ಡಿಂಬಾಸನ ಯೋಗದಲ್ಲಿ ಕೊಡಗಿನ ಸಿಂಚನಾ ವಿಶ್ವದಾಖಲೆ

KannadaprabhaNewsNetwork |  
Published : Jun 22, 2025, 11:47 PM IST
ಚಿತ್ರ : 22ಎಂಡಿಕೆ1: ಡಿಂಬಾಸನ ಯೋಗ ಪ್ರದರ್ಶಿಸಿದ ಸಿಂಚನ.  | Kannada Prabha

ಸಾರಾಂಶ

ಯೋಗದಲ್ಲಿನ ಡಿಂಬಾಸನ ಭಂಗಿಯಲ್ಲಿ 30 ನಿಮಿಷ 5 ಸೆಕೆಂಡ್‌ಗಳ ಪ್ರದರ್ಶನದ ಮೂಲಕ ಮದೆನಾಡಿನ ವಿದ್ಯಾರ್ಥಿನಿ ಬಿ.ಕೆ. ಸಿಂಚನಾ ಗಿನ್ನಿಸ್‌ ವಿಶ್ವದಾಖಲೆಗೆ ಸೇರ್ಪಡೆಯಾಗಲು ಅರ್ಹತೆ ಪಡೆದಿದ್ದಾಳೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಯೋಗದಲ್ಲಿನ ಡಿಂಬಾಸನ ಭಂಗಿಯಲ್ಲಿ 30 ನಿಮಿಷ 5 ಸೆಕೆಂಡ್‌ಗಳ ಪ್ರದರ್ಶನದ ಮೂಲಕ ಮದೆನಾಡಿನ ವಿದ್ಯಾರ್ಥಿನಿ ಬಿ.ಕೆ. ಸಿಂಚನಾ ಗಿನ್ನಿಸ್ ವಿಶ್ವದಾಖಲೆಗೆ ಸೇರ್ಪಡೆಯಾಗಲು ಅರ್ಹತೆ ಪಡೆದಿದ್ದಾಳೆ.

ಕೊಡಗು ಪತ್ರಕರ್ತರ ಸಂಘ ಮತ್ತು ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನಗರದ ಕೊಡಗು ಪತ್ರಿಕಾ ಭವನ ಸಭಾಂಗಣದಲ್ಲಿ ಶನಿವಾರ ಸಂಜೆ ಆಯೋಜಿತ ವಿನೂತನ ಕಾರ್ಯಕ್ರಮದಲ್ಲಿ ಬಿ.ಸಿ. ಕೀರ್ತಿಕುಮಾರ್, ರೇಣುಕಾ ದಂಪತಿ ಪುತ್ರಿ, ಶ್ರೀ ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟ್‌ಗೆ ಒಳಪಟ್ಟ ಮದೆನಾಡು ಬಿಜಿಎಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಬಿ.ಕೆ. ಸಿಂಚನ ಈ ವಿಶಿಷ್ಟ ಸಾಧನೆ ಮಾಡಿ ಗಮನ ಸೆಳೆದಳು.

ಯೋಗಾಸನದ ‘ಡಿಂಬಾಸನ’ ಭಂಗಿಯಲ್ಲಿ ಇಲ್ಲಿಯವರೆಗೆ ಆಸ್ಟ್ರೀಯಾದ 32 ವರ್ಷದ ಸ್ಟೆಫಿನಿ ಮಿಲಿಂಗರ್ ಎಂಬ ಯೋಗಪಟು 30 ನಿಮಿಷ 3 ಸೆಕೆಂಡ್‌ಗಳ ಕಾಲ ಸ್ಥಿರವಾಗಿರುವ ಮೂಲಕ ಗಿನ್ನಿಸ್ ವಿಶ್ವದಾಖಲೆ ಮಾಡಿದ್ದರು. ಈ ದಾಖಲೆಯನ್ನು 2 ಸೆಕೆಂಡ್‌ಗಳಷ್ಟು ಉತ್ತಮ ಪಡಿಸುವ ಮೂಲಕ ಸಿಂಚನಾ ಇದೀಗ ಗಿನ್ನಿಸ್ ದಾಖಲೆಯ ಕದ ತಟ್ಟಿದ್ದಾಳೆ.

ಸಿಂಚನಾಳ ಯೋಗಾಸನದಲ್ಲಿನ ಈ ವಿಶಿಷ್ಟ ಸಾಧನೆ ಅಧಿಕೃತವಾಗಿ ಸದ್ಯದಲ್ಲಿಯೇ ಗಿನ್ನಿಸ್ ದಾಖಲೆ ಸೇರಲಿದೆ. ಈಕೆ ದಾಖಲೆಯ ಅವಧಿ ವರೆಗೆ ಡಿಂಬಾಸನ ಭಂಗಿಯಲ್ಲಿದ್ದು, ಹಳೆಯ ದಾಖಲೆಯನ್ನು ಮುರಿದ ಹಿನ್ನೆಲೆಯಲ್ಲಿ ಕೊಡಗು ಪತ್ರಕರ್ತರ ಸಂಘ ಮತ್ತು ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಸಂಘಟನೆಗಳು ಕಾರ್ಯಕ್ರಮದಲ್ಲಿ ಸಿಂಚನಾಳಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಿತು.

