ಚಿಕ್ಕಮಗಳೂರುಶಾಲಾ ಬಸ್‌ನಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವ ಫೋಷಕರೇ ಹುಷಾರ್.. ಚಿಕ್ಕಮಗಳೂರು ಜಿಲ್ಲಾದ್ಯಂತ ಬರೋಬ್ಬರಿ ಒಂದು ನೂರಕ್ಕೂ ಅಧಿಕ ಶಾಲಾ ಬಸ್‌ಗಳು ಎಫ್‌ಸಿ (ಫಿಟ್‌ನೆಸ್ ಸರ್ಟಿಫಿಕೇಟ್) ಇಲ್ಲದೇ ಓಡಾಟ ನಡೆಸುತ್ತಿವೆ.
ಎಫ್‌ಸಿ ಇಲ್ಲದೇ ಬಹುತೇಕ ಶಾಲಾ ಬಸ್‌ಗಳು ಸಂಚಾರ । ಆಡಳಿತ ಮಂಡಳಿ ಎಫ್‌ಸಿ ಮಾಡಿಸದೇ ವಾಹನಗಳನ್ನು ಪ್ರತಿ ದಿನ ಬಳಸುವ ಮೂಲಕ ಮಕ್ಕಳ ಜೀವನದೊಂದಿಗೆ ಚಲ್ಲಾಟ
ವಿಶ್ವನಾಥ ಮಲೇಬೆನ್ನೂರು
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಶಾಲಾ ಬಸ್‌ನಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವ ಫೋಷಕರೇ ಹುಷಾರ್.. ಚಿಕ್ಕಮಗಳೂರು ಜಿಲ್ಲಾದ್ಯಂತ ಬರೋಬ್ಬರಿ ಒಂದು ನೂರಕ್ಕೂ ಅಧಿಕ ಶಾಲಾ ಬಸ್‌ಗಳು ಎಫ್‌ಸಿ (ಫಿಟ್‌ನೆಸ್ ಸರ್ಟಿಫಿಕೇಟ್) ಇಲ್ಲದೇ ಓಡಾಟ ನಡೆಸುತ್ತಿವೆ.
ಹೌದು.. ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಲವು ಶಾಲೆಗಳು ಮಕ್ಕಳನ್ನು ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಕೊಂಡೊಯ್ಯುವ ಕೆಲಸ ಮಾಡಲಾಗುತ್ತದೆ. ಆದರೆ, ಅಂತಹ ಬಹುತೇಕ ಶಾಲಾ ಬಸ್‌ಗಳು ಈಗಾಗಲೇ ಎಫ್‌ಸಿ ಇಲ್ಲದೇ ಸಂಚಾರ ಮಾಡುತ್ತಿವೆ.
ಜಿಲ್ಲೆಯ ಚಿಕ್ಕಮಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ಹಾಗೂ ತರೀಕೆರೆ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಸುಮಾರು 600ಕ್ಕೂ ಅಧಿಕ ಶಾಲಾ ವಾಹನ (ಬಸ್) ನೋಂದಣಿ ಆಗಿವೆ. ಈ ಪೈಕಿ ಬರೋಬ್ಬರಿ ಒಂದು ನೂರಕ್ಕೂ ಅಧಿಕ ಶಾಲಾ ಬಸ್‌ಗಳ ಸಂಚಾರ ಅವಧಿ ಮುಕ್ತಾಯಗೊಂಡಿದೆ.
ಸಾರಿಗೆ ಇಲಾಖೆಯಿಂದ ಬಸ್‌ನ ಫಿಟ್‌ನೆಸ್ ಪರೀಕ್ಷೆ ಮಾಡಿಕೊಂಡು ಓಡಾಟ ಮಾಡಬೇಕಿದೆ. ಆದರೆ, ಶಾಲೆ ಗಳ ಆಡಳಿತ ಮಂಡಳಿ ಎಫ್‌ಸಿ ಮಾಡಿಸದೇ ವಾಹನಗಳನ್ನು ಪ್ರತಿ ದಿನ ಬಳಸುವ ಮೂಲಕ ಮಕ್ಕಳ ಜೀವನದೊಂದಿಗೆ ಚಲ್ಲಾಟವಾಡುತ್ತಿವೆ.
