1ನೇ ಕ್ಲಾಸ್‌ಗೆ 6 ವರ್ಷ: ಪೋಷಕರ ಕಿಡಿ

KannadaprabhaNewsNetwork |  
Published : May 23, 2024, 01:04 AM ISTUpdated : May 23, 2024, 10:22 AM IST
Government School

ಸಾರಾಂಶ

ರಾಜ್ಯದಲ್ಲಿ ಎಲ್‌ಕೆಜಿ ದಾಖಲಾತಿಗೆ ಚಾಲ್ತಿಯಲ್ಲಿರುವ ಹಾಗೂ 1ನೇ ತರಗತಿ ದಾಖಲಾತಿಗೆ ಮುಂದಿನ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ಸರ್ಕಾರ ನಿಗದಿಪಡಿರುವ ವಯೋಮಿತಿ ಅವೈಜ್ಞಾನಿಕವಾಗಿದ್ದು, ಇದನ್ನು ಬದಲಾವಣೆ ಮಾಡಬೇಕು ಎಂಬ ಆಗ್ರಹ ಪೋಷಕರ ವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.

  ಬೆಂಗಳೂರು: ರಾಜ್ಯದಲ್ಲಿ ಎಲ್‌ಕೆಜಿ ದಾಖಲಾತಿಗೆ ಚಾಲ್ತಿಯಲ್ಲಿರುವ ಹಾಗೂ 1ನೇ ತರಗತಿ ದಾಖಲಾತಿಗೆ ಮುಂದಿನ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ಸರ್ಕಾರ ನಿಗದಿಪಡಿರುವ ವಯೋಮಿತಿ ಅವೈಜ್ಞಾನಿಕವಾಗಿದ್ದು, ಇದನ್ನು ಬದಲಾವಣೆ ಮಾಡಬೇಕು ಎಂಬ ಆಗ್ರಹ ಪೋಷಕರ ವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.

ಎಲ್‌ಕೆಜಿ ದಾಖಲಾತಿಗೆ ಆಯಾ ಶೈಕ್ಷಣಿಕ ವರ್ಷದ ಜೂನ್‌ 1ಕ್ಕೆ ಕಡ್ಡಾಯವಾಗಿ 4 ವರ್ಷ ಪೂರ್ಣಗೊಂಡಿರಬೇಕೆಂದು 2023-24ನೇ ಸಾಲಿನಿಂದಲೇ ಜಾರಿಗೊಳಿಸಲಾಗಿದೆ. ಅದೇ ರೀತಿ 1ನೇ ತರಗತಿ ಪ್ರವೇಶಕ್ಕೆ 2025-26ನೇ ಸಾಲಿನಿಂದ ಆಯಾ ಸಾಲಿನ ಜೂನ್‌ 1ಕ್ಕೆ 6 ವರ್ಷ ಪೂರ್ಣಗೊಂಡಿರಬೇಕೆಂದು ಆದೇಶಿಸಲಾಗಿದೆ. 

ಈ ಅವೈಜ್ಞಾನಿಕ ನಿರ್ಧಾರದಿಂದ ನಿಗದಿತ ವಯೋಮಿತಿಗೆ ಒಂದು ದಿನ ಕಡಿಮೆ ಆದರೂ ಮಕ್ಕಳೂ ದಾಖಲಾತಿ ವಂಚಿತರಾಗುತ್ತಿದ್ದಾರೆ. ಇದನ್ನು ಸರ್ಕಾರ ಹೇಗೆ ಸಮರ್ಥಿಸಿಕೊಳ್ಳುತ್ತದೆ ತಿಳಿಸಬೇಕು. ಅಂತಹ ಮಕ್ಕಳು ಅನಗತ್ಯವಾಗಿ ಒಂದು ವರ್ಷ ಶಾಲಾ ಪ್ರವೇಶದಿಂದ ವಂಚಿತರಾಗುವುದನ್ನು ತಡೆಯಲು ನಿಗದಿತ ವಯೋಮಿತಿಯಲ್ಲಿ ಕೆಲ ತಿಂಗಳ ಸಡಿಲ ಅಥವಾ ವಿನಾಯಿತಿ ನೀಡಬೇಕೆಂದು ಪೋಷಕರು ಒತ್ತಾಯಿಸುತ್ತಿದ್ದಾರೆ.

