ಎಲ್ಲ ಕಲಾ ಲೋಕದಲ್ಲಿ ಯುವ ಪಂಥ ವಿಜೃಂಭಿಸುತ್ತಿದೆ: ನಾಡೋಜ ಡಾ.ಹಂ.ಪ.ನಾಗರಾಜಯ್ಯ

KannadaprabhaNewsNetwork |  
Published : Jun 22, 2025, 11:47 PM IST
22ಕೆಎಂಎನ್ ಡಿ18 | Kannada Prabha

ಸಾರಾಂಶ

ಕನ್ನಡ ಸಾಹಿತ್ಯ ಪರಂಪರೆಯ ಸಿಂಹಾವಲೋಕನ ಮಾಡಿ ನೋಡಿದರೆ, ಅದರ ಬೆಳವಣಿಗೆಗಳ ವಿವಿಧ ಘಟ್ಟಗಳನ್ನು ಗಮನಿಸಿದರೆ ಹಳಗನ್ನಡ ಹೊಯಿತು, ನಡುಗನ್ನಡ, ಚಂಪೂ ಕಾವ್ಯ ಬಂತು. ರಗಳೆ, ಷಟ್ಪದಿ, ತ್ರಿಪದಿಗಳೆಲ್ಲ ಬಂದವು ಹೋದವು. ಆಧುನಿಕ ಕಾಲಘಟ್ಟದಲ್ಲಿ ನವ್ಯಪಂಥ ಹೊಯಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಸ್ತುತ ಕಾಲಘಟ್ಟದಲ್ಲಿ ಕಲೆ, ಸಾಹಿತ್ಯ, ಕಾವ್ಯ, ನಾಟಕ ಸೇರಿದಂತೆ ಎಲ್ಲ ಕಲಾ ಲೋಕದಲ್ಲಿ ಯುವ ಪಂಥ ವಿಜೃಂಭಿಸುತ್ತಿದೆ. ಈ ಸನ್ನಿವೇಶದಲ್ಲಿ ನಮ್ಮ ತಲೆಮಾರು ಒಳಗೊಂಡಿರುವುದು ಅತ್ಯಂತ ಸಂತಸದ ಸಂಗತಿ ಎಂದು ಹಿರಿಯ ಸಾಹಿತಿ ನಾಡೋಜ ಡಾ.ಹಂ.ಪ.ನಾಗರಾಜಯ್ಯ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದಿಂದ ಆಯೋಜಿಸಿದ್ದ 2024ನೇ ಸಾಲಿನ ಡಾ.ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲೇಖಕ ಅನಿಲ್ ಗುನ್ನಾಪುರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಂಪರೆಯ ಸಿಂಹಾವಲೋಕನ ಮಾಡಿ ನೋಡಿದರೆ, ಅದರ ಬೆಳವಣಿಗೆಗಳ ವಿವಿಧ ಘಟ್ಟಗಳನ್ನು ಗಮನಿಸಿದರೆ ಹಳಗನ್ನಡ ಹೊಯಿತು, ನಡುಗನ್ನಡ, ಚಂಪೂ ಕಾವ್ಯ ಬಂತು. ರಗಳೆ, ಷಟ್ಪದಿ, ತ್ರಿಪದಿಗಳೆಲ್ಲ ಬಂದವು ಹೋದವು. ಆಧುನಿಕ ಕಾಲಘಟ್ಟದಲ್ಲಿ ನವ್ಯಪಂಥ ಹೊಯಿತು. ಪ್ರಗತಿಶೀಲ ಬಂತು, ಬಂಡಾಯ, ದಲಿತ ಎಲ್ಲ ಬಂತು ಈ ಎಲ್ಲವನ್ನು ನೋಡಿದ್ದ ನನ್ನ ತಲೆಮಾರಿನವರು ಈಗ ಯುವಕ ಯುವತಿಯರು ಬರೆಯುತ್ತಿರುವ ಪರಿಯನ್ನು ನೋಡುತ್ತಿದ್ದು, ಆಧುನಿಕ ಪರಂಪರೆ ಯಾವುದಕ್ಕೂ ಕಡಿಮೆಯಿಲ್ಲದಂತೆ ವಿಜೃಂಭಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಸಮ್ಮೇಳನಗಳ ಗೋಷ್ಠಿಗಳು, ಸಂವಾದ ಮುಂತಾದ ಸಾಹಿತ್ಯಿಕ ವೇದಿಕೆ ಕಾರ್ಯಕ್ರಮಗಳಲ್ಲಿ ಈ ಸಭಾಂಗಣದಲ್ಲಿ ನೆರೆದಿರುವಷ್ಟೇ ಸಂಖ್ಯೆಯ ಜನ ಇರುತ್ತಾರೆ. ಹಾಗಾಗಿ ಈ ಕಾರ್ಯಕ್ರಮವು ಸಾಹಿತ್ಯ ಸಮ್ಮೇಳದಂತೆಯೇ ಕಂಡುಬರುತ್ತಿದೆ ಎಂದು ಶ್ಲಾಘಿಸಿದರು.