ಯಾವುದೇ ಪೋಷಕರು ಪ್ರತಿ ಸಲ ಬಸ್ ಚಾಲಕರಿಂದ ಎಫ್‌ಸಿ ಅಥವಾ ವಾಹನ ಸಂಬಂಧಿ ಇನ್ನಿತರ ಮಾಹಿತಿ ಕೇಳಲಾಗದು. ಅದು ಆಯಾ ಶಾಲೆಗಳ ಆದ್ಯ ಜವಾಬ್ದಾರಿಯಾಗಿದೆ. ಆದರೂ ಪ್ರಸ್ತುತ ವಿವಿಧ ಶಿಕ್ಷಣ ಸಂಸ್ಥೆಗಳ ಬಸ್‌ಗಳ ಎಫ್‌ಸಿ ಮುಗಿದು ಹಲವು ತಿಂಗಳುಗಳಾದರೂ ಅದನ್ನು ನವೀಕರಿಸುವ ಗೋಜಿಗೆ ಹೋಗಿಲ್ಲ ಎಂಬುದು ಮುಖ್ಯವಾಗಿ ಗಮನಿಸಬೇಕಾದ ಸಂಗತಿಯಾಗಿದೆ.
ಬಸ್‌ಗಳಲ್ಲಿಲ್ಲ ಜಿಪಿಎಸ್:
ಶಾಲಾ ವಾಹನಗಳಲ್ಲಿ ಕಡ್ಡಾಯವಾಗಿ ಜಿಪಿಎಸ್ ಮತ್ತು ಸ್ಪೀಡ್ ಗವರ್ನರ್ ಅಳವಡಿಸಬೇಕೆಂಬ ನಿಯಮವಿದೆ. ಆದರೆ, ಜಿಲ್ಲೆಯಲ್ಲಿನಿತ್ಯ ಓಡಾಡುವ ಅದೆಷ್ಟೋ ಶಾಲಾ ವಾಹನಗಳು ಈ ನಿಯಮ ಗಾಳಿಗೆ ತೂರುತ್ತಿವೆ. ಹೀಗಾಗಿ, ಪರವಾನಗಿ ನವೀಕರಣಕ್ಕೆ ಅರ್ಜಿಯನ್ನೇ ಸಲ್ಲಿಸುತ್ತಿಲ್ಲ.
ಶಾಲಾ ಆಡಳಿತವೇ ಹೊಣೆ: ಶಾಲಾ ಬಸ್‌ಗಳ ಸಂಚಾರಕ್ಕೆ 15 ವರ್ಷ ಮಾತ್ರ ಅವಕಾಶವಿದ್ದು, ನಂತರ ರಸ್ತೆಗೆ ಇಳಿಯಬೇಕಾದರೆ ಅದ ಕ್ಕಾಗಿ ಆ ವಾಹನದ ಫಿಟ್‌ನೆಸ್ ಪ್ರಮಾಣ ಪತ್ರ ಆರ್‌ಟಿಒ ಕಚೇರಿಯಿಂದ ಪಡೆಯಬೇಕಾಗುತ್ತದೆ. ಮೊದಲ 15 ವರ್ಷದ ಅವಧಿಯಲ್ಲಿ ಏನಾದರೂ ಹಾಳಾಗಿದ್ದಲ್ಲಿ, ಬಸ್‌ನಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ, ಫಿಟ್ ನೆಸ್ ವೇಳೆ ಪೂರ್ಣ ರಿಪೇರಿ ಮಾಡಿ ಪ್ರಮಾಣ ಪತ್ರ ಪಡೆಯಲಾಗುತ್ತದೆ.
