ 22ಎಚ್.ಎಲ್.ಐ1. ಎಂ.ಪಿ.ರೇಣುಕಾಚಾರ್ಯ. | Kannada Prabha

ಸಾರಾಂಶ

ಭದ್ರಾ ಬಲದಂಡೆ ನಾಲೆಯನ್ನು ಸೀಳಿ ಚಿಕ್ಕಮಗಳೂರು, ತರೀಕೆರೆ ಮತ್ತು ಹೊಸದುರ್ಗ ನಗರಗಳಿಗೆ ಕುಡಿಯುವ ಉದ್ದೇಶಕ್ಕಾಗಿ ನೀರು ಬಿಡಲು ನಮ್ಮ ಪ್ರಬಲ ವಿರೋಧವಿದೆ. ಆದರೆ ಲಿಫ್ಟ್ ಇರಿಗೇಷನ್ ಮೂಲಕ ನೀರು ಕೊಡಲು ನಮ್ಮದೇನೂ ಅಭ್ಯಂತರವಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಕುಡಿವ ನೀರಿಗೆ ವಿರೋಧ

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಭದ್ರಾ ಬಲದಂಡೆ ನಾಲೆಯನ್ನು ಸೀಳಿ ಚಿಕ್ಕಮಗಳೂರು, ತರೀಕೆರೆ ಮತ್ತು ಹೊಸದುರ್ಗ ನಗರಗಳಿಗೆ ಕುಡಿಯುವ ಉದ್ದೇಶಕ್ಕಾಗಿ ನೀರು ಬಿಡಲು ನಮ್ಮ ಪ್ರಬಲ ವಿರೋಧವಿದೆ. ಆದರೆ ಲಿಫ್ಟ್ ಇರಿಗೇಷನ್ ಮೂಲಕ ನೀರು ಕೊಡಲು ನಮ್ಮದೇನೂ ಅಭ್ಯಂತರವಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಈ ಕಾಮಗಾರಿಗೆ 1600 ಕೋಟಿ ರು. ಮಂಜೂರು ಮಾಡಿದ್ದರು. ಆದರೆ ಬಲದಂಡೆ ನಾಲೆಯನ್ನು ಸೀಳಿ ನೀರು ಕೊಡಿ ಎಂದು ಅವರು ಎಲ್ಲಿಯೂ ಹೇಳಿಲ್ಲ, ಈ ಬಗ್ಗೆ ಕಾಂಗ್ರೆಸ್ ಮುಖಂಡರು ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದರು.

ನಾನು ಮತ್ತು ಮಾಜಿ ಶಾಸಕ ಬಸವರಾಜನಾಯ್ಕ ಅವರು ಜೂನ್ 21 ರಂದು ಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದೇವೆ. ಜಲಾಶಯದ ಬಫರ್ ಜೋನ್ ನ ಕೆಳಗೆ ಕಾಮಗಾರಿ ಕೈಗೊಳ್ಳುವುದಕ್ಕೆ ನಮ್ಮ ವಿರೋಧವಿದೆ. ಒಂದು ವೇಳೆ ನಾಲೆಯನ್ನು ಸೀಳಿ ನೀರು ಕೊಡಲು ಸರ್ಕಾರ ಮುಂದಾದರೆ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ. ಸರ್ಕಾರದ ಈ ನಿರ್ಧಾರದಿಂದ ನಮ್ಮ ತಾಲ್ಲೂಕಿನ ಕೊನೆ ಭಾಗದ ರೈತರಿಗೆ ನೀರು ಹೋಗುವುದಿಲ್ಲ, ಈ ಸಮಸ್ಯೆ ಇನ್ನೂ ಉಲ್ಬಣಗೊಳ್ಳುತ್ತದೆ ಎಂದು ಹೇಳಿದರು.

ಜೂ.23 ರಂದು ಬೆಳಿಗ್ಗೆ 10 ಗಂಟೆಗೆ ಭದ್ರಾ ಡ್ಯಾಂ ಬಲದಂಡೆ ಬಳಿ ನಾವು ಹೋರಾಟವನ್ನು ಹಮ್ಮಿಕೊಂಡಿದ್ದು, ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಹರಪನಹಳ್ಳಿ, ದಾವಣಗೆರೆ, ಚನ್ನಗಿರಿ ಹಾಗೂ ಹೊನ್ನಾಳಿ ಭಾಗದ ರೈತರು ತಮ್ಮ ಸ್ವಂತ ವಾಹನಗಳಲ್ಲಿ ರೊಟ್ಟಿ ಬುತ್ತಿ ಕಟ್ಟಿಕೊಂಡು ಬರಬೇಕು, ನಾವು ಎಲ್ಲಾ ರೀತಿಯ ಹೋರಾಟಕ್ಕೂ ಸಿದ್ಧರಿದ್ದೇವೆ. ಪೊಲೀಸರ ಬೆದರಿಕೆಗೆ ಬಗ್ಗುವುದಿಲ್ಲ, ನಮ್ಮ ಹೋರಾಟ ಅಚಲ ಎಂದರು.

ಬಡವರಿಗೆ ಮಂಜೂರಾದ ಮನೆಯಲ್ಲೂ ಲಂಚ ಕೇಳುವ ಹೀನಸ್ಥಿತಿಗೆ ರಾಜ್ಯ ಸರ್ಕಾರ ಬಂದಿದೆ. ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ನ ಶಾಸಕರೂ, ಯೋಜನಾ ಆಯೋಗದ ರಾಜ್ಯ ಉಪಾಧ್ಯಕ್ಷರೂ ಆದ ಬಿ.ಆರ್. ಪಾಟೀಲ್ ಹೇಳಿದ್ದಾರೆ. ಆದ್ದರಿಂದ ಕೂಡಲೇ ಮುಖ್ಯಮಂತ್ರಿಗಳು ಇದನ್ನು ತನಿಖೆಗೊಳಪಡಿಸಬೇಕು ಎಂದು ರೇಣುಕಾಚಾರ್ಯ ಆಗ್ರಹಿಸಿದರು. ವಸತಿ ಸಚಿವ ಜಮೀರ್ ಅಹ್ಮದ್ ಒಬ್ಬ ಬಂಡ, ಅವನು ರಾಜೀನಾಮೆ ನೀಡುವುದಿಲ್ಲ, ಆದ್ದರಿಂದ ಮುಖ್ಯಮಂತ್ರಿಗಳು ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಮಾರುತಿನಾಯ್ಕ, ಇಂಚರ ಮಂಜುನಾಥ್, ನಟರಾಜ್ ಕೂಲಂಬಿ, ಯಕ್ಕನಹಳ್ಳಿ ಶಂಭಣ್ಣ, ಸಂತೋಷ್, ಮಹೇಶ್ ಇದ್ದರು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