ಸರಳ ಹಾಗೂ ಜನಭಾಷೆಯಲ್ಲಿ ಕಥೆಗಳನ್ನು ಬರೆಯುತ್ತಿದ್ದ ಬೆಸಗರಹಳ್ಳಿ ರಾಮಣ್ಣರನ್ನು ಡಾ.ಹಾ.ಮಾ.ನಾಯಕ ಅವರು ನನಗೆ ಪರಿಚಯಿಸಿ ಅವರ ಬಗ್ಗೆ ಎಲ್ಲವನ್ನೂ ತಿಳಿಸಿದ್ದರು. ಹಾಗಾಗಿ ರಾಮಣ್ಣನವರ ಸಹವಾಸ ನನ್ನದಾಗಿತ್ತು. ರಾಮಣ್ಣ ಅವರು ವೈದ್ಯರಾಗಿ ಸೇವೆ ಸಲ್ಲಿಸುವ ಜೊತೆಗೆ ನಿರಂತರವಾಗಿ ಸಾಮಾಜಿಕ ರೋಗಕ್ಕೆ ತುತ್ತಾದ ಸಮುದಾಯಕ್ಕೆ ಚಿಕಿತ್ಸೆ ನೀಡಲು ಸಾಹಿತ್ಯದ ಶಸ್ತ್ರ ಹಿಡಿದು ನಿಂತರು. ಆದ್ದರಿಂದ ಅವರು ದಾಖಲಿಸಿರುವ ತಮ್ಮ ಅನುಭವವನ್ನು ರಾಮಣ್ಣನವರ ಪುತ್ರರಾದ ರವಿಕಾಂತೇಗೌಡರು ಒಂದು ಚಲನಚಿತ್ರ ಮಾಡಿದರೆ ಬೆಸಗರಹಳ್ಳಿ ರಾಮಣ್ಣ ಹೆಗ್ಗಳಿಕೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿದಂತೆ ಎಂದು ಸಲಹೆ ನೀಡಿದರು.

