ಗಜೇಂದ್ರಗಡ: ಸಮೀಪದ ಸೂಡಿ ಗ್ರಾಮದ ಜುಕ್ತಿ ಹಿರೇಮಠದ ೫೦ನೇ ವರ್ಷದ ನೂತನ ರಥ ಲೋಕಾರ್ಪಣೆ ಪ್ರಯುಕ್ತ ವೀರಶೈವ ಧರ್ಮದ ಪಂಚಪೀಠಾಧೀಶರ ಅಡ್ಡಪಲ್ಲಕ್ಕಿ ಮಹೋತ್ಸವವು ಭಾನುವಾರ ವಿಜೃಂಭಣೆಯಿಂದ ನಡೆಯಿತು.
ಮಾನವ ಧರ್ಮಕ್ಕೆ ಜಯವಾಗಲಿ ಎಂದು ಘೋಷಣೆ ಕೂಗಿದರು. ಪುಷ್ಪಾಲಂಕೃತಗೊಂಡ ಅಡ್ಡಪಲ್ಲಕ್ಕಿಯಲ್ಲಿ ಪಂಚಪೀಠಾಧೀಶರು ಆಸೀನರಾದರು. ಅಲ್ಲಿಂದ ಶುರುವಾದ ಅಡ್ಡಪಲಕ್ಕಿ ಮಹೋತ್ಸವ ಸುಮಾರು ೩ ಗಂಟೆಗಳ ಕಾಲ ನಡೆಯಿತು.ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ಅಡ್ಡಪಲ್ಲಕ್ಕಿ ಮಹೋತ್ಸವವು ಗ್ರಾಮದ ಪ್ರಮುಖ ಬೀದಿಗಳ ಮೂಲಕ ಜುಕ್ತಿ ಹಿರೇಮಠದವರೆಗೂ ತೆರಳಿತು. ಡೊಳ್ಳು ಕುಣಿತ, ಸುಮಂಗಲೆಯರ ಪೂರ್ಣಕುಂಭ, ಆರತಿಗಳೊಂದಿಗೆ ಸಂಭ್ರಮದಿಂದ ಜರುಗಿತು.ಅಡ್ಡಪಲಕ್ಕಿ ಮಹೋತ್ಸವದಲ್ಲಿ ನೂರಾರು ಭಕ್ತರು ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಜಯಘೋಷಗಳು ಕೂಗಿದರು. ಸಕಲ ಭಕ್ತರು ಪಂಚಪೀಠಾಧೀಶರಿಗೆ ನಮಸ್ಕರಿಸಿ ಧನ್ಯತಾಭಾವದಲ್ಲಿ ಮುಳುಗಿದರು. ವಿವಿಧ ಭಜನಾ ತಂಡಗಳು ಹಾಗೂ ಕುಂಭಹೊತ್ತ ಮಹಿಳೆಯರು ಮೇಳದೊಂದಿಗೆ ಸಾಗಿದರು.ಈ ವೇಳೆ ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಸ್ವಾಮೀಜಿ ಮಾತನಾಡಿ, ಸೂಡಿ ಗ್ರಾಮದಲ್ಲಿ
ಪ್ರಪ್ರಥಮವಾಗಿ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ವೈಭವದಿಂದ ನಡೆದಿದ್ದು, ಎಲ್ಲ ಭಕ್ತ ಮಂಡಳಿಗೆ ಹರುಷ ತಂದಿದೆ. ೫೦ ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಜಾತ್ರೆಯಲ್ಲಿ ಸುಂದರ ರಥ ನಿರ್ಮಾಣಗೊಂಡು ಲೋಕಾರ್ಪಣೆಗೊಳ್ಳುತ್ತಿರುವುದು ಸಂತೋಷದ ವಿಷಯ. ಜಗದ್ಗುರುಗಳ ಸೂಡಿ ಗ್ರಾಮಕ್ಕೆ ಹೀಗೆ ಆರ್ಶೀವಾದ ಇರಲಿ ಎಂದರು.ಇದಕ್ಕೂ ಮುನ್ನ ನಿವೃತ್ತ ಪೂಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಸಮಾರಂಭ ಉದ್ಘಾಟಿಸಿದರು. ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಶ್ರೀಗಳು, ಉಜ್ಜಯಿನಿ ಸಿದ್ದಲಿಂಗ ಶ್ರೀಗಳು, ಶ್ರೀಶೈಲದ ಡಾ. ಚನ್ನಸಿದ್ದರಾಮ ಶ್ರೀಗಳು, ಕಾಶಿಯ ಡಾ. ಚಂದ್ರಶೇಖರ ಶ್ರೀಗಳು, ಕಾಶಿಯ ಡಾ. ವಿಶ್ವಾರಾಧ್ಯ ಮಲ್ಲಿಕಾರ್ಜುನ ಭಗವತ್ಪಾದರು, ಸಿಂದಗಿ ಸಾರಂಗ ಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ, ಸಾನ್ನಿಧ್ಯ ವಹಿಸಿದ್ದರು. ಬನ್ನಿಕೊಪ್ಪದ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು.ಬಾದಾಮಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ, ಮಿಥುನ ಪಾಟೀಲ, ಚಂದ್ರು ಬಾಳಿಹಳ್ಳಿಮಠ, ಪ್ರಕಾಶ ಬೆಂಡಿಗೇರಿ, ವೀರಣ್ಣ ಶೆಟ್ಟರ, ವಿಜಯಕುಮಾರ ಮಾರನಬಸರಿ, ವೀರಣ್ಣ ಅಡಗತ್ತಿ ಸೇರಿ ಇತರರು ಇದ್ದರು.