ಮಕ್ಕಳ ದಾಖಲಾತಿಗಾಗಿ ಶಾಲೆಗಳಿಗೆ ಎಡತಾಕುತ್ತಿರುವ ಅನೇಕ ಪೋಷಕರು ಸರ್ಕಾರದ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಕಂಡುಬರುತ್ತಿದೆ. ವಯೋಮಿತಿ ಇಲ್ಲದಿದ್ದರೂ ಎಲ್‌ಕೆಜಿ ಮತ್ತು 1ನೇ ತರಗತಿಗೆ ಮಕ್ಕಳ ದಾಖಲಾತಿಗೆ ಒತ್ತಾಯಿಸುತ್ತಿದ್ದಾರೆ. ಹಿಂದಿನ ತರಗತಿಗೆ ದಾಖಲಿಸಲು ಒಪ್ಪುತ್ತಿಲ್ಲ ಎನ್ನುವುದು ಖಾಸಗಿ ಶಾಲಾ ಪ್ರತಿನಿಧಿಗಳ ಹೇಳಿಕೆಯಾಗಿದೆ.

ವಯೋಮಿತಿ ಸಡಿಲಿಕೆ ಸುಳ್ಳು:ಈ ಮಧ್ಯೆ, ಕೆಲ ಶಾಲೆಗಳು ಎಲ್‌ಕೆಜಿಗೆ 4 ವರ್ಷ ಪೂರ್ಣಗೊಳ್ಳದಿರುವ ಮಕ್ಕಳನ್ನೂ ಸುಳ್ಳು ಮಾಹಿತಿ ನೀಡಿ ದಾಖಲಿಸಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಮಕ್ಕಳಿಗೆ 4 ವರ್ಷ ಪೂರ್ಣಗೊಳ್ಳಲು ಒಂದು ತಿಂಗಳು ಕಡಿಮೆ ಇದ್ದರೂ ಎಲ್‌ಕೆಜಿಗೆ ದಾಖಲಾತಿ ಮಾಡಿಕೊಳ್ಳಬಹುದು ಎಂದು ಮೌಖಿಕವಾಗಿ ಹೇಳಿದ್ದಾರೆ.

ಮುಂದೆ ಈ ಬಗ್ಗೆ ಅಧಿಕಾರ ಆದೇಶವಾಗಲಿದೆ ಎಂದು ಸುಳ್ಳು ಮಾಹಿತಿ ನೀಡಿ ಖಾಸಗಿ ಶಾಲೆಗಳಲ್ಲಿ ದಾಖಲಾತಿ ನೀಡಲಾಗುತ್ತಿದೆ.ಎಲ್‌ಕೆಜಿ, ಯುಕೆಜಿ ಪ್ರವೇಶ ದಾಖಲಾತಿ ಬಗ್ಗೆ ಇಲಾಖೆಯ ವೆಬ್‌ಪೋರ್ಟಲ್‌ನಲ್ಲಿ ಮಾಹಿತಿ ದಾಖಲಿಸುವಂತಿಲ್ಲ. 1ನೇ ತರಗತಿಗೆ ದಾಖಲಾದ ಮಕ್ಕಳ ಹೆಸರು, ವಯಸ್ಸು ಇನ್ನಿತರೆ ಮಾಹಿತಿ ದಾಖಲಿಸಬೇಕು. ಹಾಗಾಗಿ ಎಲ್‌ಕೆಜಿಗೆ ಮಕ್ಕಳ ಪ್ರವೇಶ ಹೆಚ್ಚಿಸಿಕೊಳ್ಳಲು ಪೋಷಕರನ್ನು ಶಾಲೆಗಳು ದಾರಿ ತಪ್ಪಿಸುತ್ತಿವೆ. ಇದಕ್ಕೆ ಪೋಷಕರು ಮಾರುಹೋಗಬಾರದು. ವಯೋಮಿತಿ ವಿನಾಯಿತಿ ಬಗ್ಗೆ ಯಾವುದೇ ಮೌಖಿಕ ಸೂಚನೆಯನ್ನೂ ಇಲಾಖೆಯಿಂದ ನೀಡಿಲ್ಲ. ಸರ್ಕಾರದಲ್ಲೂ ಆ ಬಗ್ಗೆ ಚಿಂತನೆ ಇಲ್ಲ ಎನ್ನುತ್ತಾರೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು.

PREV

Recommended Stories

ಅಶೋಕ್ ನೇತೃತ್ವದಲ್ಲಿ ಟನಲ್ ರಸ್ತೆ ಸಮಿತಿ ರಚನೆಗೆ ಸಿದ್ಧ: ಡಿಕೆಶಿ
ನೀವು ಬೆಳಗಾವಿ ಕೇಳಿದ್ರೆ, ನಾವು ಮುಂಬೈ ಕೇಳಬೇಕಾಗುತ್ತೆ