ಸ್ತ್ರೀವಾದಿ ಚಿಂತಕಿ ಡಾ.ಎಚ್.ಎಸ್.ಶ್ರೀಮತಿ ಅವರು ಪುರುಷ ಪ್ರದಾನ ವ್ಯವಸ್ಥೆ ಹಾಗೂ ಮಾತೃ ಪ್ರದಾನ ವ್ಯವಸ್ಥೆಯ ನಡುವಿನ ಹಲವು ಸ್ಥರಗಳ ಕುರಿತು ಬೆಳಕು ಚೆಲ್ಲಿದರು. ತುಮಕೂರು ವಿವಿ ಕನ್ನಡ ಪ್ರಾಧ್ಯಾಪಕರಾದ ಡಾ.ಗೀತಾ ವಸಂತ ಅವರು ಪ್ರಶಸ್ತಿ ವಿಜೇತ ಕೃತಿ ಸರ್ವೇ ನಂಬರ್-97’ ಕುರಿತು ಮಾತನಾಡಿದರು. ಬಳಿಕ ಬಹುಮಾನಿತ ಕೃತಿ ಲೇಖಕ ಅನಿಲ್ ಗುನ್ನಾಪುರ ಅವರಿಗೆ 25 ಸಾವಿರ ನಗದು ಬಹುಮಾನ, ಪ್ರಶಸ್ತಿ ಫಲಕ ಮತ್ತು ಪತ್ರ ನೀಡಿ ಗೌರವಿಸಲಾಯಿತು.

ಶಿಲೆ ಹಾಗೂ ಗಿಡಬಳ್ಳಿಗಳ ನೈಜ ಪರಿಸರದ ಸನ್ನಿವೇಶದಿಂದ ವಿಶಿಷ್ಠವಾಗಿ ಸಜ್ಜುಗೊಳಿಸಲಾದ ವೇದಿಕೆಯಲ್ಲಿ ಡಾ.ಬೆಸಗರಹಳ್ಳಿ ರಾಮಣ್ಣರ ಪುತ್ರ ಪೊಲೀಸ್ ಅಧಿಕಾರಿ ರವಿಕಾಂತೇಗೌಡರು ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತ ಕೋರಿದರು. ಪ್ರತಿಷ್ಠಾನದ ಪೋಷಕರಾದ ಡಿ.ಪಿ.ರಾಜಮ್ಮ ರಾಮಣ್ಣ, ಪ್ರತಿಷ್ಠಾನದ ಅಧ್ಯಕ್ಷೆ ಎಚ್.ಆರ್.ಸುಜಾತಾ ಅವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಆಲೆಮನೆಗಳಲ್ಲಿ ಬೆಲ್ಲವನ್ನು ಕಟ್ಟಲು ಬಳಸುವ ಕಬ್ಬಿನ ತರಗಿನಲ್ಲಿ ಆಲೆಮನೆ ಪುಸ್ತಕಗಳನ್ನು ಕಟ್ಟಿ, ಬುಟ್ಟಿಯಲ್ಲಿರಿಸಿ ಈ ಬುಟ್ಟಿಯನ್ನು ಆಲೆಮನೆ ಕೆಲಸಗಾರ ಪಟಾಪಟಿ ಚಡ್ಡಿ, ಪಂಚೆ, ಬನಿಯನ್ ಧರಿಸಿದ್ದ ವ್ಯಕ್ತಿ ವೇದಿಕೆಗೆ ತಂದು ಆಲೆಮನೆ ಕೃತಿ ಬಿಡುಗಡೆ ಗೊಳಿಸಿದ್ದು ವಿಶೇಷವಾಗಿತ್ತು. ವೇದಿಕೆಯಲ್ಲಿದ್ದ ಗಣ್ಯರಿಗೆ ಮಂಡ್ಯ ಸ್ಟೈಲ್ ಟವಲನ್ನು ಹೆಗಲಿಗೆ ಹಾಕಿ ಸ್ವಾಗತ ಕೋರಲಾಯಿತು.

ಸಭಿಕರ ಸಾಲಿನಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಅನೇಕ ರಾಜ್ಯ ಮಟ್ಟದ ಪೊಲೀಸ್ ಅಧಿಕಾರಿಗಳು, ವಿವಿಧ ಕ್ಷೇತ್ರಗಳ ಮುಖಂಡರು, ಸಾಹಿತಿಗಳು ಕಾರ್ಯಕ್ರಮ ಮುಗಿಯುವ ವರೆಗೂ ಆಸೀನರಾಗಿದ್ದು ವಿಶೇಷವಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