ಪ್ರಶಾಂತ ಚಿತ್ತಕ್ಕೆ ಡಿಂಬಾಸನ ಸಹಕಾರಿ:

ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದ ಮಡಿಕೇರಿಯ ಯೋಗ ಗುರು ಕೆ.ಕೆ.ಮಹೇಶ್ ಕುಮಾರ್ ಮಾತನಾಡಿ, ಡಿಂಬಾಸನ ಎನ್ನುವುದು ಚಕ್ರಾಸನದ ಮುಂದುವರಿದ ಭಾಗ. ಈ ಆಸನ ಪ್ರಶಾಂತ ಚಿತ್ತತೆಗೆ ಮತ್ತು ಬೆನ್ನು ಹುರಿ, ಕಾಲು, ಸೊಂಟದ ಭಾಗದ ಕೀಲುಗಳ ಆರೋಗ್ಯಕ್ಕೆ ಅತ್ಯಂತ ಪೂರಕವಾದುದುದೆಂದು ವಿವರಿಸಿದರು.

ಲೋಕ ವಿಖ್ಯಾತೆ:

ದಾಖಲೆಯ ಆಸನ ಪ್ರದರ್ಶನದ ಬಳಿಕ ಮದೆ ಮಹೇಶ್ವರ ಶಾಲೆಯ ನಿವೃತ್ತ ಪ್ರಾಂಶುಪಾಲ ಬಿ.ಆರ್. ಜೋಯಪ್ಪ ಮಾತನಾಡಿ, ಎಳೆವೆಯ ಹಂತದಿಂದಲೇ ಅಮ್ಮ ಅಪ್ಪನ ಪ್ರೋತ್ಸಾಹದಿಂದ ಸಿಂಚನಾ ಇದೀಗ ವಿಶ್ವ ದಾಖಲೆ ಮಾಡಿದ್ದಾಳೆ. ತಂದೆಯ ಬೆಂಬಲ, ಅಮ್ಮನ ತಾಳ್ಮೆಯ ಗುಣದಿಂದಾಗಿ ಇಂದು ಈಕೆ ಲೋಕ ವಿಖ್ಯಾತಿಗೆ ಪಾತ್ರಳಾಗಲು ಕಾರಣ. ಸಿಂಚನಾಳ ಯೋಗಸಾಧನೆಯ ಕುರಿತು ಕವನವೊಂದನ್ನು ವಾಚಿಸಿ ಗಮನ ಸೆಳೆದರು.

ಆಕಾಶವಾಣಿ ನಿವೃತ್ತ ಉದ್ಘೋಷಕ ಹಾಗೂ ಸಾಹಿತಿ ಸುಬ್ರಾಯ ಸಂಪಾಜೆ ಮಾತನಾಡಿ, ಇದೊಂದು ಅತ್ಯಂತ ಅಪೂರ್ವವಾದ ಕಾರ್ಯಕ್ರಮ ಮಾತ್ರವಲ್ಲ, ಇಡೀ ರಾಜ್ಯ ಮತ್ತು ದೇಶವೆ ಹೆಮ್ಮೆ ಪಡುವ ಘಳಿಗೆಯಾಗಿದೆ. ದೀಪಾ ಭಾಸ್ತಿ ಅವರು ಸಾಹಿತ್ಯಿಕ ನೆಲೆಯಲ್ಲಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರರಾಗಿದ್ದರೆ, ಪುಟಾಣಿ ಸಿಂಚನಾ ಯೋಗದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಸಾಧನೆ ಮಾಡಿರುವುದು ಸಂತಸವನ್ನು ಉಂಟುಮಾಡಿದೆ ಎಂದು ತಿಳಿಸಿ, ಬಿ.ಆರ್. ಜೋಯಪ್ಪ ಅವರು ಬರೆದ ಕವನ ‘ಸಿಂಚನ’ಕ್ಕೆ ರಾಗ ಮತ್ತು ಭಾವ ತುಂಬಿ ಹಾಡುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.

ಸಿಂಚನಾಳ ತಾಯಿ ರೇಣುಕಾ ಮಾತನಾಡಿ, ಗಿನ್ನಿಸ್ ವಿಶ್ವ ದಾಖಲೆಯ ಪ್ರಯತ್ನವನ್ನು ಮಗಳು ಸಿಂಚನಾ ನಡೆಸಿ ಯಶಸ್ವಿಯಾಗಿರುವುದು ಸಂತಸವನ್ನು ತಂದಿದೆ. ಯೋಗ ಕೇವಲ ಪ್ರದರ್ಶನಕ್ಕಷ್ಟೆ ಸೀಮಿತವಾಗಬಾರದು. ಆರೋಗ್ಯಕ್ಕಾಗಿ ಯೋಗ ಮಾಡಬೇಕಾಗಿದೆಯೆಂದು ಅಭಿಪ್ರಾಯಪಟ್ಟರು.

