ಕನ್ನಡಪ್ರಭ ವಾರ್ತೆ ಆಲೂರು
ಕಾನೂನು ಉಲ್ಲಂಘನೆ ಮಾಡಿದರೆ ದಂಡದ ಜೊತೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಆರ್. ಎಂ. ಮೋಹನ ರೆಡ್ಡಿ ವಿದ್ಯಾರ್ಥಿಗಳಿಗೆ ಎಚ್ಚರಿಸಿದರು.ಪಟ್ಟಣದ ಸರ್ಕಾರಿ ಪದವಿ ಕಾಲೇಜು ಸಭಾಂಗಣದಲ್ಲಿ ಹಾಸನದ ಎಂ. ಕೃಷ್ಣ ಕಾನೂನು ಕಾಲೇಜು, ತಾಲೂಕು ಪತ್ರಕರ್ತರ ಸಂಘ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಾಂಗ ರೂಪಿಸಿದ ಶಾಸನವನ್ನು ಕಾನೂನು ರೂಪಪದಲ್ಲಿ ಜಾರಿ ಮಾಡುವುದು ಶಾಸಕಾಂಗ. ಕಾನೂನು ಮೀರಿ ನಡೆದಾಗ ನ್ಯಾಯಾಂಗ ಶಿಕ್ಷೆ ನೀಡುತ್ತದೆ. "ದಡ್ಡನಿಗೆ ದೊಣ್ಣೆ ಪೆಟ್ಟು, ಬುದ್ಧಿವಂತನಿಗೆ ಮಾತಿನ ಪೆಟ್ಟು " ಎಂಬ ನಾಣ್ನುಡಿಯಂತೆ ತಪ್ಪುಗಳು ಮರುಕಳಿಸುತ್ತಿರಬಾರದು. ಲೋಕಾಯುಕ್ತ, ಭ್ರಷ್ಟಾಚಾರ ಮತ್ತು ಆರ್.ಟಿ.ಐ. ಕಾಯ್ದೆಗಳ ಬಗ್ಗೆ ಅರಿವು ಇಲ್ಲದಿದ್ದರೆ, ತಾವು ಮಾಡುವ ತಪ್ಪಿನ ಜೊತೆ ಮತ್ತೊಬ್ಬರೂ ಸಹ ತಪ್ಪು ಮಾಡುವ ಸಾಧ್ಯತೆ ಇರುತ್ತದೆ. ತಾವು ತಿಳಿದಿರುವ ಕಾನೂನು ಬಗ್ಗೆ ಇತರರಿಗೆ ತಿಳಿಸುವ ಕಾರ್ಯ ಅತ್ಯಂತ ಮಹತ್ವವಾದುದು ಎಂದರು.ಪತ್ರಕರ್ತ ಎಂ. ಪಿ. ಹರೀಶ್ ಮಾತನಾಡಿ, ಮಗು ಜನಿಸುವ ಮೊದಲು ತಾಯಿ ಗರ್ಭದಲ್ಲಿರುವಾಗಿನಿಂದಲೆ ಕಾನೂನಿಗೆ ಒಳಪಡುತ್ತದೆ. ತಿಳಿದು ಅಥವಾ ತಿಳಿಯದೆ ತಪ್ಪು ಮಾಡಿದರೂ ಕಾನೂನು ಶಿಕ್ಷಿಸುತ್ತದೆ. ಯುವಜನರು ಕೆಲ ಸಂದರ್ಭಗಳಲ್ಲಿ ಮೋಜಿಗೊಳಗಾಗಿ ತಾವು ಮಾಡುತ್ತಿರುವ ತಪ್ಪು ಅರಿಯದೆ ಶಿಕ್ಷೆಗೊಳಪಟ್ಟು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾಧಿಸಿದರು. ಪ್ರಾಂಶುಪಾಲ ಟಿ. ಪಿ. ಪುಟ್ಟರಾಜು ರವರು ಮಾತನಾಡಿದರು.
ಕಾನೂನು ವಿದ್ಯಾರ್ಥಿಗಳಾದ ಚಂದು ಲೋಕಾಯುಕ್ತ ಕಾಯ್ದೆ, ಹರ್ಷಿತಾ ಭ್ರಷ್ಟಾಚಾರ ಮತ್ತು ಹನುಮಂತು ಆರ್.ಟಿ.ಐ. ಕಾಯ್ದೆ ಬಗ್ಗೆ ಉಪನ್ಯಾಸ ನೀಡಿದರು. ಎಂ. ಸಿ. ಭೂಮಿಕ ಮತ್ತು ಹಂಸ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜು ಇಂಗ್ಲೀಷ್ ಮುಖ್ಯಸ್ಥರಾದ ಕೆ. ಎನ್. ರಮೇಶ್, ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಎನ್. ಮಾರುತಿ, ಎಂ. ಸಿ. ಭೂಮಿಕ ಮತ್ತು ಹಂಸ ಭಾಗವಹಿಸಿದ್ದರು.