ಸರ್ಕಾರಿ ಶಾಲೆಗಳ ಉಳಿವು, ಬಲವರ್ಧನೆಗೆ ಪೋಷಕರ ಸಹಕಾರ ಮುಖ್ಯ: ಡಾ.ಗಂಗಾಧರ್

KannadaprabhaNewsNetwork |  
Published : Jun 26, 2026, 01:45 AM IST
25ಕೆಎಂಎನ್ ಡಿ11 | Kannada Prabha

ಸಾರಾಂಶ

ಇಂಗ್ಲಿಷ್ ವ್ಯಾಮೋಹ ಹಾಗೂ ಸ್ಥಾನಮಾನಗಳಿಗಾಗಿ ಪೋಷಕರು ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ. ಇದನ್ನು ನಿಲ್ಲಿಸಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವ ಮೂಲಕ ಪೋಷಕರು ಹೆಚ್ಚು ಸಹಕರಿಸಿದರೆ ಸರ್ಕಾರಿ ಶಾಲೆ ಉಳಿವಿಗೆ ದಾನಿಗಳು ಮುಂದಾಗುತ್ತಾರೆ

ಕನ್ನಡಪ್ರಭ ವಾರ್ತೆ ಪಾಂಡವಪುರ

ಸರ್ಕಾರಿ ಶಾಲೆಗಳ ಉಳಿವು, ಬಲವರ್ಧನೆಗೆ ಶಿಕ್ಷಕರು, ದಾನಿಗಳ ಸಹಕಾರದ ಜೊತೆಗೆ ಪೋಷಕರ ಸಹಕಾರ ಕೂಡ ಅತಿ ಮುಖ್ಯ ಎಂದು ಶರದಿಂಧು ಡಾ.ಗಂಗಾಧರ್ ಹೇಳಿದರು.ತಾಲೂಕಿನ ಡಾಮಡಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ಬಾಲ ಭೈರವೇಶ್ವರ ಎಜುಕೇಷನಲ್ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ, ಸಮಾಜ ಸೇವಕ, ವಕೀಲರಾದ ಅರವಿಂದ ರಾಘವನ್ ಅವರಿಂದ ಕೊಡ ಮಾಡಲಾದ ಲ್ಯಾಪ್ ಟಾಪ್ ವಿತರಿಸಿ ಮಾತನಾಡಿದರು.

ಇಂಗ್ಲಿಷ್ ವ್ಯಾಮೋಹ ಹಾಗೂ ಸ್ಥಾನಮಾನಗಳಿಗಾಗಿ ಪೋಷಕರು ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ. ಇದನ್ನು ನಿಲ್ಲಿಸಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವ ಮೂಲಕ ಪೋಷಕರು ಹೆಚ್ಚು ಸಹಕರಿಸಿದರೆ ಸರ್ಕಾರಿ ಶಾಲೆ ಉಳಿವಿಗೆ ದಾನಿಗಳು ಮುಂದಾಗುತ್ತಾರೆ ಎಂದರು.

ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಬಹಳ ಬುದ್ಧಿವಂತರಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಓದಿದವರೇ ಐಎಎಸ್, ಐಪಿಎಸ್ ಅಂತಹ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ ಎಂದರು.