ಆದರೆ, ಆರ್‌ಟಿಒಗೆ ಅರ್ಜಿ ಸಲ್ಲಿಸದೇ ಎಫ್‌ಸಿ ಪಡೆಯದೇ ಓಡಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮಕ್ಕಳನ್ನು ಕರೆದೊಯ್ಯುವಾಗ ಬಸ್ ಅಪಘಾತಕ್ಕೀಡಾದರೆ, ಅದರ ಪೂರ್ಣ ಜವಾಬ್ದಾರಿಯನ್ನು ಆಯಾ ಶಾಲಾ ಆಡಳಿತ ಮಂಡಳಿ ಅಥವಾ ಬಸ್ ಮಾಲೀಕರು ಹೊರಬೇಕಾಗುತ್ತದೆ. ಅಪಘಾತ ಪರಿಹಾರ ಸಹ ತುರ್ತಾಗಿ ಕುಟುಂಬಕ್ಕೆ ಸಿಗುವುದಿಲ್ಲ. ಈ ಎಲ್ಲ ಸೂಕ್ಷ್ಮತೆಗಳ ಕಡೆಗೆ ಆಯಾ ಶಾಲೆಗಳು ಗಮನ ಹರಿಸಬೇಕು. ಇಲ್ಲದಿದ್ದರೆ ಸಂಭಾವ್ಯ ಅಪಘಾತಗಳಿಗೆ ಅವುಗಳೇ ಹೊಣೆಯಾಗಲಿವೆ.
-- ಬಾಕ್ಸ್--
ನೋಟಿಸ್ ನೀಡಿ ಸುಮ್ಮನಾದ ಆರ್‌ಟಿಒ!
ಚಿಕ್ಕಮಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ವ್ಯಾಪ್ತಿಗೆ ಬರುವ ಚಿಕ್ಕಮಗಳೂರು, ಕೊಪ್ಪ, ಮೂಡಿಗೆರೆ, ಕಳಸ, ಎನ್.ಆರ್.ಪುರ ಹಾಗೂ ಶೃಂಗೇರಿ ವ್ಯಾಪ್ತಿಯಲ್ಲಿ ಸದ್ಯ 45 ಶಾಲಾ ವಾಹನಗಳಿಗೆ ಎಫ್‌ಸಿ ಇಲ್ಲ. ಇನ್ನೂ ತರೀಕೆರೆ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ವ್ಯಾಪ್ತಿಯ ತರೀಕೆರೆ, ಕಡೂರು ಹಾಗೂ ಅಜ್ಜಂಪುರ ತಾಲೂಕಿನ 57 ಶಾಲಾ ವಾಹನಗಳು ಎಫ್‌ಸಿ ಮುಕ್ತಾಯವಾಗಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿ ಸುಮ್ಮನಾಗಿದ್ದು, ಎಫ್‌ಸಿ ಮುಗಿದ ವಾಹನಗಳ ಓಡಾಟ ತಡೆಯುವ ಗೋಜಿಗೆ ಹೋಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿವೆ.
--- ಕೋಟ್ ------ಎಫ್‌ಸಿ ಇಲ್ಲದ ಶಾಲಾ ವಾಹನಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಜತೆಗೆ, ಶಾಲೆ ನವೀಕರಣಕ್ಕೆ ಅರ್ಜಿ ಹಾಕಿದ ಶಾಲಾಗಳ ವಾಹನಗಳ ಕುರಿತು ಪರಿಶೀಲನೆ ನಡೆಸಿ ಅನುಮತಿ ನೀಡುವಂತೆ ಕ್ಷೇತ್ರ ಶಿಕ್ಷಣಾಧಿ ಕಾರಿಗಳಿಗೆ ತಿಳಿಸಲಾಗಿದೆ. ಜತೆಗೆ, ತಪಾಸಣೆ ವೇಳೆ ಎಫ್ ಸಿ ಇಲ್ಲದ ವಾಹನ ಕಂಡು ಬಂದರೆ ಸೀಜ್ ಮಾಡಲಾಗುತ್ತಿದೆ.
- ರಾಕೇಶ್, ಪ್ರಾದೇಶಿಕ ಸಾರಿಗೆ ಅಧಿಕಾರಿ, ಚಿಕ್ಕಮಗಳೂರು ವಿಭಾಗ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.