ಕನ್ನಡಪ್ರಭ ವಾರ್ತೆ ಹೊಸಪೇಟೆ
ಫೈನಲ್ ಟೂರ್ನಿಯಲ್ಲಿ ಅಂತಿಮ ಘಟ್ಟಕ್ಕೆ ತಲುಪಿದ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಬಾಲಕಿಯರ ತಂಡಗಳು ಭಾರೀ ಸೆಣಸಾಟ ನಡೆಸಿದರೂ ಅಂತಿಮವಾಗಿ ತಂಡದ ನಾಯಕಿ ಸಾವಿತ್ರಿ ರಮೇಶ್ ಕರಿಗಾರ್ ಮುಂದಾಳತ್ವದಲ್ಲಿ ಬಿರುಸಿನ ಸ್ಪರ್ಧೆ ನೀಡಿದ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಮೂಡಬಿದರೆಯ ಆಳ್ವಾಸ್ ಪದವಿಪೂರ್ವ ಕಾಲೇಜು ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿ 2- 0 ನೇರ ಸೆಟ್‌ಗಳಿಂದ ಜಯಭೇರಿ ಬಾರಿಸಿತು.
ಬಾಲಕರ ಫೈನಲ್ ಪಂದ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆಯ ತಂಡದ ವಿರುದ್ಧ ಭಾರೀ ಪೈಪೋಟಿ ನೀಡಿದ ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ಪದವಿಪೂರ್ವ ಕಾಲೇಜಿನ ತಂಡದ ನಾಯಕ ಚರಣ್ ಎಸ್. ನೇತೃತ್ವದ ವಿದ್ಯಾರ್ಥಿಗಳು ಜಯಭೇರಿ ಬಾರಿಸಿದರು. ಬಾಲಕರ ವಿಭಾಗದಲ್ಲಿ 2-0 ನೇರ ಸೆಟ್‌ಗಳಿಂದ ಜಯಗಳಿಸಿದರು.ಸೆಮಿಫೈನಲ್:
ಅದೇ ರೀತಿ ಬಾಲಕರ ವಿಭಾಗದಲ್ಲಿ ಸೆಮಿಫೈನಲ್ ಟೂರ್ನಿಯಲ್ಲಿ ಕೊಪ್ಪಳ ತಂಡದ ವಿರುದ್ಧ 2-0 ಸೆಟ್‌ಗಳಿಂದ ದಕ್ಷಿಣ ಕನ್ನಡ ಜಿಲ್ಲೆ ತಂಡ ಜಯಭೇರಿ ಬಾರಿಸಿತು. ಬಾಗಲಕೋಟೆಯ ತಂಡದ ವಿರುದ್ಧ 2-0 ಸೆಟ್‌ಗಳಿಂದ ಚಿಕ್ಕಮಗಳೂರು ತಂಡ ಜಯಗಳಿಸಿತು.
ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಬಾಲಕರ ಹಾಗೂ ಬಾಲಕಿಯರ ತಂಡಗಳಿಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಫಾಲಾಕ್ಷ ಟಿ., ಟ್ರೋಫಿ, ಚಿನ್ನದ ಪದಕ ಹಾಗೂ ಪ್ರಮಾಣಪತ್ರ ವಿತರಿಸಿದರು.
ವಿಜಯನಗರ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ನಾಗರಾಜ್ ಹವಾಲ್ದಾರ್, ಕ್ರೀಡಾಕೂಟ ಹೊಣೆ ಹೊತ್ತುಕೊಂಡ ವಿಜ್ಞಾನ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಜಿ. ವಿದ್ಯಾಧರ ಹಾಗೂ ನಿರ್ದೇಶಕ ಸಾಗರ್ ಕೋದಂಡಪಾಣಿ, ಅಂಪೈರ್‌ಗಳಾಗಿ ಕರ್ತವ್ಯ ನಿರ್ವಹಿಸಿ ಹಿರಿಯ ದೈಹಿಕ ಶಿಕ್ಷಣ ನಿರ್ದೇಶಕರಾದ ಮಧುಕರ, ಶಿವಕುಮಾರ್, ವೆಂಕಟೇಶ್, ಪ್ರಶಾಂತ್, ಸಂತೋಷ ರೆಡ್ಡಿ ಹಾಗೂ ರಾಜ್ಯ ವೀಕ್ಷಕರನ್ನು ಸನ್ಮಾನಿಸಲಾಯಿತು.