ವಿಜಯಪುರ: ಪಟ್ಟಣದ ವಿವಿಧ ಸರ್ಕಾರಿ, ಅನುದಾನಿತ ಶಾಲೆಗಳಿಗೆ ದಿಢೀರ್ ಭೇಟಿ ನೀಡಿದ್ದ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬೈಲಾಂಜಿನಪ್ಪ, ಶಾಲಾ ವಿದ್ಯಾರ್ಥಿಗಳಿಗೆ ಸಿಗುವಂತಹ ಸೌಲಭ್ಯ, ಮಕ್ಕಳ ಶೈಕ್ಷಣಿಕ ಬೆಳವಣಿಗೆಗಾಗಿ ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು.
ಬಿಸಿಯೂಟ ಹಾಗೂ ವಿತರಣೆ ಮಾಡುತ್ತಿದ್ದ ಮೊಟ್ಟೆ, ಬಾಳೆಹಣ್ಣು ಪರೀಕ್ಷಿಸಿದರು. ಮೊಟ್ಟೆ ತಿನ್ನುವುದರಿಂದ ಆಗುವಂತಹ ಪ್ರಯೋಜನಗಳ ಕುರಿತು ಮಕ್ಕಳಿಗೆ ತಿಳಿಸಿದರು.
ಅನುಮತಿಯಿಲ್ಲದ ಶಾಲೆಗಳ ಬಗ್ಗೆ ನಿಗಾ:ಜಿಲ್ಲೆಯಲ್ಲಿ ಯಾವ ಯಾವ ಖಾಸಗಿ ಶಾಲೆಗಳು ಈ ಶೈಕ್ಷಣಿಕ ಸಾಲಿನಲ್ಲಿ ಅನುಮತಿ ಪಡೆದಿಲ್ಲವೋ ಅಂತಹ ಶಾಲೆಗಳನ್ನು ಆರಂಭಿಸದಂತೆ ಸೂಚನೆ ನೀಡಲಾಗಿದೆ. ಎಲ್ಲಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೋಟಿಸ್ ಕಳುಹಿಸಲಾಗಿದೆ. ಒಂದು ವೇಳೆ ಅನುಮತಿ ಪಡೆಯದ ಶಾಲೆಗಳು ಆರಂಭಗೊಂಡಿದ್ದರೆ, ಶಿಕ್ಷಣಾಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಅನುಮತಿ ಪಡೆಯದ ಶಾಲೆಗಳಿಗೆ ಪಠ್ಯಪುಸ್ತಕಗಳನ್ನು ಸರಬರಾಜು ಮಾಡದಂತೆ ತಡೆಹಿಡಿಯಲಾಗಿದೆ ಎಂದು ಉಪನಿರ್ದೇಶಕ ಬೈಲಾಂಜಿನಪ್ಪ ತಿಳಿಸಿದರು.
ಶಾಲೆಗಳಲ್ಲಿ ಸ್ವಚ್ಛತೆಗೆ ಆದ್ಯತೆ:ಎಲ್ಲಾ ಶಾಲೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಅಡುಗೆ ತಯಾರು ಮಾಡುವಂತಹ ಅಡುಗೆ ಕೋಣೆಗಳ ಒಳಗೆ ಮಕ್ಕಳನ್ನು ಬಿಡಬಾರದು, ಆಹಾರವನ್ನು ಗುಣಮಟ್ಟದಿಂದ ತಯಾರಿಸಬೇಕು, ಅಡುಗೆ ತಯಾರಿಸುವ ಸಿಬ್ಬಂದಿ ಕಡ್ಡಾಯವಾಗಿ ತಲೆಗೆ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಸುಮಾಚಂದ್ರಶೇಖರ್, ಸಿಎಸ್‌ಆರ್ ಎಂ.ಡಿ.ಪ್ರತಿಭಾನಾಯಕ್, ಬಿಆರ್‌ಪಿ ಸಮೀರಾ, ಶ್ವೇತಾ, ಪ್ರೊ.ನಾಗರಾಜಯ್ಯ, ಇಸಿಒ ಅನಂತ, ದೇವನಹಳ್ಳಿ ಸಿಆರ್‌ಪಿ ರವೀಂದ್ರ, ವಿಜಯಪುರ ಕ್ಲಸ್ಟರ್ ಸಿಆರ್‌ಪಿ ದಿನೇಶ್ ಕುಮಾರ್, ಮುಖ್ಯಶಿಕ್ಷಕ ಮನೋಹರ್ ಇತರರು ಹಾಜರಿದ್ದರು.