ಚಿಕ್ಕಮಗಳೂರು, ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಕುಮಾರಗಿರಿ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಪಂಗುನಿ ಉತ್ತಿರ ಜಾತ್ರೆ ಮತ್ತು ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಸಹಸ್ರಾರು ಭಕ್ತರು ಹಾಗೂ ವಧು-ವರರ ಕುಟುಂಬಸ್ಥರ ಸಮ್ಮುಖದಲ್ಲಿ ಶುಕ್ರವಾರ ವೈಭವದಿಂದ ಜರುಗಿತು.
ಕನ್ನಡಪ್ರಭ ವಾತೆರ್, ಚಿಕ್ಕಮಗಳೂರು
ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಕುಮಾರಗಿರಿ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಪಂಗುನಿ ಉತ್ತಿರ ಜಾತ್ರೆ ಮತ್ತು ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಸಹಸ್ರಾರು ಭಕ್ತರು ಹಾಗೂ ವಧು-ವರರ ಕುಟುಂಬಸ್ಥರ ಸಮ್ಮುಖದಲ್ಲಿ ಶುಕ್ರವಾರ ವೈಭವದಿಂದ ಜರುಗಿತು.ಪಂಗುನಿ ಉತ್ತಿರ ಜಾತ್ರೆ ಅಂಗವಾಗಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಅಭಿಷೇಕ, ವಿಶೇಷಪೂಜೆ, ಅಲಂಕಾರ ಮಾಡಲಾಯಿತು. ಕಾಲ್ನಡಿಗೆ ಹಾಗೂ ಟ್ರಾಕ್ಟರ್‌ಗಳ ಮೂಲಕ ಆಗಮಿಸಿದ ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು ಸಾಮೂಹಿಕವಾಗಿ ಕಾವಡಿ ಸಮರ್ಪಿಸಿದರು. ಶ್ರೀ ಸುಬ್ರಹ್ಮಣ್ಯ ಸ್ವಾಮಿ, ವಳ್ಳಿ, ದೇವಯಾನೆರವರ ಕಲ್ಯಾಣೋತ್ಸವ ನೆರವೇರಿತು.ಇದೇ ಸಂದರ್ಭ ದೇವಾಲಯ ಸಮಿತಿ ಹಮ್ಮಿಕೊಂಡಿದ್ದ ಸರಳ ಸಾಮೂಹಿಕ ವಿವಾಹದಲ್ಲಿ ಸುಮಾರು ೧೩ ನವಜೋಡಿಗಳಿಗೆ ವಸ್ತ್ರ, ಮಾಂಗಲ್ಯ, ಕಾಲುಂಗುರ ಹಾಗೂ ಸಂಸಾರಕ್ಕೆ ಅಗತ್ಯ ಪರಿಕರಗಳನ್ನು ಉಡುಗೊರೆಯಾಗಿ ನೀಡಿದರು. ಕುಟುಂಬಸ್ಥರ ಸಮ್ಮುಖದಲ್ಲಿ ನವಜೋಡಿಗಳು ಮಾಂಗಲ್ಯ ಧಾರಣೆ ನಡೆಸಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.ಅರ್ಚಕ ಶೇಷಾದ್ರಿ ಭಟ್ ನೇತೃತ್ವದ ತಂಡ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮಹಾ ಮಂಗಳಾರತಿ ನಂತರ ಸಾರ್ವಜನಿಕ ಅನ್ನದಾಸೋಹ ನಡೆಯಿತು.ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ ಮಾತನಾಡಿ ಆಡಂಬರದ ಮದುವೆ ಗಳು ನವ ಜೋಡಿ ಗಳಿಗೆ ಕೆಲ ಸಮಯ ಸಂತಸ ನೀಡುತ್ತದೆ. ಬಳಿಕ ಸಂಕಷ್ಟದ ಹಾದಿ ನೆನಪಿಸುತ್ತದೆ. ಮತ್ತೊಬ್ಬರನ್ನು ಅನುಕರಿಸಿ ಬಾಳುವುದ ಕ್ಕಿಂತ, ನಮ್ಮ ಶಕ್ತಿಗನುಸಾರ ಬದುಕಿದರೆ ನೆಮ್ಮದಿ ಹಾಗೂ ಶಾಂತಿ ಜೀವನ ನಮ್ಮದಾಗಲಿದೆ ಎಂದು ತಿಳಿಸಿದರು.ಆ ನಿಟ್ಟಿನಲ್ಲಿ ಕುಮಾರಗಿರಿ ದೇವಾಲಯ ಸಮಿತಿ ಬಡಕುಟುಂಬಕ್ಕೆ ಅನುಕೂಲವಾಗಲು ಸಕಲ ಸೌಲಭ್ಯ ನೀಡಿ ಸಾಮೂಹಿಕ ಮದುವೆಗಳನ್ನು ಹಮ್ಮಿಕೊಂಡು ಜನತೆ ಆಧಾರವಾಗಿದೆ. ನವ ಜೋಡಿಗಳು ಕೂಡಾ ಭಗವಂತನ ಸನ್ನಿದಾನದಲ್ಲಿ ಮಾಂಗಲ್ಯ ಧರಿಸಿದರೆ, ಸಕುಟುಂಬ ಪ್ರೀತಿ, ವಿಶ್ವಾಸದಿಂದ ಬಾಳುತ್ತಾರೆ ಎಂದರು.ಸಿಪಿಐ ರಾಜ್ಯ ಮಂಡಳಿ ಸದಸ್ಯ ಎಚ್.ಎಂ.ರೇಣುಕಾರಾಧ್ಯ ಮಾತನಾಡಿ ಲಕ್ಷಾಂತರ ರು.ಗಳನ್ನು ಸಾಲಮಾಡಿ ಮದುವೆ ಮಾಡಿಕೊಂಡು ಸುಳಿಯಲ್ಲಿ ಸಿಲುಕುವ ಬದಲು, ಈ ರೀತಿಯ ಸಾಮೂಹಿಕ ಕಲ್ಯಾಣದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಸಿದರೆ ಸಂತೋಷದಿಂದ ಕೂಡಿರುತ್ತದೆ ಎಂದು ಹೇಳಿದರು. ದೇವಾಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ವಿಜಯ್‌ಕುಮಾರ್ ಮಾತನಾಡಿ ಈ ಭಾಗದ ಸುತ್ತಮುತ್ತಲು ಹಲವಾರು ನಿವೇಶನ, ವಸತಿ ರಹಿತರಿದ್ದು ಮೂಲಹಕ್ಕು ಪತ್ರ ದೊರೆತಿಲ್ಲ. ಹೀಗಾಗಿ ಗಾಯತ್ರಿ ಶಾಂತೇಗೌಡರು ಮುಖ್ಯಮಂತ್ರಿ ಗಳೊಂದಿಗೆ ಚರ್ಚಿಸಿ ಹಕ್ಕುಪತ್ರ ವಿತರಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ತಮಿಳು ಸಂಘದ ಜಿಲ್ಲಾಧ್ಯಕ್ಷ ಜಿ.ರಘು, ಕಾರ್ಯದರ್ಶಿ ಎಸ್.ಅಣ್ಣವೇಲು, ದೇವಾ ಲಯ ಸಮಿತಿ ಅಧ್ಯಕ್ಷ ವಿ. ಗುಣಶೇಖರ್, ಗೌರವಾಧ್ಯಕ್ಷ ಶಂಕರ್, ಉಪಾಧ್ಯಕ್ಷರಾದ ಎ.ಮಹಾಲಿಂಗಂ, ಜಿ. ರಮೇಶ್, ಸಹ ಕಾರ್ಯದರ್ಶಿ ಅರಿವಳಗನ್, ಖಜಾಂಚಿ ಕೆ.ಕೃಷ್ಣರಾಜ್, ನಿರ್ದೇಶಕರಾದ ಜಿ.ಶಂಕರ್, ಗೋಪಾಲ್, ಸಿ.ವೆಂಕಟೇಶ್, ಮುರುಗನ್, ಪುವೆಂದಿರನ್, ಶಶಿಧರ್, ಮಣಿವೇಲು, ಚಿನ್ನಪ್ಪ, ಶಕ್ತಿವೇಲ್ ಮತ್ತಿತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.