ಕೊಡಗು ಪತ್ರಕರ್ತರ ಸಂಘ ಅಧ್ಯಕ್ಷ ಮತ್ತು ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕ ಅನಿಲ್ ಎಚ್.ಟಿ. ಮಾತನಾಡಿ, ಮದೆನಾಡಿನಂಥ ಕೊಡಗಿನ ಪುಟ್ಟ ಗ್ರಾಮದವಳಾದ ಸಿಂಚನಾ ಯೋಗದಲ್ಲಿ ತನಗೆ ಇರುವ ಆಸಕ್ತಿಯನ್ನು ಸಾಕಷ್ಟು ಯೋಗಭ್ಯಾಸದ ಮೂಲಕ ಮುಂದುವರಿಸಿಕೊಂಡು ಇಂದು ವಿಶ್ವದಾಖಲೆ ಮಾಡುವ ಹಂತಕ್ಕೆ ತಲುಪಿರುವುದು ನಾಡಿಗೇ ಹೆಮ್ಮೆ ತಂದಿದೆ ಎಂದು ಶ್ಲಾಘಿಸಿದರು.

ಉಪನ್ಯಾಸಕಿ ಕೆ.ಜಯಲಕ್ಷ್ಮೀ ಪ್ರಾರ್ಥಿಸಿದರು. ಕೊಡಗು ಪತ್ರಕರ್ತರ ಸಂಘ ನಿರ್ದೇಶಕ ಕುಡೆಕಲ್ ಸಂತೋಷ್, ಯೋಗಪಟು ಸಿಂಚನಾಳ ಪರಿಚಯ ಮಾಡಿಕೊಟ್ಟರು. ಸಿಂಚನಾಳ ದಾಖಲೆಯ ಯೋಗ ಪ್ರದರ್ಶನಕ್ಕೆ ಯೋಗ ಪಟು ರಾಜೇಶ್ ಗುಪ್ತ, ವಾಂಡರಸ್ಸ್ ಕ್ಲಬ್‌ನ ಬಾಬು ಸೋಮಯ್ಯ, ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕ ಎಂ.ಧನಂಜಯ್, ಜಿ.ಆರ್. ರವಿ ಶಂಕರ್, ವಿಜಯಲಕ್ಷ್ಮೀ ಚೇತನ್, ಪತ್ರಕರ್ತರ ಸಂಘದ ಕ್ಷೇಮನಿಧಿಯ ಅಧ್ಯಕ್ಷ ಜಿ.ವಿ.ರವಿ ಕುಮಾರ್, ಕಾರ್ಯದರ್ಶಿ ಅರುಣ್ ಕೂರ್ಗ್‌, ಸಂಘದ ಖಜಾಂಚಿ ಟಿ.ಕೆ. ಸಂತೋಷ್, ನಿರ್ದೇಶಕರಾದ ಹನೀಫ್, ಲಕ್ಷ್ಮೀಶ್, ಪತ್ರಿಕಾಭವನ ಟ್ರಸ್ಟ್ ಪ್ರಧಾನ ಕಾಯದರ್ಶಿ ಎಸ್.ಜಿ.ಉಮೇಶ್, ಕುಶಾಲನಗರ ತಾಲೂಕು ಪತ್ರಕರ್ತರ ಸಂಘ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಹಾಜರಿದ್ದರು.

...................

ಹರ್ಷದ ಕ್ಷಣಗಳು!

ಡಿಂಬಾಸನ ಎಂಬ ಭಂಗಿಯಲ್ಲಿ ನಿರಂತರ 30 ನಿಮಿಷ 5 ಸೆಕೆಂಡ್‌ಗಳು ಸ್ಥಿರವಾಗಿ ನಿಲ್ಲುವ ಮೂಲಕ ಸಿಂಚನಾ ವಿಶ್ವದಾಖಲೆಗೆ ಸೇರ್ಪಡೆಯಾಗುತ್ತಿದ್ದಂತೆಯೇ ಮಡಿಕೇರಿಯ ಪತ್ರಿಕಾಭವನದಲ್ಲಿ ಹಾಜರಿದ್ದ ಆಹ್ವಾನಿತ ಗಣ್ಯರು, ಭಾವಪರವಶರಾಗಿ ಎದ್ದು ನಿಂತು ಚಪ್ಪಾಳೆ ತಟ್ಟುವ ಹರ್ಷೋದ್ಘಾರ ವ್ಯಕ್ತಪಡಿಸಿದರು.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!