ಕನ್ನಡಪ್ರಭ ವಾರ್ತೆ ಜಮಖಂಡಿ
ನಗರದ ಪೋಲೊ ಮೈದಾನದಲ್ಲಿ ಹುನ್ನೂರು ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಮೈದಾನದಲ್ಲಿ ಅತಿಥಿಗಳು ಹಾಗೂ ಕ್ರೀಡಾಕೂಟದ ನಿರ್ಣಾಯಕರಿಗಾಗಿ ಪ್ರತ್ಯೇಕವಾಗಿ ಪೆಂಡಾಲ್ ಅಳವಡಿಸಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಏಕಾಏಕಿ ಜೋರಾಗಿ ಗಾಳಿ ಬೀಸಿದ್ದು. ಪೆಂಡಾಲ್ ಕಿತ್ತು ಕೆಳಗೆ ಬಿದ್ದಿದೆ. ಪೆಂಡಾಲ್ ನೆಲಕ್ಕುರುಳುತ್ತಿದ್ದಂತೆ ಸ್ಥಳದಲ್ಲಿದ್ದ ವಿದ್ಯಾರ್ಥಿಗಳು, ಶಿಕ್ಷಕರು, ಅತಿಥಿಗಳು ಹಾಗೂ ಸಾರ್ವಜನಿಕರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಅದೃಷ್ಟವಶಾತ ಯಾವುದೇ ಹಾನಿ ಸಂಭವಿಸಿಲ್ಲ.ಪೆಂಡಾಲ್ ಕುಸಿದ ಸಂದರ್ಭದಲ್ಲಿ ಅದರ ಕೆಳಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇಲ್ಲದ ಕಾರಣ ಸಂಭವಿಸಬಹುದಾಗಿದ್ದ ದೊಡ್ಡ ಅಪಾಯವೊಂದು ತಪ್ಪಿದಂತಾಗಿದೆ.ಶಾಲಾ ಮಕ್ಕಳ ಕ್ರೀಡಾಕೂಟದಂತಹ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನೂರಾರು ವಿದ್ಯಾರ್ಥಿಗಳು, ಶಿಕ್ಷಕರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸುತ್ತಾರೆ. ಇಂತಹ ಸಂದರ್ಭದಲ್ಲಿ ತಾತ್ಕಾಲಿಕ ಪೆಂಡಾಲ್, ವೇದಿಕೆ, ಕುರ್ಚಿ ಹಾಗೂ ಇತರೆ ವ್ಯವಸ್ಥೆಗಳನ್ನು ಅಳವಡಿಸುವಾಗ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.