ಬಿಇಒ ಧರ್ಮಶೆಟ್ಟಿ ಮಾತನಾಡಿ, ತಾಲೂಕಿನಲ್ಲಿ 43 ಶಿಕ್ಷಕ ಹುದ್ದೆಗಳು ಖಾಲಿ ಇವೆ. ಹೀಗಾಗಿ ಮಕ್ಕಳ ಸಂಖ್ಯೆಗನುಗುಣವಾಗಿ ಶಾಲೆಗಳಲ್ಲಿ ನಿಯಾನುಸಾರ ಶಿಕ್ಷಕರನ್ನು ನಿಯೋಜನೆ ಮಾಡಬೇಕಿದೆ. ಆದ್ದರಿಂದ ಡಾಮಡಹಳ್ಳಿ ಶಾಲೆಯಲ್ಲಿ ಹೆಚ್ಚುವರಿಯಾಗಿ 5 ವಿದ್ಯಾರ್ಥಿಗಳನ್ನು ದಾಖಲಿಸಿದರೆ ಈ ಶಾಲೆ ಶಿಕ್ಷಕಿ ಡಿ.ಎಸ್.ವಿಜಯಲಕ್ಷ್ಮಿ ಅವರನ್ನು ಬೇರೆ ಶಾಲೆಗೆ ನಿಯೋಜನೆ ಮಾಡುವುದಿಲ್ಲ ಎಂದರು.

ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್ ಮಾತನಾಡಿ, ತಾಲೂಕಿನಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸುವ ಉದ್ದೇಶದಿಂದ ಸಮಾಜ ಸೇವಕರಾದ ಅರವಿಂದ ರಾಘವನ್ ಹಾಗೂ ಶರದಿಂಧು ಡಾ.ಗಂಗಾಧರ್ ಅವರು ಹಲವಾರು ಶಾಲೆಗಳಿಗೆ ಸಾಕಷ್ಟು ಅನುದಾನಗಳನ್ನು ನೀಡುವ ಮೂಲಕ ಮಕ್ಕಳ ಕೊರತೆಯಿಂದ ಬಾಗಿಲು ಮುಚ್ಚಬೇಕಾದ ಎಷ್ಟೋ ಶಾಲೆಗಳು ಉಳಿಯುವಂತಾಗಿದೆ ಎಂದರು.

ಸ್ಥಳೀಯರು ತಮ್ಮ ಕೈಲಾದ ಹಣ ನೀಡಿ ಸಹಕರಿಸಿದರೆ ಅರವಿಂದ ರಾಘವನ್ ಕೂಡ ಇನ್ನೂ ಹೆಚ್ಚಿನ ಹಣ ನೀಡಲಿದ್ದಾರೆ. ಆ ಹಣದಿಂದ ವಿದ್ಯಾರ್ಥಿಗಳಿಗೆ ಮತ್ತಷ್ಟು ಸೌಲಭ್ಯ-ಸಲಕರಣೆಗಳನ್ನು ಒದಗಿಸಲು ಸಾಧ್ಯವಾಗಲಿದೆ ಎಂದರು.

ಈ ವೇಳೆ ಪ್ರಭಾರ ಮುಖ್ಯ ಶಿಕ್ಷಕಿ ಸಿ.ಆರ್.ಲತಾ, ಸಹ ಶಿಕ್ಷಕರಾದ ಕೆ.ಆರ್.ನಾಗವೇಣಿ, ಡಿ.ಎಸ್.ವಿಜಯಲಕ್ಷ್ಮೀ, ನಿವೃತ್ತ ಶಿಕ್ಷಕ ಮಹದೇವೇಗೌಡ, ಎಸ್ ಡಿಎಂಸಿ ಅಧ್ಯಕ್ಷ ಕುಮಾರ, ಸದಸ್ಯ ಡಿ.ಕೆ.ಕೇಶವ, ಗ್ರಾಮದ ಮುಖಂಡರಾದ ಹೇಮಂತ್, ಪ್ರಕಾಶ್, ಸುರೇಶ್, ಸೋಮ, ಮಿಲನ್, ಪತ್ರಕರ್ತ ಎನ್.ಕೃಷ್ಣೇಗೌಡ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಯನ್ಸ್ ಸಂಸ್ಥೆಗೆ ಪ್ರಚಾರ ವಾಹನ ಹಸ್ತಾಂತರ
ಸರ್ಕಾರಿ ಶಾಲಾ ಹಳೆಯ ದಾಖಲೆಗಳ ಡಿಜಿಟಲೀಕರಣಕ್ಕೆ ಆಗ್ರಹ